
ಚಿಂತಾಮಣಿಯಲ್ಲಿ ಬಾಲಕಿ ಅಪಹರಣ ಯತ್ನ: ದೂರು–ಪ್ರತಿದೂರು
ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಪ್ರದೇಶದಲ್ಲಿನ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಅಪಹರಿಸಲು ಯತ್ನಿಸಿದ್ದು, ಸ್ಥಳದಲ್ಲಿದ್ದವರ ಸಮಯೋಚಿತ ಎಚ್ಚರಿಕೆಯಿಂದ ಬಾಲಕಿ ಸುರಕ್ಷಿತವಾಗಿ ಪಾರಾಗಿರುವುದಾಗಿ ನಗರ ಠಾಣೆಗೆ ಶನಿವಾರ ದೂರು ನೀಡಲಾಗಿದೆ.
ನಗರದ ವೆಂಕಟಗಿರಿಕೋಟೆಯ ನಿವಾಸಿ ಸಿಮ್ರಾನ್ ದೂರು ನೀಡಿರುವ ಮಹಿಳೆ. ಆರು ವರ್ಷದ ಮಗಳು ಇಸ್ರಾ ನುರೇನ್ ರಾತ್ರಿ 7.30ರ ವೇಳೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದಾಗ, ಯಾರೋ ಇಬ್ಬರು ವ್ಯಕ್ತಿಗಳು ಬಾಲಕಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಚೀಲದಲ್ಲಿ ಹಾಕಿಕೊಳ್ಳಲು ಸಂಚು ರೂಪಿಸಿ ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರದಿಂದಲೇ ಈ ಕೃತ್ಯವನ್ನು ಗಮನಿಸಿದ ದೂರುದಾರರ ಮೈದುನ ಹಾಗೂ ಸ್ಥಳದಲ್ಲಿದ್ದ ಇತರರು ತಕ್ಷಣವೇ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿಯನ್ನು ಅಪಹರಿಸಲು ಯತ್ನಿಸಿದವರನ್ನು ಚಿಂತಾಮಣಿ ತಾಲೂಕಿನ ಕನ್ನಂಪಲ್ಲಿಯ ಚಂದ್ರಕಲಾ (39), ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದ ಮಂಜುನಾಥ (40) ಎಂದು ಗುರುತಿಸಲಾಗಿದೆ.
ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರತಿ ದೂರು: ನಗರದ ವೆಂಕಟಗಿರಿಕೋಟೆ ವ್ಯಾಪ್ತಿಯಲ್ಲಿ ರಸ್ತೆಬದಿಯ ಪ್ಲಾಸ್ಟಿಕ್ ಬಾಟಲಿಗಳನ್ನು ಆಯುತ್ತಿದ್ದ ಇಬ್ಬರನ್ನು ‘ಮಕ್ಕಳ ಕಳ್ಳರು’ ಎಂದು ತಪ್ಪಾಗಿ ಭಾವಿಸಿ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಇಬ್ಬರು ಗಾಯಗೊಂಡಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಗಾಯಾಳು ಚಂದ್ರಕಲಾ ಪ್ರತಿ ದೂರು ನೀಡಿದ್ದಾರೆ.
ನಗರದ ಕನ್ನಂಪಲ್ಲಿ ನಿವಾಸಿ ಚಂದ್ರಕಲಾ (42) ಹಾಗೂ ಕೋಲಾರ ಜಿಲ್ಲೆಯ ವಕ್ಕಲೇರಿ ಗ್ರಾಮದ ಮಂಜುನಾಥ್ ಎಂಬವರು ಕೂಲಿ ಕೆಲಸ ಸಿಗದ ಕಾರಣ, ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಆಯ್ದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು.
ವೆಂಕಟಗಿರಿಕೋಟೆ ಬಳಿ ಬಾಟಲಿ ಆಯುವಾಗ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವನ್ನು ಕಂಡು ಮಾತಾಡಿಸಿ ಕತ್ತಲಾಗಿದೆ ಮನೆಗೆ ಹೋಗು ಎಂದು ಸೂಚಿಸಿದೆವು. ಆಗ ಅಲ್ಲಿಗೆ ಬಂದ ಸಾರ್ವಜನಿಕರು ‘ಮಕ್ಕಳ ಕಳ್ಳರು’ ಎಂದು ಶಂಕಿಸಿ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರು ಕಲ್ಲಿನಿಂದ ಮಂಜುನಾಥ್ ತಲೆಗೆ ಹೊಡೆದಿದ್ದರಿಂದ ತೀವ್ರ ರಕ್ತಗಾಯವಾಗಿದೆ. ತಳ್ಳಾಟ-ನೂಕಾಟದಲ್ಲಿ ಚಂದ್ರಕಲಾ ಅವರಿಗೂ ಪೆಟ್ಟಾಗಿದೆ. ನಂತರ ಸ್ಥಳದಲ್ಲಿದ್ದ ಇತರರು ಗಾಯಾಳುಗಳನ್ನು ಬಿಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಗಾಯಾಳು ಚಂದ್ರಕಲಾ ನೀಡಿದ ದೂರಿನ ಮೇರೆಗೆ, ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.