
ಉಡುಪಿ: ಮಾರ್ಪಾಡು ಮಾಡಲಾದ 4 ಬಂದೂಕು ಪತ್ತೆ
ಉಡುಪಿ: ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುವ ಕಾರಣಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾದ್ಯಂತ ಶಸ್ತ್ರಾಸ್ತ್ರಗಳ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದ್ದು, ಮಾರ್ಪಾಡು ಮಾಡಲಾದ 4 ಬಂದೂಕುಗಳನ್ನು ಪತ್ತೆ ಹಚ್ಚಲಾಗಿದೆ.
ಶಸ್ತ್ರಾಸ್ತ್ರ ಹೊಂದಿರುವ ವ್ಯಕ್ತಿಗಳ ಹಿನ್ನೆಲೆ, ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಸ್ಥಿತಿ ಹಾಗೂ ಅವುಗಳಲ್ಲಿ ಯಾವುದೇ ರೀತಿಯ ಅನಧಿಕೃತ ಮಾರ್ಪಾಡು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ವಿಶೇಷ ತಪಾಸಣಾ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತವಾಗಿ ಮಾರ್ಪಾಡು ಮಾಡಿರುವುದಕ್ಕೆ ಸಂಬಂಧಿಸಿ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಬಂದೂಕುಗಳನ್ನು ಅನಧಿಕೃತವಾಗಿ ಮಾರ್ಪಾಡು ಮಾಡಿದವರ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959 ರ ಕಲಂ 25ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆ ತಿಳಿಸಿದೆ.
ವಿಶೇಷ ಕಾರ್ಯಾಚರಣೆಯು ಒಂದು ತಿಂಗಳು ನಡೆದಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದೆ.
ಜಿಲ್ಲೆಯಲ್ಲಿ ರೌಡಿಶೀಟರ್‌ಗಳ ಹಾಗೂ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ ವ್ಯಕ್ತಿಗಳ ಪ್ರಸ್ತುತ ನಡವಳಿಕೆ, ಅವರು ಶಸ್ತ್ರಾಸ್ತ್ರ ಹೊಂದಿದ ನಂತರ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ವಿಶೇಷವಾಗಿ ಪರಿಶೀಲನೆ ನಡೆಸಲಾಗಿದೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ ಮತ್ತು ಅನಧಿಕೃತ ಮಾರ್ಪಾಡುಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಿಗಾ ವಹಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹೇಳಿಯಲ್ಲಿ ತಿಳಿಸಿದ್ದಾರೆ.
ಅನಧಿಕೃತ ಶಸ್ತ್ರಾಸ್ತ್ರ ಬಳಕೆ, ಮಾರ್ಪಾಡು ಅಥವಾ ಸಂಗ್ರಹದ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ದೂ. ಸಂಖ್ಯೆಗಳಾದ: 08202 526444, 08202 526709, 94808 05400ಕ್ಕೆ(ವಾಟ್ಸಾಪ್ ನಂಬರ್) ಮಾಹಿತಿ ನೀಡಬಹುದು ಎಂದೂ ಹೇಳಿದ್ದಾರೆ.
ಬೆಳೆ ರಕ್ಷಣೆಗಾಗಿ ಪಡೆದಿದ್ದ ಬಂದೂಕಿಗೆ ಯಾವುದೇ ಪೂರ್ವಾನುಮತಿ ಇಲ್ಲದೆ ಟೆಲಿಸ್ಕೋಪ್ ಅಳವಡಿಸಿ ಮಾರ್ಪಾಡು ಮಾಡಿದ ಆರೋಪದ ಮೇಲೆ ಶಿರೂರು ಗ್ರಾಮದ ಮುದ್ದುಮನೆ ನಿವಾಸಿ ವಿವೇಕಾನಂದ ಕೆ. ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಹಾಗೂ ಆತ್ಮರಕ್ಷಣೆ ಬಗ್ಗೆ ಫಾರಂ ನಂ 111 ಪರವಾನಗಿ ಹೊಂದಿರುವ ರೈಫಲ್‌ಗೆ ಹೆಚ್ಚುವರಿ ಟೆಲಿಸ್ಕೋಪ್ ಆಳವಡಿಸಿರುವ ಆರೋಪದಲ್ಲಿ ಕೌಡೂರು ಗ್ರಾಮದ ದಿನೇಶ್ ಶೆಟ್ಟಿ ಎಂಬುವವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.