
‘ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ’: ಜಗದೀಶ್ ಗಸ್ತಿ
ಬೆಳಗಾವಿ: ‘ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ದೃಢತೆ, ಆತ್ಮವಿಶ್ವಾಸ, ಶಿಸ್ತು, ನಾಯಕತ್ವ ಹಾಗೂ ತಂಡದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಜಗದೀಶ್ ಗಸ್ತಿ ಹೇಳಿದರು.
ನಗರದ ಡಿ.ವೈ. ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಈಚೆಗೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಂಜುಮನ್ ಪದವಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಜೂಡೊ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಪರ್ಧೆಯಲ್ಲಿ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳನ್ನು ಪ್ರತಿನಿಧಿಸಿದ ಸುಮಾರು 40 ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರುವಿವಿಧ ವಿಭಾಗಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಜೂಡೊ ಕೌಶಲವನ್ನು ಪ್ರದರ್ಶಿಸಿದರು.
ಅಂಜುಮನ್ ಕಾಲೇಜಿನ ಪ್ರಾಂಶುಪಾಲ ಎಸ್.ಎಂ. ಖತೀಬ್ ಮಾತನಾಡಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜೆ.ಎ. ಜಾಗೀರ್ದಾರ್, ಐಕ್ಯೂಎಸಿ ಸಂಯೋಜಕ ಇರ್ಫಾನ್, ಮುಖ್ಯ ತರಬೇತುದಾರರಾದ ರೋಹಿಣಿ ಪಾಟೀಲ ಸೇರಿದಂತೆ ಕ್ರೀಡಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.