
ರೈತರ ಖಾತೆಗೆ ಜಮಾ ಆಗದ ಪರಿಹಾರ: ಛಲವಾದಿ ನಾರಾಯಣಸ್ವಾಮಿ
ಹುಬ್ಬಳ್ಳಿ: ‘ರಾಜ್ಯದಲ್ಲಿ ತೀವ್ರ ಬರ ಇದ್ದು, ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕಾದ ಸರ್ಕಾರ ಅಲ್ಪ ಪರಿಹಾರ ಘೋಷಿಸಿದೆ. ಅದು ಇನ್ನೂ ರೈತರ ಖಾತೆಗೆ ಜಮಾ ಆಗಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
‘ರಾಜ್ಯದಲ್ಲಿ ಶೇ 82ರಷ್ಟು ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ₹25 ಸಾವಿರ ಪರಿಹಾರ ನೀಡುವುದು ಬಿಟ್ಟು, ಕೇಂದ್ರದತ್ತ ಬೊಟ್ಟು ಮಾಡುತ್ತಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಬೆಂಗಳೂರಿಗೆ ಬಂದು ನೆಲಸಿದ ಹಲವು ಶಾಸಕರು ಎರಡು ಮದುವೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಂತಹ ಶಾಸಕರ ಪಟ್ಟಿಯನ್ನು ಕೂಡಲೇ ಅವರು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕ್ಷೇತ್ರದ ಜನ, ಅವರ ಕುಟುಂಬದ ಸದಸ್ಯರು ಅನುಮಾನದಿಂದ ನೋಡುತ್ತಾರೆ’ ಎಂದರು.
‘ಸ್ವಾಮೀಜಿಗಳು ತಮ್ಮ ರಾಯಭಾರಿಗಳಾಗಿ ಕೆಲಸ ಮಾಡಬೇಕು. ಅದರಿಂದ ಮುಕ್ತಿ ಸಿಗುತ್ತದೆ ಎಂದು ಸಿ.ಎಂ ಹೇಳಿದ್ದಾರೆ. ಸ್ವಾಮೀಜಿಗಳು ರಾಜಕಾರಣಿಗಳ ಏಜೆಂಟರಲ್ಲ. ಈ ರೀತಿ ಕ್ಷುಲ್ಲಕವಾಗಿ ಮಾತುಡುವುದು ಸರಿಯಲ್ಲ. ಅವರಿಗೆ ಅಧಿಕಾರದ ಅಮಲು ತಲೆಗೆ ಏರಿದೆ’ ಎಂದು ಹೇಳಿದರು.