
ಬರಗಾಲಕ್ಕೆ ಹೆದರಿ ಗುಳೆ ಹೋಗಬೇಡಿ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಮನವಿ
ಮೊಳಕಾಲ್ಮುರು: ‘ಜಿಲ್ಲೆಯಲ್ಲಿ ಬರಗಾಲ ಹೆಚ್ಚಿದ್ದು, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ಗುಳೆ ಹೋಗದೆ, ಸ್ವಂತ ಗ್ರಾಮಗಳಲ್ಲಿ ಲಭ್ಯವಿರುವ ವಿಬಿ ರಾಮ್ ಜಿ ಯೋಜನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್. ಆಕಾಶ್ ಮನವಿ ಮಾಡಿದರು.
ತಾಲ್ಲೂಕಿನ ಬಿ.ಜಿ. ಕೆರೆ, ಕೋನಸಾಗರ, ತುಮಕೂರಲಹಳ್ಳಿ, ನಾಗಸಮುದ್ರ, ಚಿಕ್ಕೇರಹಳ್ಳಿ ಮತ್ತು ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ವಿಬಿ ಜಿ ರಾಮ್ ಜಿ ಯೋಜನೆ ಅಡಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.
ಇದೇ ವೇಳೆ ಮೊಬೈಲ್ ಆ್ಯಪ್ ಮೂಲಕ ಕೂಲಿಕಾರರ ಎನ್.ಎಂ.ಎಂ.ಎಸ್ ಆನ್‍ಲೈನ್ ಹಾಜರಾತಿ ಪರಿಶೀಲಿಸಿದರು. ಕೂಲಿ ಕಾರ್ಮಿಕರ ಜಾಬ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳ ತಪಾಸಣೆ ನಡೆಸಿ ಕೂಲಿ ಹಣ ನಿಯಮಿತವಾಗಿ ಜಮೆಯಾಗುತ್ತಿರುವುದನ್ನು ಪರಿಶೀಲನೆ ಮಾಡಿದರು.
ನಂತರ ಕಾರ್ಮಿಕರ ಜತೆ ಸಂವಾದ ನಡೆಸಿ, ‘ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದೆ. ಲಿಂಗ ತಾರತಮ್ಯವಿಲ್ಲದೆ ಪುರುಷ ಮತ್ತು ಮಹಿಳೆಯರಿಗೆ ದಿನಕ್ಕೆ ₹382 ಸಮಾನ ಕೂಲಿ ನೀಡಲಾಗುವುದು. ವೈಯಕ್ತಿಕ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದ್ದು, ಸದುಪಯೋಗ ಮಾಡಿಕೊಳ್ಳಬೇಕು. ಉದ್ಯೋಗ ಚೀಟಿಗೆ ಇ– ಕೆವೈಸಿ ಮಾಡಿಸದವರು ತಕ್ಷಣವೇ ಮಾಡಿಸಿಕೊಳ್ಳಬೇಕು. ಸಕಾಲಕ್ಕೆ ಕೂಲಿ ಜಮೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ಸಹಾಯಕ ನಿರ್ದೇಶಕ ಗಣೇಶ್, ಎಡಿಪಿಸಿ ಮೋಹನ್ ಕುಮಾರ್, ತಾಂತ್ರಿಕ ಸಂಯೋಜಕ ದಿನೇಶ್, ಐಇಸಿ ಸಂಯೋಜಕ ದೇವರಾಜ್, ಎಂಐಎಸ್ ಸಂಯೋಜಕ ಮಧುಸೂದನ್ ಹಾಗೂ ಟಿಎಇ, ಬಿಎಫ್‍ಟಿ ಮತ್ತು ಕಾಯಕಮಿತ್ರರು ಹಾಜರಿದ್ದರು.