
ಮಾನವ, ಕಾಡಾನೆ ಸಂಘರ್ಷ ತಡೆಗೆ ವೈಜ್ಞಾನಿಕ ಕ್ರಮ: ಸೆಷೆನ್ಸ್ ನ್ಯಾಯಾಧೀಶ
ಮಡಿಕೇರಿ: ಮಾನವ ಮತ್ತು ಕಾಡಾನೆ ಸಂಘರ್ಷ ತಡೆಯಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಮಾರುತಿ ಎಸ್.ಬಾಗಡೆ ಹೇಳಿದರು.
ಕೊಡಗು ಅರಣ್ಯ ವೃತ್ತ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಗ್ರೀನ್ ಸಿಟಿ ಫೋರಂ, ಕ್ಲೀನ್ ಕೂರ್ಗ್ ಇನ್‌ಷಿಯೇಟಿವ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ, ಇಕೊ ಕ್ಲಬ್ ಘಟಕ ಹಾಗೂ ವಿವಿಧ ಸಂಘ- ಸಂಸ್ಥೆ ಶಾಲಾ-ಕಾಲೇಜು ಸಹಯೋಗದೊಂದಿಗೆ ಶುಕ್ರವಾರ ಇಲ್ಲಿ 72 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಬೈಸಿಕಲ್ ಮತ್ತು ಬೈಕ್ ಜಾಥಾಕ್ಕೆ ಅವರು ಅರಣ್ಯ ಭವನದಲ್ಲಿ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
ಪ್ರಾಣಿ, ಪಕ್ಷಿ ಮತ್ತು ಪರಿಸರದ ಮೇಲಿನ ಪ್ರೀತಿ ಕೇವಲ ಕರುಣೆಯಲ್ಲ, ಅದು ನಮ್ಮ ಅಸ್ತಿತ್ವದ ಭಾಗ ಎಂದು ಪ್ರತಿಪಾದಿಸಿದ ಅವರು ನಮ್ಮ ಪ್ರಕೃತಿಯನ್ನು ರಕ್ಷಿಸಲು ಮತ್ತು ಈ ಭೂಮಿಯನ್ನು ಮುಂದಿನ ಪೀಳಿಗೆಗೆ ಸುಂದರವಾಗಿಡಲು ವನ್ಯಜೀವಿಗಳ ಬಗ್ಗೆ ಪ್ರೀತಿ ಮತ್ತು ಗೌರವವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ಅರಣ್ಯಕ್ಕೆ ಮನುಷ್ಯ ಯಾವುದೇ ಹಾನಿ ಉಂಟು ಮಾಡದೇ ಸಸ್ಯ ಹಾಗೂ ಪ್ರಾಣಿ ಸಂಕುಲದ ಸಂರಕ್ಷಣೆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಂದು ಪ್ರಾಣಿ-ಪಕ್ಷಿಗಳು ಪರೋಕ್ಷವಾಗಿ ಮಾನವನಿಗೆ ಉಪಕಾರವನ್ನೇ ಮಾಡುತ್ತಾ ಬಂದಿವೆ. ಯಾವುದೇ ಪ್ರಾಣಿ-ಪಕ್ಷಿಗಳು ನಶಿಸದಂತೆ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವಿರಾಜಪೇಟೆಯ ಲೀಟಲ್ ಕಾಲರ್ಸ್ ಅಕಾಡೆಮಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಟಿ.ಎಂ.ಹಸ್ಮಿತ, ಅರಣ್ಯ, ವನ್ಯಜೀವಿಗಳು ಮತ್ತು ಪರಿಸರ ಸ್ವಚ್ಛತೆ ಕುರಿತು ಮಾತನಾಡಿ ಗಮನ ಸೆಳೆದರು.
ಬೈಸಿಕಲ್ ಮತ್ತು ಬೈಕ್ ಜಾಥಾದಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಜಾಥಾವು ಅರಣ್ಯ ಭವನದಿಂದ ಆರಂಭಗೊಂಡು ಮಡಿಕೇರಿ ನಗರದ ಮುಖ್ಯ ರಸ್ತೆಯ ಮೂಲಕ ಟೌನ್‍ಹಾಲ್, ಇಂದಿರಾಗಾಂಧಿ ವೃತ್ತ (ಚೌಕಿ) ಮತ್ತು ಮಹದೇವಪೇಟೆ ಮಾರ್ಗವಾಗಿ 4.5 ಕಿ.ಮೀ.ನಷ್ಟು ದೂರ ಕ್ರಮಿಸಿ ಸ್ವಾಗತಬೆಟ್ಟದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ಸಮಾಪ್ತಿಗೊಂಡಿತು.
ಜಾಥಾದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದಂತೆ ಘೋಷಣಾ ಫಲಕಗಳು ಗಮನ ಸೆಳೆದವು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಇ.ರಾಜು ಮತ್ತು ತಂಡದವರು ಪರಿಸರ ಗೀತೆ ಹಾಡಿದರು.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಅರಣ್ಯ ಇಲಾಖೆಯ ಅಧಿಕಾರಿಗಳಾದ ವಿ.ಅಭಿಷೇಕ್, ತೆಹಸೀನ್ ಬಾನು ದವಡಿ, ಶ್ರೀನಿವಾಸ್ ನಾಯಕ, ಕೆ.ಪಿ.ಗೋಪಾಲ್, ಸಂದೀಪ್ ಪಿ.ಅಭಯಂಕರ್, ವಿ.ಸೆಂದಿಲ್ ಕುಮಾರ್, ಜೆ.ಅನನ್ಯಕುಮಾರ್, ನವೀನ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎಚ್.ಶಶಿಧರ್, ಲಯನ್ಸ್ ಕ್ಲಬ್ ಟ್ರಸ್ಟ್‌ನ ಅಧ್ಯಕ್ಷ ಅಂಬೇಕಲ್ ನವೀನ್, ಕೊಡಗು ಟ್ರಾವೆಲ್ ಅಸೋಸಿಯೇಶನ್‌ನ ಅಧ್ಯಕ್ಷ ಕುಪ್ಪಂಡ ವಸಂತ್, ಗ್ರೀನ್ ಸಿಟಿ ಫೋರಂನ ಮಾಜಿ ಅಧ್ಯಕ್ಷ ಜಯ ಚಿಣ್ಣಪ್ಪ ಹಾಗೂ ಕೆ.ದಿನೇಶ್, ಗ್ರೀನ್ ಸಿಟಿ ಫೋರಂನ ಅಧ್ಯಕ್ಷ ಚೆಯ್ಯಂಡ ಜಿ.ಸತ್ಯ ಹಾಗೂ ಕ್ಲೀನ್ ಕೂರ್ಗ್ ಇನಿಷಿಯೇಟಿವ್‍ನ ಸಂಚಾಲಕ ಅರುಣ್ ಅಪ್ಪಚ್ಚು ಭಾಗವಹಿಸಿದ್ದರು.
ಅಕ್ಟೋಬರ್‌ಗೆ ಸೀಮಿತವಾಗದಿರಲಿ
ವನ್ಯಜೀವಿ ಸಪ್ತಾಹ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯು ಕೇವಲ ಅಕ್ಟೋಬರ್ ತಿಂಗಳಿಗೆ ಮಾತ್ರವೇ ಸೀಮಿತಗೊಳ್ಳದೇ ಇದನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮಾನವ ಮತ್ತು ವನ್ಯಜೀವಿಗಳ ಸಹಬಾಳ್ವೆ ಇಂದಿನ ಅಗತ್ಯವಾಗಿದೆ. ವನ್ಯಜೀವಿ ಸಪ್ತಾಹ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ’ ಎಂದರು.
ಅರಣ್ಯ, ವನ್ಯಜೀವಿಗಳ ಸಂರಕ್ಷಣೆಗೆ ನಾಗರಿಕರ ಸಹಭಾಗಿತ್ವ ಅಗತ್ಯ ಸೋನಲ್ ವೃಷ್ಣಿ, ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ