ಧಾರವಾಡ | ಸಕ್ಕರೆಗೆ ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಗಡುವು ನೀಡಿದ ರೈತರು

ಧಾರವಾಡ | ಸಕ್ಕರೆಗೆ ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಗಡುವು ನೀಡಿದ ರೈತರು

ಧಾರವಾಡ | ಸಕ್ಕರೆಗೆ ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಗಡುವು ನೀಡಿದ ರೈತರು

ಧಾರವಾಡ: ಕಬ್ಬು ಮತ್ತು ಸಕ್ಕರೆಗೆ ಬೆಂಬಲ ಬೆಲೆ (ಎಂಎಸ್‌ಪಿ) ತಕ್ಷಣ ಘೋಷಿಸಬೇಕು ಮತ್ತು ಇತರೆ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

ತಾಲ್ಲೂಕಿನ ಯರಿಕೊಪ್ಪ ಕ್ರಾಸ್‌ನಲ್ಲಿ ಸೋಮವಾರ ರಾಜ್ಯ ರೈತ‌ ಸಂಘ ಮತ್ತು ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರು ಬೇಡಿಕೆಗಳನ್ನು ವಿವರಿಸಿದರು. ಹಸಿರು ಶಾಲುಗಳನ್ನು ಬೀಸಿ ಒಗ್ಗಟ್ಟು ಪ್ರದರ್ಶಿಸಿದರು.

ಬೆಂಬಲ ಬೆಲೆಯನ್ನು ಪ್ರತಿ ವರ್ಷ ಪರಿಷ್ಕರಿಸಬೇಕು. ಕೃಷಿ ವೆಚ್ಚಕ್ಕೆ ತಕ್ಕಂತೆ ಉತ್ಪನ್ನದ ಬೆಂಬಲ ಬೆಲೆಯನ್ನೂ ಹೆಚ್ಚಿಸಬೇಕು. ಬರ ಪರಿಹಾರ ಎಲ್ಲ ತಾಲ್ಲೂಕುಗಳಿಗೂ ಏಕರೂಪದಲ್ಲಿ ಅನ್ವಯವಾಗಬೇಕು ಎಂದು ಆಗ್ರಹಿಸಿದರು.

‘ಹಾವೇರಿ ಜಿಲ್ಲೆಯ ಗುತ್ತಲ ಭಾಗದಲ್ಲಿ ಬೆಂಕಿ ಬಿದ್ದು ಕಬ್ಬು ಬೆಳೆ ಹಾನಿಯಾಗಿದೆ. ಈ ಭಾಗದಲ್ಲಿ ಅಗ್ನಿ ಶಾಮಕ ಠಾಣೆ ಸ್ಥಾ‌ಪಿಸಬೇಕು. ಕಳೆದ ವರ್ಷದ ಹೆಚ್ಚುವರಿ ಬೆಲೆ ₹ 50 ಹಲವು ಬೆಳೆಗಾರರಿಗೆ ಪಾವತಿಯಾಗಿಲ್ಲ, ತಕ್ಷಣವೇ ಈ ಹಣ ಪಾವತಿ ಮಾಡಬೇಕು’ ಹಾವೇರಿ ಜಿಲ್ಲೆಯ ರೈತ ಮುಖಂಡರೊಬ್ಬರು ಮನವಿ ಮಾಡಿದರು.

‘ಕೇಂದ್ರ ಸರ್ಕಾರ ಕಬ್ಬು, ಸಕ್ಕರೆಗೆ ಬೆಂಬಲ ಬೆಲೆ ನಿಗದಿಪಡಿಸಿದರೆ, 5 ಕೋಟಿ ಬೆಳೆಗಾರರಿಗೆ ಅನುಕೂಲ ಆಗಲಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದರು.

ಅಡುಗೆ ತಯಾರಿಸಿದ ರೈತರು: ಸಭೆಯ ಸ್ಥಳದ ಪಕ್ಕದಲ್ಲಿ ರೈತರೇ ಅಡುಗೆ ತಯಾರಿಸಿದರು. ತರಕಾರಿ ಕತ್ತರಿಸಿ ಟೊಮೆಟೊ ಸಂಬಾರು ಸಿದ್ಧಪಡಿಸಿದರು. ಸಭೆಯಲ್ಲಿ ಪಾಲ್ಗೊಂಡವರಿಗೆ ಅನ್ನ, ಸಾಂಬಾರ್‌ ಬಡಿಸಿದರು. ರಾಗಿ ಅಂಬಲಿಯನ್ನು ವಿತರಿಸಲಾಯಿತು. ಮನೆಯಿಂದ ತಂದಿದ್ದ ಬಾಳೆ ಹಣ್ಣುಗಳನ್ನು ಹಂಚಿದರು.

ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್‌, ಹಾವೇರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಭೂಷಣ್‌ ಬೊರಸೆ, ರೈತ ಮುಖಂಡರಾದ ಸುಭಾಷ ಮಾದಣ್ಣವರ, ಅಶೋಕ ರಡ್ಡಿ, ಹನುಮಂತ ರಡ್ಡಿ ‌ಇತರರು ಇದ್ದರು.

‘ಅನುಮಾನಕ್ಕೆ ಆಸ್ಪದ ನೀಡಿದ ಮಧ್ಯರಾತ್ರಿ ಸಭೆ’

ಹುಬ್ಬಳ್ಳಿ: ‘ಕಬ್ಬು ಬೆಳೆಗಾರರ ಹೋರಾಟ ಹತ್ತಿಕ್ಕಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಭಾನುವಾರ ಮಧ್ಯರಾತ್ರಿ ನಡೆಸಿದ ರಹಸ್ಯ ಸಭೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದು ಕಾಂಗ್ರೆಸ್ ಮುಖಂಡ‌ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.

‘ಮಧ್ಯರಾತ್ರಿಯ ಸಭೆಯು ರಾಜಕೀಯ ಪ್ರೇರಿತ ನಡೆ ಎಂಬ ಅನುಮಾನವಿದೆ. ಪ್ರತಿಭಟನಾ ನಿರತ ರೈತರು ಕೇವಲ 30 ಕಿ.ಮೀ. ದೂರದಲ್ಲಿದ್ದರೂ, ಅಲ್ಲಿಗೆ ತೆರಳದೆ ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ರೈತ ಮುಖಂಡರನ್ನು ಮಧ್ಯರಾತ್ರಿಯಲ್ಲಿ ಕರೆಸಿ ಸಭೆ ನಡೆಸಿದ್ದರ ಔಚಿತ್ಯವೇನು’ ಎಂದು ಅವರು ಪ್ರಶ್ನಿಸಿದ್ದಾರೆ.

‘ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರಿ ಅತಿಥಿ ಗೃಹವನ್ನು ರಾಜಕೀಯ ಚರ್ಚೆ ಹಾಗೂ ಪ್ರಭಾವ ಬೀರುವ ಉದ್ದೇಶಕ್ಕೆ ಬಳಸಿರುವುದು ನೀತಿ ಸಂಹಿತೆಯ ಉಲ್ಲಂಘನೆ ಆಗಿರುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಮಧ್ಯರಾತ್ರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದು, ಸರ್ಕಾರಿ ಅಧಿಕಾರಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಮಡಿರುವ ಅನುಮಾನವಿದೆ. ಸಭೆಯ ಉದ್ದೇಶ, ಅಧಿಕಾರಿಗಳ ಭಾಗವಹಿಸುವಿಕೆಯ ಅಗತ್ಯ ಹಾಗೂ ಸರ್ಕಾರಿ ಅತಿಥಿ ಗೃಹ ಬಳಕೆಯ ಕುರಿತು ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು’ ಎಂದು ರಜತ್ ಒತ್ತಾಯಿಸಿದ್ದಾರೆ.

ಜೋಶಿ ಒಬ್ಬರೇ ದರ ನಿರ್ಧರಿಸಲು ಆಗದು: ನಿರಾಣಿ

ಹುಬ್ಬಳ್ಳಿ: ‘ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ಹೋರಾಟ ನ್ಯಾಯಸಮ್ಮತವಾಗಿದೆ. ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಬ್ಬರೇ ಅದರ ಬೆಲೆ ನಿರ್ಧರಿಸಲು ಆಗದು’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

‘ಇದು ದೇಶವ್ಯಾಪಿ ಸಮಸ್ಯೆ ಆಗಿರುವುದರಿಂದ ಸಮಗ್ರ ರಾಷ್ಟ್ರೀಯ ನೀತಿ ರೂಪಿಸುವ ಅಗತ್ಯವಿದೆ. ಕೃಷಿ, ಪೆಟ್ರೋಲಿಯಂ, ವಿದ್ಯುತ್ ಸೇರಿ ಸಂಬಂಧಪಟ್ಟ ಇಲಾಖೆಗಳ ಸಚಿವರು ಮತ್ತು ಸಚಿವರ ಸಮಿತಿ ಚರ್ಚಿಸಿ ತೀರ್ಮಾನಿಸಬೇಕು. ಬೆಲೆ ನಿಗದಿಪಡಿಸುವಾಗ ರೈತರು, ಗ್ರಾಹಕರು, ಸಕ್ಕರೆ ಕಾರ್ಖಾನೆಗಳು, ಸಾಲ ನೀಡಿರುವ ಬ್ಯಾಂಕ್‌ಗಳು ಮತ್ತು ಸರ್ಕಾರದ ಹಿತಾಸಕ್ತಿಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ದೇಶ‌ದಾದ್ಯಂತ 800ರಷ್ಟು ಸಕ್ಕರೆ ಕಾರ್ಖಾನೆಗಳಿದ್ದು, ರಾಜ್ಯದಲ್ಲಿ 75 ಕಾರ್ಖಾನೆಗಳು ಇವೆ. ಈ ಹಿಂದೆ ಡಾ. ರಂಗರಾಜನ್ ಸಮಿತಿಯೂ ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿ ಸೂತ್ರವೊಂದನ್ನು ರೂಪಿಸಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಕಡಿಮೆ ಇರುವುದರಿಂದ ರೈತರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೃಹಬಳಕೆಯ ಸಕ್ಕರೆ ಹಾಗೂ ವಾಣಿಜ್ಯ ಬಳಕೆಗೆ ಉಪಯೋಗಿಸುವ ಸಕ್ಕರೆಗೆ ಪ್ರತ್ಯೇಕ ದರ ನಿಗದಿಪಡಿಸಬಹುದು’ ಎಂದು ಹೇಳಿದರು.

ಕಬ್ಬು ಬೆಳೆಗಾರರ ಹೋರಾಟ ತಾರ್ಕಿಕ ಅಂತ್ಯವಾಗುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಹಾವೇರಿ ಜಿಲ್ಲೆಯ ಗುತ್ತಲ ಭಾಗದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ

ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ, ಹಾವೇರಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ