
ವಾಲಿಬಾಲ್‌ನಲ್ಲಿ ತುಮಕೂರಿನ ಪ್ರತಿಭೆ ಯಶಸ್ ಸಾಧನೆ
ತುಮಕೂರು: ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಮಾತಿನಂತೆ ನಗರದ ಶಿರಾ ಗೇಟ್ ಬಳಿಯ ಕಾಳಿದಾಸ ಪ್ರೌಢಶಾಲೆಯ ಯಶಸ್ ಗ್ಲಾಡ್ಸನ್ ಶಾಲಾ ಹಂತದಲ್ಲಿಯೇ ತಮ್ಮ ಪ್ರತಿಭೆ ತೋರಿದ್ದಾರೆ. ವಾಲಿಬಾಲ್ ಆಟದಲ್ಲಿ ತನ್ನದೇ ವಿಶಿಷ್ಟ ಶೈಲಿಯ ಆಟದ ಮೂಲಕ ಗಮನ ಸೆಳೆದಿದ್ದಾರೆ.
ಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಯಶಸ್ ಪ್ರತಿನಿಧಿಸಿದ ತಂಡ ಫೈನಲ್ ಗೆದ್ದು ಬೀಗಿದೆ. ಈಗ ವಿಭಾಗ ಮಟ್ಟದಲ್ಲಿ ಜಯ ಸಾಧಿಸಿ ರಾಜ್ಯ ಪ್ರಶಸ್ತಿ ಗೆಲ್ಲುವ ಕಡೆಗೆ ದೃಷ್ಟಿ ನೆಟ್ಟಿದೆ. ಯಶಸ್ ನಗರದ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿ. 6ನೇ ತರಗತಿಯಲ್ಲಿರುವಾಗಲೇ ವಾಲಿಬಾಲ್ ಆಸಕ್ತಿ ಬೆಳೆಯಿತು. ಅಲ್ಲಿಂದ ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಸದ್ಯ 10ನೇ ತರಗತಿ ಓದುತ್ತಿದ್ದು, ಕ್ರೀಡೆಯ ಜತೆಗೆ ಓದಿನಲ್ಲೂಮುಂದಿದ್ದಾರೆ. ಪೊಲೀಸ್ ಆಗಬೇಕು ಎಂಬ ಕನಸು ಹೊತ್ತು ಮುಂದೆ ಸಾಗುತ್ತಿದ್ದಾರೆ. ಅದಕ್ಕೂ ಮುನ್ನ ಒಮ್ಮೆಯಾದರೂ ರಾಷ್ಟ್ರೀಯ ವಾಲಿಬಾಲ್ ತಂಡದಲ್ಲಿ ಆಟವಾಡಬೇಕು. ಪ್ರತಿ ಪಂದ್ಯ ಗೆದ್ದು ಸಂಭ್ರಮಿಸಬೇಕು ಎಂಬ ಗುರಿ ಹೊಂದಿದ್ದಾರೆ.
‘ಇದುವರೆಗೆ ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. ತಂಡವನ್ನು ಸೋಲಿನಿಂದ ಪಾರು ಮಾಡುವುದು ನನಗಿಷ್ಟ. ಅಪ್ಪ–ಅಮ್ಮನ ಸಂಪೂರ್ಣ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಕ್ರೀಡಾ ಕಾಲೇಜು ಪ್ರವೇಶಾತಿ ಪಡೆದು, ವಾಲಿಬಾಲ್ ಅಭ್ಯಾಸ ಮುಂದುವರಿಸುತ್ತೇನೆ. ಕಾಲೇಜು ಪ್ರವೇಶಾತಿ ಸಿಕ್ಕರೆ ಭವಿಷ್ಯಕ್ಕೆ ಅನುಕೂಲವಾಗಲಿದೆ’ ಎಂದು ಯಶಸ್ ನಗುತ್ತಲೇ ಉತ್ತರಿಸಿದರು.
ಯಶಸ್ ಜತೆಗೆ ಒಂದು ಉತ್ತಮ ತಂಡವಿದೆ. ಹೆಬ್ಬೂರಿನ ವಿಪ್ರ ಶಾಲೆ, ಕುಣಿಗಲ್‌ನ ಸ್ಟೆಲ್ಲಾ ಮೇರಿಸ್ ಮತ್ತು ಕಾಳಿದಾಸ ಶಾಲೆ ಆಟಗಾರರು ಒಳಗೊಂಡ ತಂಡ ಇದುವರೆಗೆ ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದೆ. ಈ ಬಾರಿಯ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲು ಶ್ರಮಿಸುತ್ತಿದ್ದಾರೆ. ಇದಕ್ಕೆ ಅವರಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.
‘ಶಾಲೆಯಲ್ಲಿ ವಾಲಿಬಾಲ್ ಅಭ್ಯಾಸಕ್ಕೆ ಯಾವುದೇ ತೊಂದರೆ ಇಲ್ಲ. ಕ್ರೀಡೆಗೆ ಶಿಕ್ಷಕರ ಪ್ರೋತ್ಸಾಹವೂ ಇದೆ. ಇದಕ್ಕೆ ತಕ್ಕಂತೆ ನಮ್ಮ ಆಟವಿದೆ. ತಂಡದ ಎಲ್ಲರೂ ಉತ್ತಮವಾಗಿ ಆಡುತ್ತಾರೆ. ಎಲ್ಲರ ಪ್ರಯತ್ನದಿಂದ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ’ ಎನ್ನುತ್ತಾರೆ ಯಶಸ್.
‘ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿದೆ. ನಮಗೆ ಈಗ ಒಳ್ಳೆಯ ತಂಡ ಸಿಕ್ಕಿದೆ. ಉತ್ತಮ ಆಟಗಾರರು ಇದ್ದಾರೆ. ಹೀಗಾಗಿ ಗೆಲುವು ಸುಲಭವಾಗುತ್ತದೆ. ಮುಂದೆ ಏನಾಗುತ್ತದೆ ಎಂಬುವುದು ಕಾದು ನೋಡಬೇಕಿದೆ’ ಎಂದು ವಾಲಿಬಾಲ್ ತಂಡದ ಸಹ ಆಟಗಾರರಾದ ಸಿದ್ಧಾರ್ಥ ಮತ್ತು ಅಭಿಷೇಕ್ ಉತ್ತರಿಸಿದರು.