ಪಾಪ್ ಕಾರ್ನ್ ಮೆಕ್ಕೆಜೋಳ; ರೈತರ ನಿರಾಸಕ್ತಿ

ಪಾಪ್ ಕಾರ್ನ್ ಮೆಕ್ಕೆಜೋಳ; ರೈತರ ನಿರಾಸಕ್ತಿ

ಪಾಪ್ ಕಾರ್ನ್ ಮೆಕ್ಕೆಜೋಳ; ರೈತರ ನಿರಾಸಕ್ತಿ

ಸಂತೇಬೆನ್ನೂರು: ಹೋಬಳಿಯ 2,400 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಪಾಪ್‌ಕಾರ್ನ್ ಮೆಕ್ಕೆಜೋಳದ ಬೆಳೆ, ಈ ಬಾರಿ 50 ಹೆಕ್ಟೇರ್‌ಗಿಂತಲೂ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ವಾತಾವರಣದಲ್ಲಿನ ಬದಲಾವಣೆ, ವೈಜ್ಞಾನಿಕ ಸಂಸ್ಕರಣೆಯ ಸಮಸ್ಯೆ ಹಾಗೂ ಬೆಲೆಯ ಏರಿಳಿತಗಳಿಂದಾಗಿ ಕೃಷಿಕರು ಇದರಿಂದ ವಿಮುಖರಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಸಂತೇಬೆನ್ನೂರು ಹೋಬಳಿಯು ಪಾಪ್‌ಕಾರ್ನ್ ಬೆಳೆಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಪ್ರತಿ ಕ್ವಿಂಟಲ್‌ಗೆ ₹ 9,000ದವರೆಗೆ ತಲುಪುತ್ತಿದ್ದ ದರ, ಕೆಲವೊಮ್ಮೆ ₹ 3,000ಕ್ಕಿಂತಲೂ ಕಡಿಮೆಯಾಗಿತ್ತು. ಈ ವರ್ಷದ ಏಪ್ರಿಲ್–ಮೇ ತಿಂಗಳಲ್ಲಿ ಪ್ರತಿ ಕ್ವಿಂಟಲ್ ಪಾಪ್‌ಕಾರ್ನ್ ದರ ₹ 2,700ರ ಆಸುಪಾಸಿನಲ್ಲಿತ್ತು. ಹೀಗಾಗಿ ರೈತರು ಈ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಮೇ ಅಂತ್ಯದಲ್ಲಿ ರೋಹಿಣಿ ಮಳೆ ಕೈಕೊಟ್ಟ ಪರಿಣಾಮ ಪಾಪ್‌ಕಾರ್ನ್ ಬಿತ್ತನೆಗೆ ಹಿನ್ನಡೆಯಾಯಿತು.

ಕೆಲವು ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಪಾಪ್‌ಕಾರ್ನ್ ಬಿತ್ತನೆ ಮಾಡಿದ್ದಾರೆ. ಸದ್ಯ ತೆನೆ ಮುರಿದು ಒಣಗಿಸುವ ಕಾಯಕ ನಡೆಯುತ್ತಿದೆ.

‘ಐದು ಎಕರೆಯಲ್ಲಿ ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆದಿದ್ದೆ. ಮಳೆಯ ಕಣ್ಣಾಮುಚ್ಚಾಲೆಯಿಂದ ಇಳುವರಿ ಕುಸಿದಿದೆ. ಪ್ರತಿ ಎಕರೆಗೆ 4 ಕ್ವಿಂಟಲ್ ಇಳುವರಿ ಲಭ್ಯವಾಗುವ ಸಾಧ್ಯತೆಯಿದೆ. ಕೊಳವೆಬಾವಿ ಮೂಲಕ ನೀರು ಪೂರೈಸಿದ ಹೊಲಗಳಲ್ಲಿ 6ರಿಂದ 8 ಕ್ವಿಂಟಲ್ ಇಳುವರಿ ನಿರೀಕ್ಷೆಯಿದೆ. ಪ್ರತಿ ಎಕರೆಗೆ ₹ 15,000 ಖರ್ಚು ತಗುಲಿದೆ. ಆದರೆ, ಪ್ರಸ್ತುತ ದರ ಪ್ರತಿ ಕ್ವಿಂಟಲ್‌ಗೆ ₹ 4,500ರಿಂದ ₹5,000ದಷ್ಟಿದೆ. ಪ್ರತಿದಿನವೂ ದರದಲ್ಲಿ ಅನಿಶ್ಚಿತತೆ ಇದೆ’ ಎನ್ನುತ್ತಾರೆ ರೈತರಾದ ಬಸಯ್ಯ ಮತ್ತು ಹನುಮಂತಪ್ಪ.

‘ಸಂತೇಬೆನ್ನೂರು ಪಾಪ್‌ಕಾರ್ನ್ ಮೆಕ್ಕೆಜೋಳದ ಖರೀದಿಯ ಪ್ರಮುಖ ಕೇಂದ್ರ. ಎರಡು ದಶಕಗಳಿಂದ ಬೆಳೆಗೆ ಹೆಸರುವಾಸಿಯಾಗಿದ್ದ ಹೋಬಳಿಯಲ್ಲಿ ಮತ್ತೊಮ್ಮೆ ಸಮೃದ್ಧ ಬೆಳೆ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ’ ಎನ್ನುತ್ತಾರೆ ವರ್ತಕ ಹಮೀದ್.

‘ಗಿಳಿಗಳ ಕಾಟ, ದರ ಕುಸಿತ’

‘ಪಾಪ್‌ಕಾರ್ನ್ ಮೆಕ್ಕೆಜೋಳ ಪೌಷ್ಟಿಕಾಂಶಗಳ ಕಣಜ ಹಾಗೂ ಬ್ರಾಂಡೆಡ್ ತಿನಿಸು ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತು. ಬಯಲು ಸೀಮೆಯಲ್ಲೂ ಇದರ ಬೆಳೆ ವ್ಯಾಪ್ತಿ ಹೆಚ್ಚುತ್ತಿದ್ದರೂ ಅಧಿಕೃತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಗಿಳಿಗಳ ಕಾಟ, ಬೆಲೆ ನಿಗದಿಯಲ್ಲಿ ರೈತರಿಗೆ ಹೆಚ್ಚಿನ ಹಿಡಿತವಿಲ್ಲದಿರುವುದು, ಸಂಗ್ರಹಣೆಗೂ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ಕೊಯ್ಲಿನ ಸಮಯದಲ್ಲಿ ದರ ತೀವ್ರ ಕುಸಿಯುವುದು ರೈತರಿಗೆ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಜೊತೆಗೆ ಇದು ಬರ ಮತ್ತು ಅತಿವೃಷ್ಟಿಯನ್ನು ತಡೆಯಲಾಗದ ಸೂಕ್ಷ್ಮ ಬೆಳೆಯಾದ್ದರಿಂದ, ರೈತರು ಮುಂದಿನ ಹಂಗಾಮಿನಲ್ಲಿ ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಯಲು ತೀವ್ರ ನಿರಾಸಕ್ತಿ ತೋರಿದ್ದಾರೆ’ ಎಂದು ಕೃಷಿ ಅಧಿಕಾರಿ ಕೆ.ಎಸ್. ಕುಮಾರ್ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ