
ಶ್ರೀನಿವಾಸಪುರ| ಉತ್ತಮ ನಾಯಕನ ಆಯ್ಕೆ ನಿಮ್ಮ ಕೈಯಲ್ಲಿದೆ: ಸಿ.ಟಿ.ರವಿ
ಶ್ರೀನಿವಾಸಪುರ: ದೇಶದಲ್ಲಿ ಎಸ್‌ಐಆರ್‌ನಿಂದ ಅರ್ಹ ಮತದಾರರಿಗೆ ಮಾತ್ರ ಮತ ಹಾಕುವ ಹಕ್ಕನ್ನು ಕಲ್ಪಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸಿ.ಟಿ.ರವಿ ಹೇಳಿದರು.
ಪಟ್ಟಣದ ವಿಐಪಿ ಸಂಸ್ಥೆಯ ಆವರಣದಲ್ಲಿ ಸೋಮವಾರ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪರ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ’ಉತ್ತಮ ನಾಯಕನ ಆಯ್ಕೆ ನಿಮ್ಮ ಕೈಯಲ್ಲಿದೆ. ಒಳ್ಳೆ ಸರ್ಕಾರ ರಚಿಸಿದರೆ, ಉತ್ತಮ ಆಡಳಿತ ನೀಡಲು ಸಾಧ್ಯ’ ಎಂದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭರವಸೆಯನ್ನು ಸಮರ್ಪಕವಾಗಿ ಈಡೇರಿಸದೆ ಭ್ರಷ್ಟ ಸರ್ಕಾರವಾಗಿದೆ. ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಪಾವತಿಯಾಗಿಲ್ಲ. ರೈತರಿಂದ ಖರೀದಿಸಿರುವ ರಾಗಿ, ಜೋಳ, ತೊಗರಿ ಹಣ ಖಾತೆಗೆ ಇನ್ನೂ ಜಮೆ ಮಾಡಿಲ್ಲ. ಹಾಲಿನ ದರ ಹೆಚ್ಚಳ ಮಾಡುವುದಿಲ್ಲ. ಹಾಗಾಗಿ 2028ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಆಡಳಿತಕ್ಕೆ ತನ್ನಿ’ ಎಂದರು.
ಆಗ್ನೇಯ ಪದವೀಧರರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರು ಶಿಕ್ಷಣ ತಜ್ಞರಾಗಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಹಾಗಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ, ‘ಹಿಂದಿನ ಚುನಾವಣೆಗಳಲ್ಲಿ ತೂಪಲ್ಲಿ ಚೌಡರೆಡ್ಡಿ ಮತ್ತು ವೈ.ಎ.ನಾರಾಯಣಸ್ವಾಮಿ ಜೋಡೆತ್ತುಗಳಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಚುನಾವಣೆಯನ್ನು ಎದುರಿಸಿದ್ದರು. ಅದೇ ರೀತಿಯ ಸಂಘಟಿತ ಪ್ರಯತ್ನವನ್ನು ಈಗಲೂ ಮುಂದುವರಿಸಬೇಕು ಎಂದು ಹೇಳಿದರು.
ಸಂಸದ ಮಲ್ಲೇಶ್ ಬಾಬು, ವೈ.ಎ.ನಾರಾಯಣಸ್ವಾಮಿ, ಚೌಡರೆಡ್ಡಿ, ಕೆ.ಎಂ.ಸುರೇಶ್, ಓಂ ಶಕ್ತಿ ಚಲಪತಿ, ವೆಂಕಟಮನೆಯಪ್ಪ, ವಾಸು, ರವಿಶಂಕರ್, ವೇಣುಗೋಪಾಲ್, ನಾಗಭೂಷಣ್ ಇತರರು ಭಾಗವಹಿಸಿದ್ದರು.