
ನಕಲಿ ಆದೇಶ ಸೃಷ್ಟಿಸಿ ಕೈದಿಯ ಬಿಡುಗಡೆಗೆ ನೆರವು: ಕಲಬುರಗಿ ಕಾರಾಗೃಹದ ಡಿಐಜಿ ಸೆರೆ
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶಿಸಿದ ಮಾದರಿಯಲ್ಲಿಯೇ ನಕಲಿ ಆದೇಶವನ್ನು ಸೃಷ್ಟಿಸಿ, ಜೀವಾವಧಿ ಶಿಕ್ಷೆಯ ಅಪರಾಧಿಯನ್ನು ಕಾರಾಗೃಹದಿಂದ ಬಿಡುಗಡೆ ಮಾಡಿಸಿದ್ದ ಆರೋಪದಲ್ಲಿ, ಕಲಬುರಗಿ ಕಾರಾಗೃಹದ (ಉತ್ತರ ವಲಯ) ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
‘ಶಿಕ್ಷಾ ಬಂದಿ ಎ.ಶಂಕರ್ ಎಂಬಾತ ನಕಲಿ ಆದೇಶವನ್ನು ನೀಡಿ, 2018ರ ನವೆಂಬರ್ 13ರಂದು ಜೈಲಿನಿಂದ ಬಿಡುಗಡೆ ಆಗಿದ್ದಾನೆ’ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಕರ್ಣ ಬಿ. ಕ್ಷೇತ್ರಿ ಅವರು ಇದೇ ವರ್ಷದ ಮೇ 20ರಂದು ದೂರು ನೀಡಿದ್ದರು.
ದೂರು ಆಧರಿಸಿ ತನಿಖೆ ನಡೆಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹಿಂದಿನ ಮುಖ್ಯಸ್ಥ ಸೋಮಶೇಖರ್ ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಸೆಪ್ಟೆಂಬರ್ 11ರಂದು ಶಿಕ್ಷಾ ಬಂದಿ ಎ.ಶಂಕರ್ ಹಾಗೂ ಕಾರಾಗೃಹ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಅಂದಿನ ಎಸ್‌ಡಿಎ) ಎಸ್.ಶ್ರೀಕಾಂತ್ ಅವರನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಡಿಐಜಿಯನ್ನು ಒಂಬತ್ತು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಎ.ಶಂಕರ್ ವಿರುದ್ಧ ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ತ್ವರಿತ ವಿಲೇವಾರಿ ನ್ಯಾಯಾಲಯವು ಅಪರಾಧಿ ಎ.ಶಂಕರ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ಕೆಳಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಅಪರಾಧಿ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದ. ತ್ವರಿತ ವಿಲೇವಾರಿ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನು ಮೇಲಿನ ನ್ಯಾಯಾಲಯಗಳು ಕಾಯಂಗೊಳಿಸಿ, ಆದೇಶಿಸಿದ್ದವು.
ಲೈಂಗಿಕವಾಗಿ ಬಳಸಿಕೊಂಡಿದ್ದ ಇಬ್ಬರು: ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಫ್‌ಡಿಎ ಎಸ್.ಶ್ರೀಕಾಂತ್ ಹಾಗೂ 2018ರಲ್ಲಿ ಕಾರಾಗೃಹದ ಮುಖ್ಯಸ್ಥರಾಗಿದ್ದ ಸೋಮಶೇಖರ್ ಅವರು ಅಪರಾಧಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡು, ಸುಪ್ರೀಂ ಕೋರ್ಟ್ ಆದೇಶಿಸಿದಂತೆಯೇ ನಕಲಿ ಆದೇಶದ ಪ್ರತಿಯನ್ನು ಸಿದ್ಧಪಡಿಸಿ ಅಪರಾಧಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದು ತನಿಖೆಯ ವೇಳೆ ಪತ್ತೆಯಾಗಿತ್ತು. ಬಳಿಕ, ಎಸ್.ಶ್ರೀಕಾಂತ್ ಹಾಗೂ ಸಜಾ ಕೈದಿಯನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿಸಿದಾಗ ತನಿಖೆಗೆ ಸಹಕರಿಸದೆ ಪ್ರಕರಣದ ಮಾಹಿತಿಯನ್ನು ಮರೆಮಾಚಿದ ಆರೋಪದಲ್ಲಿ, ಕಾರಾಗೃಹದ ಅಂದಿನ ಮುಖ್ಯಸ್ಥರನ್ನು ಭಾನುವಾರ ರಾತ್ರಿ ಬಂಧಿಸಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ ಅವರ ಮಾರ್ಗದರ್ಶನದಲ್ಲಿ ಎಸಿಪಿ ಕೆ.ಎಂ.ಸತೀಶ್ ಹಾಗೂ ಠಾಣೆಯ ಇನ್‌ಸ್ಪೆಕ್ಟರ್ ಪಿ.ಜಿ.ನವೀನ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.