
ಚಿಂಚೋಳಿ: ಸೌಲಭ್ಯ ವಂಚಿತ ಗ್ರಾಮೀಣ ಅಂಚೆ ಕಚೇರಿಗಳು
ಚಿಂಚೋಳಿ: ತಾಲ್ಲೂಕಿನ ಐನೋಳ್ಳಿ ಗ್ರಾಮದಲ್ಲಿ ಶತಮಾನಕ್ಕಿಂತಲೂ ಹಳೆಯ ಶಾಖಾ ಅಂಚೆ ಕಚೇರಿಗೆ ಸ್ವಂತ ಕಟ್ಟಡವಿಲ್ಲದೇ ಹಾಗೂ ಗ್ರಾಹಕರಿಗೆ ಅಗತ್ಯ ಮೂಲಸೌಕರ್ಯಗಳಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕಿನ ವಿವಿಧೆಡೆ ಇರುವ ಶಾಖಾ ಅಂಚೆ ಕಚೇರಿಗಳ ಸ್ಥಿತಿ ಇದಕ್ಕಿಂತಲೂ ದಯನೀಯವಾಗಿದೆ. ಎಲ್ಲೆವೂ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ.
ಚಿಂಚೋಳಿ ತಾಲ್ಲೂಕಿನಲ್ಲಿ 5 ಉಪ ಅಂಚೆ ಕಚೇರಿಗಳಿದ್ದು, ನಿಡಗುಂದಾ, ಸುಲೇಪೇಟ, ಚಿಮ್ಮನಚೋಡ, ಚಿಂಚೋಳಿ ಮತ್ತು ಚಂದಾಪುರ ಕಾರ್ಯನಿರ್ವಹಿಸುತ್ತಿವೆ. ಚಿಂಚೋಳಿ ಯಲ್ಲಿ ಉಪ ಅಂಚೆ ಕಚೇರಿ ಅನೇಕ ವರ್ಷ ಗಳಿಂದ ಸ್ವಂತ ಕಟ್ಟಡ ಹೊಂದಿದೆ. ಸುಲೇಪೇಟದಲ್ಲಿ ಕೆಲ ವರ್ಷಗಳಿಂದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಕಡೆಗಳಲ್ಲಿ ಬಾಡಿಗೆ ಕಟ್ಟಡಗಳೇ ಗತಿಯಾಗಿವೆ.
ಉಪ ಅಂಚೆ ಕಚೇರಿಗಳ ಸ್ಥಿತಿ ಹೀಗಿರುವಾಗ ಶಾಖಾ ಅಂಚೆ ಕಚೇರಿಗಳು ದುಸ್ಥಿತಿ ಕಡೆಗೆ ಯಾರು ಗಮನ ಹರಿಸದಂತಾಗಿದೆ. ಇದರಿಂದ ಶಾಖಾ ಅಂಚೆ ಕಚೇರಿಗಳು ಬಿಪಿಎಂ ವಾಸವಾಗಿರುವ ಬಾಡಿಗೆ ಕೋಣೆಗಳೆ ಶಾಖಾ ಅಂಚೆ ಕಚೇರಿಗಳಾಗಿಯೂ ಕಾರ್ಯನಿರ್ವಹಿಸುವಂತಾಗಿದೆ.
ತಾಲ್ಲೂಕಿನ ಐನೋಳ್ಳಿಯಲ್ಲಿರುವ ಶಾಖಾ ಅಂಚೆ ಕಚೇರಿ ಶತಮಾನಕ್ಕಿಂತಲೂ ಹಳೆಯದಾದ ಮನೆಯ ಕಾರಿಡಾರನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬಿಪಿಎಂ ಹಾಗೂ ಗ್ರಾಮೀಣ ಡಾಕ್ ಸೇವಕ್ (ಪೋಸ್ಟ್ ಮ್ಯಾನ್) ಕಾರ್ಯನಿರ್ವಹಿಸುತ್ತಿದ್ದಾರೆ. ಅಂಚೆ ಕಚೇರಿಗಳಲ್ಲಿ ಬ್ಯಾಂಕ್ ಸೌಲಭ್ಯ ಒದಗಿಸಲಾಗುತ್ತಿದ್ದು ಸ್ವಂತ ಕಟ್ಟಡ ಅಥವಾ ಸರ್ಕಾರದ ಸುಸಜ್ಜಿತ ಕಟ್ಟಡ ಇಲ್ಲವೇ ಗ್ರಾ.ಪಂ.ಗಳಲ್ಲಿ ಒಂದು ಕೊಠಡಿ ನೀಡಿದರೆ ಜನರಿಗೆ ಅನುಕೂಲವಾಗಲಿದೆ.
ಐನೋಳ್ಳಿಯ ಶಾಖೆಯಲ್ಲಿ 256 ಆರ್.ಡಿ ಖಾತೆ, 171 ಸುಕನ್ಯಾ ಸಮೃದ್ಧಿ ಸೇರಿ 976 ಉಳಿತಾಯ ಖಾತೆಗಳು ಮತ್ತು 40ಕ್ಕೂ ಹೆಚ್ಚು ವಿಮಾ ಖಾತೆಗಳಿವೆ. ನಾವು ಜನರ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುತ್ತಿದ್ದೇವೆ. ಇದರಿಂದ ಜನರ ಸಹಕಾರ ಉತ್ತಮವಾಗಿದೆ ಎನ್ನುತ್ತಾರೆ ಐನೋಳ್ಳಿ ಗ್ರಾಮದ ಬಿಪಿಎಂ ಅಭಿಷೇಕ ಚವ್ಹಾಣ.
ಅಂಚೆ ಕಚೇರಿಗಳು ಜನರಿಗೆ ಕಾಣುವಂತಹ ಸ್ಥಳಗಳಲ್ಲಿ ಇರಬೇಕು. ಆಗ ಅವುಗಳ ಬಲವರ್ಧನೆ ಜತೆಗೆ ಜನರಿಗೂ ಉತ್ತಮ ಸೇವೆ ಲಭಿಸುತ್ತವೆ ಎಂಬುದು ಐನೋಳ್ಳಿ ಗ್ರಾಮದ ಮುಖಂಡ ವಿಜಯಕುಮಾರ ರೊಟ್ಟಿ ಅಭಿಪ್ರಾಯ.
ಕುಂಚಾವರಂ ಉಪ ಅಂಚೆ ಕಚೇರಿ ಅಗತ್ಯ
ಚಿಂಚೋಳಿ ತಾಲ್ಲೂಕಿನ ಪ್ರಮುಖ ಗ್ರಾಮವಾದ ಗ್ರಾ.ಪಂ. ಕೇಂದ್ರಸ್ಥಾನ ಕುಂಚಾವರಂನಲ್ಲಿ ಉಪ ಕಚೇರಿ ಅತಿ ಅಗತ್ಯವಿದೆ. ಚಿಂಚೋಳಿಯಿಂದ ಸುಮಾರು 30 ಕಿ.ಮೀ ದೂರವಿರುವ ಕುಂಚಾವರಂನಲ್ಲಿ ಉಪ ಅಂಚೆ ಕಚೇರಿ ಸ್ಥಾಪಿಸಿದರೆ ಗ್ರಾಮದ ಸುತ್ತಮುತ್ತಲಿನ 21 ಜನ ವಸತಿ ಪ್ರದೇಶಗಳಿಗೆ ಅನುಕೂಲವಾಗಲಿದೆ.
ತಾಲ್ಲೂಕಿನಲ್ಲಿ 30 ಕಿ.ಮೀ ಅಂತರ ಹೊಂದಿರುವ ಉಪ ಅಂಚೆ ಕಚೇರಿ ಎಲ್ಲಿಯೂ ಇಲ್ಲ. ತೆಲಂಗಾಣ ಗಡಿಗೆ ಹೊಂದಿಕೊಂಡ ಕುಂಚಾವರಂಗೆ ಉಪ ಅಂಚೆ ಕಚೇರಿ ಮಂಜೂರಿಗೆ ತಾ.ಪಂ. ಮಾಜಿ ಸದಸ್ಯ ನರಶಿಮ್ಲು ಕುಂಬಾರ ಮನವಿ ಮಾಡಿದ್ದಾರೆ.