
ಹರಿಹರ: ನೋಟಿಸ್ ನೀಡದೆ ಬಂದ ತನಿಖಾಧಿಕಾರಿಗಳು ವಾಪಸ್
ಹರಿಹರ: ನಗರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್ಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ ₹ 10 ಕೋಟಿ ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕಾರಣ ಗುರುವಾರ ಜಂಟಿ ತಪಾಸಣೆಗೆ ಆಗಮಿಸಿದ್ದ ಅಧಿಕಾರಿಗಳ ತಂಡವನ್ನು, ದೂರುದಾರರು ಪೂರ್ವಭಾವಿ ಮಾಹಿತಿ ನೀಡದ ಕಾರಣ ವಾಪಸ್ ಕಳುಹಿಸಿದ್ದಾರೆ.
ಮಠದ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ 2020–21ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ₹ 10 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಟ್ರಸ್ಟಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಈ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ನೇತೃತ್ವದ ‘ಲೆಕ್ಕಕೊಡಿ ಚಳವಳಿ ಸಮಿತಿ’ಯು ಸೆ. 17ರಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತ್ತು.
ಈ ದೂರಿನನ್ವಯ ಅನುದಾನದ ಬಳಕೆ, ಬಿಲ್ ಸಲ್ಲಿಕೆ ಹಾಗೂ ಕಾಮಗಾರಿಯ ಭೌತಿಕ ಪ್ರಗತಿ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.
ಅದರಂತೆ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ತಂಡವು ಗುರುವಾರ ಮಠಕ್ಕೆ ಭೇಟಿ ನೀಡಿ, ಸ್ಥಳದಲ್ಲೇ ನೋಟಿಸ್ ನೀಡಲು ಮುಂದಾಗಿತ್ತು. ಆದರೆ ‘ಲೆಕ್ಕಕೊಡಿ ಚಳವಳಿ ಸಮಿತಿ’ ಅಧ್ಯಕ್ಷ ಪರಮೇಶ್ವರ ಗೌಡ, ‘ದೂರುದಾರರಾದ ನಮಗೆ ಮುಂಚಿತವಾಗಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ತನಿಖೆಗೆ ಬಂದಿರುವುದು ಸರಿಯೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ನೋಟಿಸ್ ನೀಡಿ ಮತ್ತೆ ಬರುವುದಾಗಿ ತಿಳಿಸಿ ತಪಾಸಣೆ ನಡೆಸದೆ ವಾಪಸ್ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪರಿಶೀಲನಾ ತಂಡದಲ್ಲಿ ಲೋಕೋಪಯೋಗಿ ಇಲಾಖೆ ಇಇ ಉಮಾ ನಾಯಕ್, ಪಿಆರ್ಇಡಿ ಇಇ ಶಿವಮೂರ್ತಿ, ಎಇಇ ಮರಿಸ್ವಾಮಿ ಇದ್ದರು.