
ವ್ಯಾಪಾರಿಗಳ ಬದುಕನ್ನೂ ಹೊತ್ತು ಗಡಿದಾಟಿದ ಭಟ್ಕಳ ಮಲ್ಲಿಗೆ ಕಂಪು
ಭಟ್ಕಳದ ಪೇಟೆಯ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಎಡಪಾರ್ಶ್ವಕ್ಕೆ ತಿರುಗಿದರೆ ಸಾಕು; ಮೂಗಿಗೆ ಮೊದಲು ತಾಗುವುದು ಹೂವಿನ ಕಂಪು. ಸಾಲು ಸಾಲು ಹೂವಿನ ಅಂಗಡಿಗಳಲ್ಲಿ ಬಣ್ಣಬಣ್ಣದ ಹೂವುಗಳ ನಡುವೆ ಭಟ್ಕಳ ಮಲ್ಲಿಗೆಯ ಬಿಳಿ ಮೊಗ್ಗುಗಳು ಗಮನ ಸೆಳೆಯುತ್ತವೆ. ಮುಂಜಾನೆಯಿಂದ ಸಾಯಂಕಾಲದವರೆಗೂ ಇಲ್ಲಿ ಮಲ್ಲಿಗೆಯ ಕಂಪು ಹರಡಿರುತ್ತದೆ. ಹಲವು ವರ್ಷಗಳಿಂದ ಹೂವಿನ ವ್ಯಾಪಾರಕ್ಕೆ ಹೆಸರಾಗಿರುವ ಈ ಪ್ರದೇಶವನ್ನು ಜನರು ‘ಹೂವಿನ ಪೇಟೆ’ ಎಂದೇ ಕರೆಯುತ್ತಾರೆ.
ಈ ಪೇಟೆಯ ವಿಶೇಷತೆ ಭಟ್ಕಳ ಮಲ್ಲಿಗೆ. ಕರಾವಳಿಯ ಬದುಕು, ಕೃಷಿ ಮತ್ತು ಸೌಂದರ್ಯದೊಂದಿಗೆ ಬೆಸೆದುಕೊಂಡಿರುವ ಈ ಮಲ್ಲಿಗೆ ಇಂದು ಭಟ್ಕಳದ ಗಡಿ ದಾಟಿ ಕೊಲ್ಲಿ ರಾಷ್ಟ್ರಗಳಲ್ಲೂ ಪರಿಮಳ ಹರಡುತ್ತಿದೆ.
ಭಟ್ಕಳ ಮಲ್ಲಿಗೆ Jasminum sambac ಪ್ರಭೇದಕ್ಕೆ ಸೇರಿದ್ದು, ಹಬ್ಬುವ ಬಳ್ಳಿಯಲ್ಲ; ಮಧ್ಯಮ ಗಾತ್ರದ ಪೊದೆಯಾಗಿ ಬೆಳೆಯುತ್ತದೆ. ಕುಂಡಗಳಲ್ಲೂ ಸಣ್ಣ ಜಾಗದಲ್ಲೂ ಬೆಳೆಸಬಹುದು. ಮೊಗ್ಗು ಸಂಪೂರ್ಣ ಬಿಳಿಯಾಗಿದ್ದರೂ, ಅರಳಿದ ಹೂವಿನ ಎಸಳುಗಳ ಒಳಭಾಗದಲ್ಲಿ ತಿಳಿ ಹಸಿರು ಛಾಯೆ ಕಾಣಿಸುತ್ತದೆ. ಸರಿಯಾದ ಆರೈಕೆಯಲ್ಲಿ ಒಂದು ಗಿಡ 15 ರಿಂದ 20 ವರ್ಷಗಳವರೆಗೆ ಹೂ ಬಿಡುತ್ತದೆ.
ಈ ಹೂವಿನ ದಿನ ಶುರುವಾಗುವುದೇ ಮುಂಜಾನೆ ನಾಲ್ಕು ಗಂಟೆಗೆ. ಮೊಗ್ಗು ಅರಳುವ ಮುನ್ನವೇ ತೋಟಕ್ಕೆ ಇಳಿಯಬೇಕು. ಬಿಸಿಲು ಬಿದ್ದರೆ ಮೊಗ್ಗು ಅರಳಿಬಿಡುತ್ತದೆ; ಅರಳಿದ ಹೂವಿಗೆ ಮೊಗ್ಗಿನಷ್ಟು ಬೆಲೆ ಇರುವುದಿಲ್ಲ.
ಹೀಗಾಗಿ ಕತ್ತಲಲ್ಲೇ ಕೊಯ್ಲು. ಬಳಿಕ ಹೂವು ವಿಂಗಡಿಸಿ, ಕಟ್ಟಿ, ಏಜೆಂಟರಿಗೆ ಅಥವಾ ನೇರವಾಗಿ ಅಂಗಡಿಗಳಿಗೆ ತಲುಪಿಸಬೇಕು. ಬೆಳಿಗ್ಗೆ ಒಂಬತ್ತು ಗಂಟೆಯೊಳಗೆ ಕೆಲಸ ಮುಗಿದರೆ ಮಾತ್ರ ಆ ದಿನದ ಆದಾಯ ಕೈ ಸೇರುತ್ತದೆ.
‘ದಿನವೂ ಗಿಡದಿಂದ ಹೂವು ಕೊಯ್ದು ಕೊಟ್ಟರೆ, ದಿನದ ಕೊನೆಯಲ್ಲಿ ಕೈಗೆ ಹಣ ಸಿಗುತ್ತದೆ. ನಿತ್ಯದ ಖರ್ಚು, ಮಕ್ಕಳ ಶಾಲಾ ಫೀಸು, ಹಾಲಿನ ಬಿಲ್ ಎಲ್ಲವನ್ನೂ ಈ ಆದಾಯದಿಂದಲೇ ನಿಭಾಯಿಸಬಹುದು. ಹೆಣ್ಣುಮಕ್ಕಳಿಗೂ ಈ ಆದಾಯ ಸ್ವಾವಲಂಬನೆ ತರುತ್ತದೆ’ ಎನ್ನುತ್ತಾರೆ ಮಲ್ಲಿಗೆ ಕೃಷಿಕ ಮಾದೇವ ನಾಯ್ಕ.
ಅಡಿಕೆ, ಭತ್ತದಂತಹ ಬೆಳೆಗಳ ಆದಾಯಕ್ಕಾಗಿ ತಿಂಗಳು, ವರ್ಷ ಕಾಯಬೇಕು. ಮಲ್ಲಿಗೆ ಹಾಗಲ್ಲ. ಮೊಗ್ಗು ಕಿತ್ತು, ಕಟ್ಟಿ, ಮಾರಾಟ ಮಾಡಿದ ದಿನವೇ ಹಣ ಕೈ ಸೇರುತ್ತದೆ. ಅದಕ್ಕಾಗಿಯೇ ಸಣ್ಣ ಕೃಷಿಕರ ಪಾಲಿಗೆ ಮಲ್ಲಿಗೆ ನಿತ್ಯದ ಆದಾಯದ ಬೆಳೆ.
ಮಲ್ಲಿಗೆ ತೋಟವಿರುವ ಎಲ್ಲರೂ ಹೂವನ್ನು ತಾವೇ ಕೊಯ್ಯುವುದಿಲ್ಲ. ಕೆಲವರು ತೋಟವನ್ನು ಏಜೆಂಟರಿಗೆ ಗುತ್ತಿಗೆ ನೀಡುತ್ತಾರೆ. ಏಜೆಂಟರು ಮಹಿಳೆಯರಿಂದ ಮೊಗ್ಗುಗಳನ್ನು ಬಿಡಿಸಿ, ಹೂ ಕಟ್ಟುವ ಮನೆಗಳಿಗೆ ತಲುಪಿಸುತ್ತಾರೆ.
ಹೂ ಕಟ್ಟುವುದೂ ಸುಲಭದ ಕೆಲಸವಲ್ಲ. ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಮೊಗ್ಗುಗಳನ್ನು ದಾರಕ್ಕೆ ಹೆಣೆಯಬೇಕು. ದಿನಕ್ಕೆ ಹೆಚ್ಚೆಂದರೆ 15 ಮೊಳ ಮಲ್ಲಿಗೆ ಕಟ್ಟಬಹುದು.
‘ಹಿಂದೆ ಬಾಳೆಗಿಡದ ನಾರಿನಿಂದ ಮಲ್ಲಿಗೆ ಕಟ್ಟುತ್ತಿದ್ದೆವು. ಈಗ ಅದು ಅಪರೂಪ. ಏಜೆಂಟರು ದಾರ ಮತ್ತು ಮೊಗ್ಗು ಕೊಡುತ್ತಾರೆ. ನಾವು ಕಟ್ಟಿಕೊಡುತ್ತೇವೆ. ಒಂದು ಮೊಳಕ್ಕೆ ಐದರಿಂದ ಆರು ರೂಪಾಯಿ ಸಿಗುತ್ತದೆ. ತಿಂಗಳಿಗೆ ಕನಿಷ್ಠ 200–250 ಮೊಳ ಕಟ್ಟುತ್ತೇವೆ. ಇದುವೇ ನಮ್ಮ ಸಂಪಾದನೆ’ ಎನ್ನುತ್ತಾರೆ ಹೂವು ಕಟ್ಟುವ ನಾಗಮ್ಮ ದೇವಾಡಿಗ.
ಹತ್ತು ಮೊಳ ಸೇರಿದರೆ ‘ಅಟ್ಟೆ’. ಇದೇ ಲೆಕ್ಕದಲ್ಲಿ ಭಟ್ಕಳ ಮಲ್ಲಿಗೆಯ ವ್ಯಾಪಾರ ನಡೆಯುತ್ತದೆ.
ಬೆಳಗಿನ ಷೇರು ಮಾರುಕಟ್ಟೆ
ಭಟ್ಕಳ ಮಲ್ಲಿಗೆಯ ಬೆಲೆ ಪ್ರತಿದಿನ ಬದಲಾಗುತ್ತದೆ. ಮಾರುಕಟ್ಟೆಯ ಸ್ಥಿತಿಗತಿಗೆ ಅನುಗುಣವಾಗಿ ಬೆಳಿಗ್ಗೆ ದರ ನಿಗದಿಯಾಗುತ್ತದೆ. ತಲೆತಲಾಂತರದಿಂದ ವ್ಯಾಪಾರ ಮಾಡಿಕೊಂಡು ಬಂದಿರುವ ಅಂಗಡಿ ಮಾಲೀಕರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಸಾಮಾನ್ಯ ದಿನಗಳಲ್ಲಿ ಒಂದು ಅಟ್ಟೆ 300ರಿಂದ 500 ರೂಪಾಯಿ ಇರಬಹುದು. ಶ್ರಾವಣ, ಗಣೇಶ ಚತುರ್ಥಿ, ದೀಪಾವಳಿ, ಮದುವೆಯಂತಹ ಸೀಸನ್‌ಗಳಲ್ಲಿ ಅದೇ ಅಟ್ಟೆ 2,000ರಿಂದ 3,000 ರೂಪಾಯಿವರೆಗೆ ಏರಬಹುದು. ಇಳುವರಿ ಕಡಿಮೆಯಾದರೂ ಬೆಲೆ ಹೆಚ್ಚುತ್ತದೆ.
ಭಟ್ಕಳ ಮಲ್ಲಿಗೆಯ ಕಥೆಗೆ ಉಡುಪಿಯ ಶಂಕರಪುರದೊಂದಿಗೂ ನಂಟಿದೆ. ಸುಮಾರು ಶತಮಾನದ ಹಿಂದೆ ದಕ್ಷಿಣ ಕನ್ನಡದ ಕೃಷಿಕರು ಭಟ್ಕಳದಿಂದ ಮಲ್ಲಿಗೆ ಗಿಡಗಳನ್ನು ಕೊಂಡೊಯ್ದು ಶಂಕರಪುರದಲ್ಲಿ ಬೆಳೆಸಲು ಆರಂಭಿಸಿದರು ಎನ್ನಲಾಗುತ್ತದೆ. ಅಲ್ಲಿನ ಮಣ್ಣು ಮತ್ತು ಹವಾಮಾನಕ್ಕೆ ಹೊಂದಿಕೊಂಡ ಈ ತಳಿಯೇ ಮುಂದೆ ‘ಶಂಕರಪುರ ಮಲ್ಲಿಗೆ’ಯಾಗಿ ಪ್ರಸಿದ್ಧಿಯಾಯಿತು.
ಇಂದು ಉಡುಪಿ ಮಲ್ಲಿಗೆ ಜಾಗತಿಕ ಮಾರುಕಟ್ಟೆಯಲ್ಲೂ ಗುರುತಿಸಿ ಕೊಂಡಿದೆ. ಅದರ ಬೇರುಗಳಲ್ಲಿ ಭಟ್ಕಳದ ಮಲ್ಲಿಗೆಯ ನೆಲೆಯನ್ನೂ ಮರೆಯ ಲಾಗದು.
ದುಬೈಗೂ ಬೇಕು ಭಟ್ಕಳದ ಕಂಪು
ಭಟ್ಕಳ, ಉಡುಪಿ ಮತ್ತು ದಕ್ಷಿಣ ಕನ್ನಡದ ಜನರು ಕೊಲ್ಲಿ ದೇಶಗಳಲ್ಲಿ ನೆಲೆಸಿದ್ದಾರೆ. ಮದುವೆ, ಧಾರ್ಮಿಕ ಕಾರ್ಯಕ್ರಮ, ಹಬ್ಬಗಳಲ್ಲೂ ಕರಾವಳಿಯ ಸಂಪ್ರದಾಯ ಮುಂದುವರಿಸುವ ಅವರೊಂದಿಗೆ ಭಟ್ಕಳ ಮಲ್ಲಿಗೆಯೂ ವಿದೇಶ ತಲುಪುತ್ತದೆ.
ಮಂಗಳೂರು ಅಥವಾ ಗೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಕಾರ್ಗೋ ಮೂಲಕ ತಾಜಾ ಮಲ್ಲಿಗೆ ದುಬೈ ಸೇರಿದಂತೆ ಕೊಲ್ಲಿ ದೇಶಗಳಿಗೆ ತಲುಪುತ್ತದೆ. ಅಲ್ಲಿ ಇದರ ಬೆಲೆ ಸ್ಥಳೀಯ ಮಾರುಕಟ್ಟೆಗಿಂತ ಎರಡು–ಮೂರು ಪಟ್ಟು ಹೆಚ್ಚಾಗಬಹುದು.
‘ನಮ್ಮ ಮನೆಯ ಮದುವೆ ಅಥವಾ ಹಬ್ಬಗಳಿಗೆ ಭಟ್ಕಳ ಮಲ್ಲಿಗೆಯ ಪರಿಮಳ ಹರಡದಿದ್ದರೆ ಆ ಸಂಭ್ರಮವೇ ಪೂರ್ಣವಾಗುವುದಿಲ್ಲ. ತಾಜಾ ಹೂವು ವಿಮಾನದ ಮೂಲಕ ಬಂದಾಗ ನಮ್ಮೂರಿನ ಮಣ್ಣಿನ ವಾಸನೆಯೇ ದುಬೈಗೆ ಬಂದಂತಾಗುತ್ತದೆ’ ಎನ್ನುತ್ತಾರೆ ದುಬೈನಲ್ಲಿ ನೆಲೆಸಿರುವ ರಾಜೇಶ್ ಕಾಮತ್.
ಒಂದು ಕಾಲದಲ್ಲಿ ಬೇಸಿಗೆ ಅಥವಾ ಹಬ್ಬದ ದಿನಗಳಲ್ಲಷ್ಟೇ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇತ್ತು. ಈಗ ಯಕ್ಷಗಾನ, ದೈವಾರಾಧನೆ, ಮದುವೆ, ಶುಭ ಸಮಾರಂಭ, ದೇವಸ್ಥಾನಗಳ ಜಾತ್ರೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬಳಕೆ ಹೆಚ್ಚಾಗಿದೆ.
ಬೇಡಿಕೆ ಹೆಚ್ಚುತ್ತಿದ್ದರೂ ಪೂರೈಕೆ ಅದಕ್ಕೆ ತಕ್ಕಂತೆ ಹೆಚ್ಚಿಲ್ಲ. ‘ಹಬ್ಬದ ದಿನಗಳಲ್ಲಿ 100 ಅಟ್ಟೆ ಬೇಕಿದ್ದರೆ ಮಾರುಕಟ್ಟೆಯಿಂದ 40–50 ಅಟ್ಟೆ ಮಾತ್ರ ಸಿಗುತ್ತದೆ. ಗ್ರಾಹಕರಿಗೆ ಇಲ್ಲ ಎಂದು ಹೇಳಬೇಕಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿಗಳು.
ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಮತ್ತು ಕೃಷಿ ಕಾರ್ಮಿಕರ ಕೊರತೆಯೂ ಉತ್ಪಾದನೆಗೆ ಹೊಡೆತ ನೀಡುತ್ತಿವೆ. ಕೊಲ್ಲಿ ದೇಶಗಳಿಗೆ ರಫ್ತು ಹೆಚ್ಚಿದಾಗ ಸ್ಥಳೀಯ ಮಾರುಕಟ್ಟೆಯ ಪೂರೈಕೆಯೂ ಕೆಲವೊಮ್ಮೆ ಕುಗ್ಗುತ್ತದೆ.
ಮಲ್ಲಿಗೆಯ ಗುಣಮಟ್ಟ ಮತ್ತು ಪರಿಮಳಕ್ಕೆ ಗೊಬ್ಬರದ ಪಾತ್ರವೂ ಮುಖ್ಯ. ಭಟ್ಕಳ ಭಾಗದಲ್ಲಿ ‘ಸುರ್ಮಣ್ಣು’ ಅಥವಾ ಸುಡುಮಣ್ಣನ್ನು ಬಳಸುವ ಪದ್ಧತಿಯಿದೆ. ಒಣಹುಲ್ಲು, ಕಸಕಡ್ಡಿ ಬೆರೆಸಿ ಸುಟ್ಟ ಮಣ್ಣನ್ನು ಗಿಡದ ಬುಡಕ್ಕೆ ಗೊಬ್ಬರದಂತೆ ಹಾಕುತ್ತಾರೆ.
ನವೆಂಬರ್ ಕೊನೆಯಲ್ಲಿ ಒಣಗಿದ, ರೋಗಪೀಡಿತ ಕೊಂಬೆಗಳನ್ನು ಕತ್ತರಿಸುತ್ತಾರೆ. ಇದರಿಂದ ಜನವರಿ–ಫೆಬ್ರುವರಿಯಲ್ಲಿ ಹೊಸ ಚಿಗುರುಗಳು ಮೂಡಿ ಮೊಗ್ಗುಗಳು ತುಂಬಿಕೊಳ್ಳುತ್ತವೆ.
ಭಟ್ಕಳ ಮಲ್ಲಿಗೆಯ ಗಟ್ಟಿಯಾದ ಮೊಗ್ಗುಗಳು ಬೇಗನೆ ಅರಳುವುದಿಲ್ಲ. ಬೆಳಿಗ್ಗೆ ತಂದ ಹೂವು ಸಂಜೆಯವರೆಗೂ ಮೊಗ್ಗಿನ ರೂಪದಲ್ಲೇ ಉಳಿಯುತ್ತದೆ. ಹೀಗಾಗಿ ವ್ಯಾಪಾರಿಗಳಿಗೆ ಬಾಡುವ ನಷ್ಟವೂ ಕಡಿಮೆ.
‘ಭಟ್ಕಳ ಮಲ್ಲಿಗೆ ಇದೆಯಾ?’ ಎಂದು ಗ್ರಾಹಕರು ಅಂಗಡಿಗೆ ಬಂದ ಕೂಡಲೇ ಕೇಳುತ್ತಾರೆ. ಬೆಲೆ ಹೆಚ್ಚಿದ್ದರೂ ಕೆಲವರು ಬೇರೆ ಹೂವನ್ನು ಒಪ್ಪುವುದಿಲ್ಲ. ತಲೆಗೆ ಮುಡಿದುಕೊಳ್ಳಲು, ಮದುವೆಯ ಅಲಂಕಾರಕ್ಕೆ, ದೇವರ ಪೂಜೆಗೆ–ಬಳಕೆ ಬದಲಾಗಬಹುದು; ಪರಿಮಳದ ಮೇಲಿನ ಒಲವು ಮಾತ್ರ ಬದಲಾಗದು.
ದುಬೈಯ ಮನೆಯೊಂದರಲ್ಲಿ ಮದುವೆ ಸಂಭ್ರಮದ ನಡುವೆ ಭಟ್ಕಳ ಮಲ್ಲಿಗೆಯ ಹಾರ ಅರಳಿದಾಗ, ಅದು ಕೇವಲ ಹೂವಿನ ಪರಿಮಳವಾಗಿರುವುದಿಲ್ಲ. ಅದು ದೂರದ ಊರಿನ ಮಣ್ಣಿನ ಕಂಪು.
ಭಟ್ಕಳದ ಸಣ್ಣ ಹೂವಿನ ಪೇಟೆಯಿಂದ ಹೊರಡುವ ಈ ಬಿಳಿ ಮೊಗ್ಗು, ರೈತನ ಮುಂಜಾನೆಯ ಕಾಯಕವನ್ನೂ, ಮಹಿಳೆಯರ ಬೆರಳಿನ ಕೌಶಲ್ಯವನ್ನೂ, ವ್ಯಾಪಾರಿಗಳ ಬದುಕನ್ನೂ ಹೊತ್ತುಕೊಂಡು ವಿಮಾನದಲ್ಲಿ ಸಮುದ್ರ ದಾಟುತ್ತದೆ.