
ಗಾಂಧಿ ಭಾಷಣ ಮಾಡಿದ ಜಾಗದಲ್ಲಿಲ್ಲ ಕುರುಹು
ಗದಗ: ಜಿಲ್ಲೆಯ ಜಕ್ಕಲಿ ಗ್ರಾಮವು ಮಹಾತ್ಮ ಗಾಂಧಿ ಭೇಟಿ ನೀಡಿ, ಅಮೂಲ್ಯ ಸಂದೇಶಗಳನ್ನು ಪಸರಿಸಿದ್ದರು ಎಂಬ ಕಾರಣಕ್ಕೆ ಪ್ರಖ್ಯಾತವಾಗಿದೆ. ಗಾಂಧಿ ಭೇಟಿ ನೀಡಿದ್ದರ ಸ್ಮರಣೆಗಾಗಿ ಅವರು ಕುಳಿತ ಭಂಗಿಯಲ್ಲಿರುವ ಪ್ರತಿಮೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಇರುವುದು ಬಿಟ್ಟರೆ, ಅವರು ಭಾಷಣ ಮಾಡಿದ್ದ ಜಾಗದಲ್ಲಿ ಬೇರಾವುದೇ ಕುರುಹುಗಳು ಇಲ್ಲ.
1934ರಂದು ಮಾರ್ಚ್ 3ರಂದು ಗಾಂಧೀಜಿ ಅವರು ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅವರನ್ನು ಕಾಣಲು, ಅವರ ಮಾತುಗಳನ್ನು ಆಲಿಸಲು ಸುತ್ತಲಿನ ಜಿಲ್ಲೆಗಳಿಂದ ಸುಮಾರು 20,000 ಜನರು ಗ್ರಾಮದಲ್ಲಿ ನೆರೆದಿದ್ದರು ಎಂಬುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಅಸ್ಪೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಸ್ವಾತಂತ್ರ್ಯ ಹೋರಾಟದ ಕುರಿತು ಗಾಂಧೀಜಿ ಮಾಡಿದ್ದರಿಂದ ಗ್ರಾಮದ ಹೆಸರು ಚಿರಸ್ಥಾಯಿಯಾಗಿದೆ.
ಗಾಂಧೀಜಿ ಭಾಷಣದಿಂದ ಪ್ರೇರಣೆಗೊಂಡ ಅನೇಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಇಂತಹ ಮಹತ್ವಪೂರ್ಣ ಜಾಗದಲ್ಲಿ ಗಾಂಧಿ ಭಾಷಣ ಮಾಡಿದ್ದರು ಎಂದು ಯಾರಾದರು ತೋರಿಸಿ ಹೇಳಬೇಕಿದೆ. ಅವರ ಹೆಸರಿನಲ್ಲಿ ಅದೇ ಜಾಗದಲ್ಲಿ ಸ್ಮಾರಕವೊಂದನ್ನು ನಿರ್ಮಿಸಿದರೆ, ಗ್ರಾಮದ ಮೆರುಗು ಹಾಗೂ ಮಹತ್ವ ಹೆಚ್ಚುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
‘ಹಲವು ವರ್ಷಗಳ ಹೋರಾಟದ ಬಳಿಕ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿಯ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣವಾಗುತ್ತಿದೆ. ಇದರೊಂದಿಗೆ, ಗಾಂಧೀಜಿ ಭಾಷಣ ಮಾಡಿದ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಿದರೆ ಮುಂದಿನ ಪೀಳಿಗೆಗೂ ಗ್ರಾಮದ ಮಹತ್ವ ತಿಳಿಯುತ್ತದೆ’ ಎಂದು ಅಂದಾನಪ್ಪ ದೊಡ್ಡಮೇಟಿ ಅವರ ಮೊಮ್ಮಗ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
‘ಗಾಂಧೀಜಿ ಇಲ್ಲಿಗೆ ಭೇಟಿ ನೀಡಿದ್ದಷ್ಟೇ ಅಲ್ಲ. ಮಹತ್ವದ ಸಂದೇಶಗಳನ್ನು ಗ್ರಾಮದ ಮೂಲಕ ಜಗತ್ತಿಗೆ ಸಾರಿದರು. ಗಾಂಧೀಜಿ ಅವರ ಹಲವು ತತ್ವಗಳನ್ನು ಗ್ರಾಮಸ್ಥರು ಇಂದಿಗೂ ಪಾಲಿಸುತ್ತ ಬಂದಿದ್ದಾರೆ. ಅವರು ಭಾಷಣ ಮಾಡಿದ ಜಾಗದ ಸದ್ಯದ ಮಾಲೀಕರೊಂದಿಗೆ ಸರ್ಕಾರ ಮಾತುಕತೆ ನಡೆಸಲಿ. ಅಗತ್ಯವಿದ್ದರೆ ಜಾಗ ಖರೀದಿಸಿ ಸ್ಮಾರಕವನ್ನು ನಿರ್ಮಿಸಲು ಕ್ರಮ ವಹಿಸಬೇಕು’ ಎಂದು ಕೋರಿದರು.ha