ಲಕ್ಷ್ಮೇಶ್ವರ: ಜಾಗದ ಕೊರತೆ; ರಸ್ತೆಯಲ್ಲೇ ಜಾನುವಾರು ಕಟ್ಟಬೇಕಾದ ಸ್ಥಿತಿ

ಲಕ್ಷ್ಮೇಶ್ವರ: ಜಾಗದ ಕೊರತೆ; ರಸ್ತೆಯಲ್ಲೇ ಜಾನುವಾರು ಕಟ್ಟಬೇಕಾದ ಸ್ಥಿತಿ

ಲಕ್ಷ್ಮೇಶ್ವರ: ಜಾಗದ ಕೊರತೆ; ರಸ್ತೆಯಲ್ಲೇ ಜಾನುವಾರು ಕಟ್ಟಬೇಕಾದ ಸ್ಥಿತಿ

ಲಕ್ಷ್ಮೇಶ್ವರ: ಪಟ್ಟಣದಿಂದ ಎಂಟು ಕಿ.ಮೀ ದೂರದಲ್ಲಿರುವ ಸಣ್ಣ ಗ್ರಾಮ ಮುನಿಯನ ತಾಂಡಾ. ಕೃಷಿಯೊಂದಿಗೆ ಹೈನುಗಾರಿಕೆ ಇಲ್ಲಿನವರ ಪ್ರಮುಖ ಕಸುಬು. ಆದರೆ, ಜಾನುವಾರುಗಳಿಗೆ ಕೊಟ್ಟಿಗೆ ನಿರ್ಮಿಸಲು ಜಾಗವಿಲ್ಲದೇ, ರಸ್ತೆಯಲ್ಲೇ ಕಟ್ಟಬೇಕಾದ ಸ್ಥಿತಿ ಇದೆ.

ಕೇವಲ 274 ಜನಸಂಖ್ಯೆ ಇರುವ ಗ್ರಾಮದಲ್ಲಿ ದೇಸಿ ಹಸುಗಳೊಂದಿಗೆ, ಕುರಿ, ಆಡು ಸಾಕಿಕೊಂಡಿದ್ದಾರೆ. 200ಕ್ಕೂ ಹೆಚ್ಚು ಜವಾರಿ ಆಕಳುಗಳು ಇಲ್ಲಿವೆ. ಆಕಳು ಮತ್ತು ಎಮ್ಮೆ ಹಾಲನ್ನು ಮಾರಾಟ ಮಾಡಿ, ತಾಂಡಾ ಜನರು ಜೀವನ ಸಾಗಿಸುತ್ತಿದ್ದಾರೆ. ಆಕಳ ಹಾಲಿನಿಂದ ಬೆಣ್ಣೆ ತೆಗೆದು, ಕೆ.ಜಿಗೆ ₹1,000ಕ್ಕೆ ಮಾರಾಟ ಮಾಡುತ್ತಾರೆ. ಸಗಣಿಯಿಂದ ಗೊಬ್ಬರ ತಯಾರಿಸಿ ಟ್ರ್ಯಾಕ್ಟರ್‌ಗೆ ₹4,000ದಂತೆ ಮಾರಾಟ ಮಾಡುತ್ತಾರೆ. ಆಡು, ಕುರಿ ಮಾರಾಟವೂ ಆದಾಯದ ಮೂಲವಾಗಿದೆ.

ತಾಂಡಾದಲ್ಲಿ ನಾಲ್ಕೈದು ಜನರನ್ನು ಹೊರತುಪಡಿಸಿದರೆ ಉಳಿದವರಿಗೆ ಕೃಷಿ ಮಾಡಲು ಭೂಮಿ ಇಲ್ಲ. ಜಾನುವಾರು ಸಾಕಣೆಯನ್ನೇ ನಂಬಿಕೊಂಡಿರುವವರಿಗೆ, ಅವುಗಳನ್ನು ಕಟ್ಟಲು ಸೂಕ್ತ ಜಾಗ ಇಲ್ಲ. ಹೀಗಾಗಿ, ಮನೆಗಳ ಬದಿ, ಬೀದಿಗಳಲ್ಲಿ ಜಾನುವಾರುಗಳನ್ನು ಕಟ್ಟುತ್ತಿದ್ದಾರೆ. ಇದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೊಡಕಾಗಿದೆ.

ರಸ್ತೆಯಲ್ಲೇ ಜಾನುವಾರನ್ನು ಕಟ್ಟುವುದರಿಂದ ಅವುಗಳ ಸಗಣಿ, ಮೂತ್ರದ ಕಮಟು ವಾಸನೆ ಗಲ್ಲಿ ಗಲ್ಲಿಗಳಲ್ಲಿ ಹರಡಿದೆ. ರಸ್ತೆಯಲ್ಲಿನ ಸಗಣಿ ಹಾಗೂ ಮೂತ್ರವನ್ನು ತುಳಿದುಕೊಂಡೇ ಓಡಾಡಬೇಕಿದೆ. ಕಿಷ್ಕಿಂದೆಯಂಥ ಸಣ್ಣ ಜಾಗದಲ್ಲಿ ಇಲ್ಲಿನ ಜನರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಜನರ ಸಂಕಷ್ಟ ದೂರ ಮಾಡಬೇಕು, ಕೊಟ್ಟಿಗೆ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಆಗ್ರಹ.

‘ಮುನಿಯನ ತಾಂಡಾದಲ್ಲಿ ನೂರಾರು ಸಂಖ್ಯೆಯಲ್ಲಿ ಜಾನುವಾರನ್ನು ಸಾಕಣೆ ಮಾಡಲಾಗುತ್ತಿದೆ. ಅಲ್ಲಿಗೆ ಭೇಟಿ ನೀಡಿದಾಗ ರಸ್ತೆಯಲ್ಲಿಯೇ ಜಾನುವಾರನ್ನು ಕಟ್ಟಿರುವುದು ಕಂಡುಬಂದಿತು. ಎರಡು ಎಕರೆ ಜಾಗೆ ಸಿಕ್ಕರೆ ಸರ್ಕಾರದಿಂದ ಅನುದಾನ ತಂದು ಜಾನುವಾರುಗಳ ಶೆಡ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಸ್ವಚ್ಛತೆ ಮರೀಚಿಕೆ: ಜನರಿಗೆ ರೋಗ

‘ಮುನಿಯನ ತಾಂಡಾದಲ್ಲಿ ಗ್ರಾಮ ಪಂಚಾಯಿತಿಯಿಂದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ಆದರೆ, ಗಲೀಜು ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ. ದನಗಳ ಮೂತ್ರ ಮತ್ತು ನಿವಾಸಿಗಳು ಬಳಸಿದ ಮಲಿನ ನೀರು ಮುಂದೆ ಹರಿದು ಹೋಗದೇ, ನಿಂತಲ್ಲಿಯೇ ಇರುತ್ತದೆ. ಇದರಿಂದಾಗಿ ಇಡೀ ತಾಂಡಾ ಗಬ್ಬೆದ್ದು ನಾರುತ್ತಿದೆ. ಮಲಿನ ವಾತಾವರಣದಿಂದಾಗಿ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದೆ. ಸೊಳ್ಳೆಗಳ ಕಡಿತದಿಂದ ನಿವಾಸಿಗಳು ರೋಗದಿಂದ ಬಳಲುತ್ತಿದ್ದಾರೆ’ ಎಂದು ತಾಂಡಾ ನಿವಾಸಿ ಲಕ್ಷ್ಮಣ ಲಮಾಣಿ ತಿಳಿಸಿದರು.

ನಮ್ಮಜ್ಜನ ಕಾಲದಿಂದಲೂ ಆಕಳುಗಳನ್ನು ಸಾಕುತ್ತಿದ್ದೇವೆ. ಹಾಲು ಮತ್ತು ಬೆಣ್ಣೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಜೀವನ ಸುಧಾರಣೆಗೆ ಸರ್ಕಾರ ನೆರವು ನೀಡಬೇಕು ಜಮಲಪ್ಪ ಲಮಾಣಿ, ಆಕಳು ಸಾಕಣೆದಾರ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ