ಚಾಮರಾಜನಗರ | ಖಾಲಿ ನಿವೇಶನಗಳಲ್ಲಿ ಕಸದ ರಾಶಿ: ದುರ್ನಾತ

ಚಾಮರಾಜನಗರ | ಖಾಲಿ ನಿವೇಶನಗಳಲ್ಲಿ ಕಸದ ರಾಶಿ: ದುರ್ನಾತ

ಚಾಮರಾಜನಗರ | ಖಾಲಿ ನಿವೇಶನಗಳಲ್ಲಿ ಕಸದ ರಾಶಿ: ದುರ್ನಾತ

ಚಾಮರಾಜನಗರ: ನಗರದ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ನಗರಸಭೆ 'ಗಾಢ ನಿದ್ರೆ’ಗೆ ಜಾರಿದ ಪರಿಣಾಮ ಎಲ್ಲೆಂದರಲ್ಲಿ ತ್ಯಾಜ್ಯ ಹರಡಿಕೊಂಡಿದ್ದು ಇಡೀ ನಗರ ಗಬ್ಬೆದ್ದು ನಾರುತ್ತಿದೆ. ನಗರಸಭೆಯು ಪ್ರತಿನಿತ್ಯ ಮನೆಗಳಿಂದ ಸಮರ್ಪಕವಾಗಿ ಕಸ ಸಂಗ್ರಹ ಹಾಗೂ ವಿಲೇವಾರಿ ಮಾಡದ ಪರಿಣಾಮ ಬಹುತೇಕ ಬಡಾವಣೆಗಳು ಕಸ ವಿಲೇವಾರಿ ತಾಣಗಳಾಗಿ ಮಾರ್ಪಟ್ಟಿವೆ.

ಖಾಲಿ ನಿವೇಶನಗಳು, ಬಡಾವಣೆಯ ಆಯಕಟ್ಟಿನ ಸ್ಥಳಗಳು, ತಿರುವುಗಳು ಹಾಗೂ ರಸ್ತೆ ಇಕ್ಕೆಲಗಳು ಕಸದ ತೊಟ್ಟಿಗಳಾಗಿ ಬದಲಾಗಿದ್ದು ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಪ್ರತಿನಿತ್ಯ ರಸ್ತೆಯಲ್ಲಿ ಸಾಗುವಾಗ ಸಾರ್ವಜನಿಕರು ಹಾಗೂ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.

ಎಲ್ಲೆಲ್ಲಿ ಸಮಸ್ಯೆ ಗಂಭೀರ: ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು ಬಹುತೇಕ ವಾರ್ಡ್‌ಗಳಲ್ಲಿ ಕಸದ ಸಮಸ್ಯೆ ಇದೆ. ಹೌಸಿಂಗ್ ಬೋರ್ಡ್‌ ಬಡಾವಣೆ, ಅರಣ್ಯ ಇಲಾಖೆಯ ನರ್ಸರಿ ಸಮೀಪದ ಮೈದಾನ, ಸಿದ್ಧಾರ್ಥ ನಗರದ ಅಕ್ಕ ಮಹಾದೇವಿ ರಸ್ತೆ, ಜೆಎಸ್‌ಎಸ್‌ ಕಾಲೇಜು ಬಳಿ, ಮಹಾಮನೆಯ ಹಿಂಭಾಗದಲ್ಲಿರುವ ವಸತಿ ನಿಲಯ, ಚೆನ್ನಾಪುರದ ಮೊಳೆಗೆ ಸಂಪರ್ಕಿಸುವ ಕುಲುಮೆ ರಸ್ತೆ, ಪ್ರಗತಿ ನಗರ, ಸುಲ್ತಾನ್ ಷರೀಫ್ ಸರ್ಕಲ್‌ ಹಿಂಭಾಗ, ಗುಂಡ್ಲುಪೇಟೆ ಸರ್ಕಲ್‌, ಬುದ್ಧ ನಗರ ಸಹಿತ ಹಲವು ಬಡಾವಣೆಗಳಲ್ಲಿ ಕಸದ ರಾಶಿ ಹರಡಿಕೊಂಡಿದೆ.

ಸಮಸ್ಯೆಗೆ ಕಾರಣ: ಪೌರ ಕಾರ್ಮಿಕರು ಪ್ರತಿನಿತ್ಯ ಮನೆಗಳಿಂದ ಕಸ ಸಂಗ್ರಹ ಮಾಡದಿರುವುದು ಸಮಸ್ಯೆಗೆ ಮೂಲ ಕಾರಣ. ಪೌರ ಕಾರ್ಮಿಕರ ಕೊರತೆ, ಗೈರು ಸಹಿತ ಹಲವು ಕಾರಣಗಳಿಂದ ನಗರದಲ್ಲಿ ನಿತ್ಯ ಕಸ ಸಂಗ್ರಹ ನಡೆಯುತ್ತಿಲ್ಲ. ಕೆಲವು ಬಡಾವಣೆಗಳಲ್ಲಿ ವಾರ ಕಳೆದರೂ ಕಸ ಸಂಗ್ರಹ ಮಾಡದ ಪರಿಣಾಮ ಸಾರ್ವಜನಿಕರು ಅನಿವಾರ್ಯವಾಗಿ ತ್ಯಾಜ್ಯವನ್ನು ತಂದು ರಸ್ತೆಯ ಬದಿಗಳಲ್ಲಿ ಹಾಗೂ ಖಾಲಿ ನಿವೇಶನಗಳಿಗೆ ತಂದು ಸುರಿಯುತ್ತಿದ್ದಾರೆ.

ಪ್ಲಾಸ್ಟಿಕ್ ಕವರ್‌ ನೊಳಗೆ ತುಂಬಿಸಿಟ್ಟ ಹಸಿ ಕಸ ಕೊಳೆತು ಇಡೀ ಪರಿಸರ ದುರ್ವಾಸನೆ ಬೀರುತ್ತಿದ್ದು ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಬಿರುಸು ಮಳೆ ಸುರಿದರೆ ತ್ಯಾಜ್ಯ ರಸ್ತೆಯ ತುಂಬೆಲ್ಲ ಹರಡುತ್ತಿದ್ದು ಅಸಹನೀಯ ವಾತಾವರಣ ನಿರ್ಮಾಣವಾಗುತ್ತಿದೆ.

ರಾತ್ರಿಯ ಹೊತ್ತು ಬೀದಿನಾಯಿಗಳ ಹಿಂಡು ಹಾಗೂ ಹಂದಿಗಳು ಕಸವನ್ನು ಎಳೆದು ತಂದು ರಸ್ತೆಗೆ ಬಿಸಾಡುತ್ತಿದ್ದು ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡ ಬೇಕಾಗಿದೆ. ತ್ಯಾಜ್ಯದ ರಾಶಿಯ ಬಳಿ ಹಾದು ಹೋಗುವಾಗ ನಾಯಿಗಳು ದಾರಿಹೋಕರ ಮೇಲೆ ದಾಳಿ ನಡೆಸುತ್ತಿವೆ ಎಂದು ದೂರುತ್ತಾರೆ ಸ್ಥಳೀಯರಾದ ರಾಜಪ್ಪ.

ಕೃತಕ ನೆರೆ: ರಸ್ತೆ, ಖಾಲಿ ನಿವೇಶನಗಳಲ್ಲಿ ಹರಡಿಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ ಬಿರುಸು ಮಳೆಗೆ ಚರಂಡಿಗೆ ಸೇರುತ್ತಿದ್ದು ಮಳೆಯ ನೀರು ಸರಾಗವಾಗಿ ಹರಿಯದೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿದ್ದು ಪರಿಸರಕ್ಕೆ ಗಂಭೀರ ಹಾನಿಯಾಗುತ್ತಿದೆ ಎಂದು ದೂರುತ್ತಾರೆ ಸಾರ್ವಜನಿಕರು.

ಜಾನುವಾರುಗೆ ಕಂಟಕ: ಪ್ಲಾಸ್ಟಿಕ್‌ ತ್ಯಾಜ್ಯ ಬಿಡಾಡಿ ದನಗಳು ಹಾಗೂ ಜಾನುವಾರುಗಳ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಕವರ್‌ನೊಳಗೆ ಅಳಿದುಳಿದ ಆಹಾರ ಪದಾರ್ಥ ಹಾಗೂ ಹಸಿ ತ್ಯಾಜ್ಯವನ್ನು ತುಂಬಿಸಿ ಬಿಸಾಡಲಾಗುತ್ತಿದ್ದು ಹಸುಗಳು ಪ್ಲಾಸ್ಟಿಕ್ ಸಮೇತ ಸೇವನೆ ಮಾಡುತ್ತಿದ್ದು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಜಾನುವಾರಗಳ ಉದರದೊಳಗೆ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ಹೊರಬರದೆ ಹೊಟ್ಟೆ ಉಬ್ಬಿಸಿಕೊಂಡು ಉಸಿರುಗಟ್ಟಿ ಸಾವನ್ನಪ್ಪುತ್ತಿವೆ. ಕುರಿ, ಮೇಕೆ, ನಾಯಿ, ಹಂದಿಗಳ ಜೀವಕ್ಕೂ ಪ್ಲಾಸ್ಟಿಕ್ ಎರವಾಗಿದೆ.

ಕಸದ ರಾಶಿಯೊಳಗೆ ನೂರಾರು ಮದ್ಯದ ಬಾಟಲಿಗಳನ್ನು ಎಸೆಯಾಗಿದ್ದು ಜನ–ಜನಾವಾರು ನಡೆಯುವಾಗ ಕಾಲಿಗೆ ಗಾಜು ಚುಚ್ಚಿ ಗಂಭೀರವಾಗಿ ಗಾಯಗಳಾಗುತ್ತಿವೆ.

ಕರೆ ಸ್ವೀಕರಿಸದ ಆಯುಕ್ತರು, ಜಿಲ್ಲಾಧಿಕಾರಿ: ನಗರದಲ್ಲಿ ತ್ಯಾಜ್ಯದ ಸಮಸ್ಯೆ ಗಂಭೀರವಾಗಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರಸಭೆ ಪೌರಾಯುಕ್ತ ಪರಶುರಾಮ ಛಲವಾದಿ ಹಾಗೂ ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಶ್ರೀರೂಪಾ ಅವರನ್ನು ಸಂಪರ್ಕಿಸಲಾಯಿತಾದರೂ ಕರೆ ಸ್ವೀಕರಿಸಲಿಲ್ಲ.

ಚಾಮರಾಜನಗರದಲ್ಲಿ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ನಡೆಯದೆ ನಗರದ ಅಂದಗೆಡುವುದರ ಜೊತೆಗೆ ಪರಿಸರಕ್ಕೆ ಹಾನಿಯಾಗುತ್ತಿದೆ. ನಗರದ ಯಾವುದೇ ಬಡಾವಣೆಗೆ ಹೋದರೂ ತ್ಯಾಜ್ಯದ ರಾಶಿ ಕಾಣುತ್ತದೆ. ನಗರದ ಶುಚಿತ್ವದ ಹೊಣೆ ಹೊತ್ತಿರುವ ನಗರಸಭೆ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು, ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಬೇಕು.

ಗುರುರಾಜು ಎಸ್.ತಮ್ಮಡಹಳ್ಳಿ, ಕಲಾವಿದ

ಪ್ಲಾಸ್ಟಿಕ್‌ ತ್ಯಾಜ್ಯ ಮನುಷ್ಯರಿಗೆ ಮಾತ್ರವಲ್ಲ, ಜಾನುವಾರುಗಳ ಜೀವಕ್ಕೂ ಕಂಟಕವಾಗುತ್ತಿವೆ. ರಸ್ತೆ ಬದಿ, ಖಾಲಿ ನಿವೇಶನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಲಾಗುತ್ತಿರುವ ಪ್ಲಾಸ್ಟಿಕ್‌ ಕವರ್‌ಗಳನ್ನು ದನ–ಕರುಗಳು ತಿಂದು ಸಾವನ್ನಪ್ಪುತ್ತಿವೆ. ನಗರಸಭೆ ಎಚ್ಚೆತ್ತುಕೊಂಡು ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಎಚ್.ಎಂ.ಶಿವಣ್ಣ ಮಂಗಲ ಹೊಸೂರು, ಎಸ್‌ಪಿಬಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ

‘ನಗರಸಭೆ ನಿರ್ಲಕ್ಷ್ಯದ ಪರಮಾವಧಿ’

ನಗರಸಭೆಯ ನಿರ್ಲಕ್ಷ್ಯದ ಪರಿಣಾಮ ನಗರದ 31 ವಾರ್ಡ್‌ಗಳಲ್ಲೂ ಕಸದ ರಾಶಿ ತುಂಬಿದೆ. ಜಿಲ್ಲಾಡಳಿತ ಒಂದೆಡೆ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಸಂಕಲ್ಪ ತೊಟ್ಟಿದ್ದು ಮತ್ತೊಂದೆಡೆ ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಲು ಮುಂದಾಗದಿರುವುದು ಹಾಸ್ಯಾಸ್ಪದದಂತೆ ಕಾಣುತ್ತಿದೆ. ನಾಗರಿಕರ ಆರೋಗ್ಯದ ದೃಷ್ಟಿಯಿಂದ ನಗರದ ಸ್ವಚ್ಛತೆಗೆ ಒತ್ತು ನೀಡಬೇಕು.

ಚಾ.ರಂ.ಶ್ರೀನಿವಾಸ್ ಗೌಡ, ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷ

ಅ.2 ಗಾಂಧಿ ಜಯಂತಿಯಂದು ನಗರಸಭೆ ನೆಪಮಾತ್ರಕ್ಕೆ ಸ್ವಚ್ಛತಾ ಆಂದೋಲನ ನಡೆಸಿ ಮರುದಿನವೇ ನಗರದ ಸ್ವಚ್ಛತೆಯ ಜವಾಬ್ದಾರಿ ಮರೆತು ಕುಳಿತಿರುವುದು ವ್ಯಂಗ್ಯದಂತೆ ಕಾಣುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವ ಕಸವನ್ನು ಪ್ರತ್ಯೇಕಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.ಪ್ರಕಾಶ್‌, ನಾಗರಿಕ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ