ಕೋಲಾರ: ಕ್ರಷರ್‌ ಯಂತ್ರಕ್ಕೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಶಂಕೆ

ಕೋಲಾರ: ಕ್ರಷರ್‌ ಯಂತ್ರಕ್ಕೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಶಂಕೆ

ಕೋಲಾರ: ಕ್ರಷರ್‌ ಯಂತ್ರಕ್ಕೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಶಂಕೆ

ವೇಮಗಲ್‌ (ಕೋಲಾರ): ವೇಮಗಲ್‌ ಹೋಬಳಿಯ ಬೆಟ್ಟ ಹೊಸಪುರ ಆರ್‌ಎಸ್‌ ರಾಕ್‌ ಸ್ಯಾಂಡ್‌ ಕ್ರಷರ್‌ ಯಂತ್ರಕ್ಕೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಟ್ಟ ಹೊಸಪುರ ಗ್ರಾಮದ ನಿವಾಸಿ ಲಕ್ಷ್ಮಣ್ ಅಲಿಯಾಸ್‌ ಲವ (35) ಮೃತ ವ್ಯಕ್ತಿ.

ಘಟಕದ ಸಿಬ್ಬಂದಿ ಶನಿವಾರ ಬೆಳಿಗ್ಗೆ ನೋಡಿದಾಗ ಯಂತ್ರದ ಬೆಲ್ಟ್‌ ಬಳಿ ಯುವಕನ ದೇಹ ಸಿಲುಕಿಕೊಂಡಿತ್ತು.

ವೇಮಗಲ್‌ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಗ್ರಾಮಸ್ಥರು ಸಾವಿನ ರೀತಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆಗೆ ಆಗ್ರಹಿಸಿದ್ದಾರೆ.

ಲಕ್ಷ್ಮಣ್ ಈ ಕ್ರಷರ್‌ನಲ್ಲಿ ಯಾವುದೇ ರೀತಿಯ ಕೆಲಸ ನಿರ್ವಹಿಸುತ್ತಿರಲಿಲ್ಲ. ಯಾವುದೇ ಅಧಿಕೃತ ಕೆಲಸವಿಲ್ಲದ ಹೊರಗಿನ ವ್ಯಕ್ತಿಯೊಬ್ಬ ಕಲ್ಲು ಪುಡಿ ಮಾಡುವ ಅತ್ಯಂತ ಅಪಾಯಕಾರಿ ಯಂತ್ರದ ಸಮೀಪಕ್ಕೆ ಹೇಗೆ ಹೋದರು? ಅಷ್ಟು ಎತ್ತರದ ಕ್ರಷರ್ ಯಂತ್ರದೊಳಗೆ ಹೇಗೆ ಬಿದ್ದರು? ಬೃಹತ್ ಯಂತ್ರದೊಳಗೆ ಹೊರಗಿನ ವ್ಯಕ್ತಿಯೊಬ್ಬ ಸಿಲುಕಿಕೊಳ್ಳುವಾಗ ಅಲ್ಲಿನ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಏನು ಮಾಡುತ್ತಿದ್ದರು ಎಂದು ಸ್ಥಳೀಯರು ಪ್ರಶ್ನಿಸಿ‌ದ್ದಾರೆ.

ಗಣಿ ಇಲಾಖೆ ಅಧಿಕಾರಿ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಆದೇಶದವರೆಗೆ ಗಣಿ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.

ವೇಮಗಲ್ ಭಾಗದ ಕಲ್ಲು ಕ್ರಷರ್‌ಗಳಲ್ಲಿ ಸಾವು ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದಷ್ಟೇ ಇದೇ ಕ್ರಷರ್‌ನಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಪಶ್ಚಿಮ ಬಂಗಾಳದ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು.

ಅಂದು ಕೂಡ ಇಲಾಖೆಯ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಗಳ ಬಗ್ಗೆ ಸುತ್ತಲಿನ ಗ್ರಾಮಸ್ಥರು, ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.

ಯುವಕ ಹಗ್ಗ ತೆಗೆದುಕೊಂಡು ಹೋಗಿದ್ದ

ಮದ್ಯಪಾನ ಮಾಡುತ್ತಿದ್ದ ಯುವಕ ಲಕ್ಷ್ಮಣ್‌ ಮನೆಯಲ್ಲಿ ಸದಾ ಜಗಳವಾಡುತ್ತಿದ್ದ, ಕುಟುಂಬದ ಕಾಳಜಿ ವಹಿಸುತ್ತಿರಲಿಲ್ಲ ಎಂಬುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ. ಹಲವಾರು ಬಾರಿ ಬುದ್ಧಿವಾದ ಕೂಡ ಹೇಳಿದ್ದಾರೆ. ಅಲ್ಲದೇ, ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಈಗ ಹಗ್ಗ ತೆಗೆದುಕೊಂಡು ಹೊರ ಹೋಗಿದ್ದಾಗಿ ಪೋಷಕರು ತಿಳಿಸಿದ್ದಾರೆ.

ಆರ್‌ಎಸ್‌ ರಾಕ್‌ ಸ್ಯಾಂಡ್‌ ಕ್ರಷರ್‌ ಸಿಬ್ಬಂದಿ ಶನಿವಾರ ಬೆಳಿಗ್ಗೆ ನೋಡಿದಾಗ ಯಂತ್ರದ ಬೆಲ್ಟ್‌ ಬಳಿ ಆತನ ದೇಹ ಸಿಲುಕಿಕೊಂಡಿತ್ತು. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದೇಹವನ್ನು ಸಾಗಿಸಿದ್ದು, ವರದಿ ಬಂದ ನಂತರ ನಿಖರ ಮಾಹಿತಿ ಗೊತ್ತಾಗಲಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಕೂಡ ಪರಿಶೀಲನೆ ನಡೆಸುತ್ತಿದ್ದೇವೆ. ಕ್ರಷರ್‌ ಮಾಲೀಕರು ಬೆಂಗಳೂರಿನಲ್ಲಿದ್ದು, ಅವರನ್ನೂ ಕರೆಯಿಸಿ ತನಿಖೆ ನಡೆಸುತ್ತೇವೆ.

-ಕನ್ನಿಕಾ ಸಿಕ್ರಿವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಕ್ರಷರ್‌ ಮಾಲೀಕರ ನಿರ್ಲಕ್ಷ್ಯವೇ ಸಾವಿಗೆ ಕಾರಣ: ಆರೋಪ

ವೇಮಗಲ್‌ ಹೋಬಳಿ ವ್ಯಾಪ್ತಿಯ ಕಲ್ಲು ಕ್ವಾರಿ ಹಾಗೂ ಕ್ರಷರ್ ಘಟಕಗಳಲ್ಲಿ ಅಮಾಯಕರ ಜೀವ ಬಲಿ ಪಡೆಯುವ ದುರಂತಗಳ ಸರಮಾಲೆ ಮುಂದುವರಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸುತ್ತಲಿನ ಗ್ರಾಮಸ್ಥರು ಈ ಯುವ ಕನ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಕ್ರಷರ್‌ ಮಾಲೀಕರ ನಿರ್ಲಕ್ಷ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬೇಜವಾಬ್ದಾರಿತನ ಈ ಸಾವಿಗೆ ಕಾರಣವಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಹಿಂದೆ ಕೂಡ ಇಂಥ ದುರ್ಘಟನೆಗಳು ನಡೆದಿದ್ದು, ಗಣಿ ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಪಾಠ ಕಲಿತಂತೆ ಕಾಣುತ್ತಿಲ್ಲ. ಯಾವುದೇ ಸುರಕ್ಷಿತ ಕ್ರಮ ವಹಿಸಿಲ್ಲ. ‌ಮೃತ ವ್ಯಕ್ತಿಯ ಕುಟುಂಬಕ್ಕೆ ₹ 1ಕೋಟಿ ಪರಿಹಾರ ಒದಗಿಸುವಂತೆ ರಾಜ್ಯ ರೈತ ಸಂಘ ಯುವ ಘಟಕದ ರಾಜ್ಯಧ್ಯಕ್ಷ ರಾಮು ಶಿವಣ್ಣ ಒತ್ತಾಯಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ