
ಶಿಡ್ಲಘಟ್ಟ| ಹಂಡಿಗನಾಳ ಮಹಿಳಾ ಡೇರಿ: ಕಾಂಗ್ರೆಸ್ ಬೆಂಬಲಿಗರ ಜಯ
ಶಿಡ್ಲಘಟ್ಟ: ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ 11 ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರ ಪಾಲಾಗಿವೆ. ಜೆಡಿಎಸ್ ಬೆಂಬಲಿಗರು ಒಂದು ಸ್ಥಾನಕ್ಕೆ ಸೀಮಿತರಾಗಿದ್ದಾರೆ.
ಮಾಜಿ ಸಚಿವ ವಿ.ಮುನಿಯಪ್ಪ ಅವರ ಹುಟ್ಟೂರು ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬೆಳಗ್ಗೆಯಿಂದ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.
ಮುಂದಾಲೋಚನೆ ಕ್ರಮವಾಗಿ ಮತದಾನ ನಡೆದ ಸಹಕಾರ ಸಂಘದ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಅನಸೂಯಮ್ಮ, ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಮುನಿರತ್ನಮ್ಮ, ಹಿಂದುಳಿದ ವರ್ಗ ‘ಎ’ ಮೀಸಲು ಕ್ಷೇತ್ರದಿಂದ ಮುನಿರತ್ನಮ್ಮ ಹಾಗೂ ಹಿಂದುಳಿದ ವರ್ಗ ‘ಬಿ’ ಮೀಸಲು ಕ್ಷೇತ್ರದಿಂದ ಪಾರ್ವತಮ್ಮ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಎಸ್.ನಳಿನ, ರತ್ನಮ್ಮ, ಕಾಂತಮ್ಮ, ಯಶೋಧಮ್ಮ, ಎನ್.ಜಿ.ಶಾಂತಮ್ಮ, ಅನಸೂಯಮ್ಮ, ಮುನಿರತ್ನಮ್ಮ ಮತ್ತು ಶಾರದಮ್ಮ ಚುನಾಯಿತರಾಗಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಡೇರಿ ಕಾರ್ಯದರ್ಶಿ ರೂಪ, ಅರುಣ್ ಕುಮಾರ್, ಗೋವಿಂದರಾಜು, ನಾರಾಯಣಸ್ವಾಮಿ, ಗಜೇಂದ್ರ, ಮಂಜುನಾಥ್ ಸೇರಿ ಇತರರು ಹಾಜರಿದ್ದರು.