
ನರಸಿಂಹರಾಜಪುರ: ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು 9ಕ್ಕೆ ಇಳಿಕೆ
ನರಸಿಂಹರಾಜಪುರ: ಹಲವು ವರ್ಷಗಳ ಬಳಿಕ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿ ಪ್ರಕಟವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದೆ.
ತಾಲ್ಲೂಕು ಭೌಗೋಳಿಕವಾಗಿ ವಿಸ್ತಾರ ಹೊಂದಿದ್ದರೂ ಜನಸಂಖ್ಯೆ ಕಡಿಮೆ ಇದೆ. ಈ ಹಿಂದೆ ತಾಲ್ಲೂಕಿನ ವ್ಯಾಪ್ತಿಯಲ್ಲಿ 11 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದವು. ಮರುವಿಂಗಡಣೆಯ ಬಳಿಕ ಅವುಗಳ ಸಂಖ್ಯೆ 9ಕ್ಕೆ ಇಳಿದಿದೆ. ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯನ್ನು 9 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ.
ಈ ಹಿಂದೆ ಇದ್ದ ಮೆಣಸೂರು ಕ್ಷೇತ್ರವನ್ನು ಕಡಹಿನಬೈಲು ಕ್ಷೇತ್ರಕ್ಕೆ ಹಾಗೂ ನಾಗಲಾಪುರ ಕ್ಷೇತ್ರವನ್ನು ಹೊನ್ನೇಕೂಡಿಗೆ ಕ್ಷೇತ್ರಕ್ಕೆ ಸೇರಿಸಲಾಗಿದೆ. ಜನಸಂಖ್ಯೆಯನ್ನು ಮರುವಿಂಗಡಣೆಗೆ ಮಾನದಂಡವಾಗಿ ಪರಿಗಣಿಸಲಾಗಿದೆ.
ಮುತ್ತಿನಕೊಪ್ಪ, ಕಡಹಿನಬೈಲು, ಬಾಳೆ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಸೀತೂರು ಮತ್ತು ಹೊನ್ನೇಕೂಡಿಗೆ ಕ್ಷೇತ್ರಗಳು ಸಾಮಾನ್ಯ ಮಹಿಳೆ, ಹರಾವರಿ ಕ್ಷೇತ್ರ ಹಿಂದುಳಿದ ವರ್ಗ ‘ಎ’ ಮಹಿಳೆ, ಕರ್ಕೇಶ್ವರ ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಮಾಗುಂಡಿ ಕ್ಷೇತ್ರ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ.
ಜನಸಂಖ್ಯೆಯ ಆಧಾರದಲ್ಲಿ ಬಿ. ಕಣಬೂರು 11,874 ಜನಸಂಖ್ಯೆಯೊಂದಿಗೆ ಅತಿ ದೊಡ್ಡ ಕ್ಷೇತ್ರವಾಗಿದೆ. ಸೀತೂರು 3,797 ಜನಸಂಖ್ಯೆ ಹೊಂದಿದ್ದು, ಅತಿ ಚಿಕ್ಕ ಕ್ಷೇತ್ರವಾಗಿದೆ. ಒಂಬತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಾ ಗಿವೆ. ಸಾಮಾನ್ಯ ವರ್ಗದ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ.
ಈ ಹಿಂದೆ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರಿಂದ ಹಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೆ ಎನ್ಡಿಎ ಮೈತ್ರಿಕೂಟ ರಚನೆಯಾಗಲಿದ್ದು, ಬಹುತೇಕ ಕ್ಷೇತ್ರಗಳಲ್ಲಿ ನೇರ ಹಣಾಹಣಿ ನಡೆಯುವ ಸಾಧ್ಯತೆಯಿದೆ ಎಂದು ರಾಜಕೀಯ ವಲಯದಲ್ಲಿ ಅಂದಾಜಿಸಲಾಗಿದೆ.
ಬಹುತೇಕ ರಾಜಕೀಯ ಪಕ್ಷಗಳು ಯುವಕರು ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡುವ ಚಿಂತನೆ ನಡೆಸಿವೆ. ಆದರೆ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಗೆಲ್ಲುವ ಸಾಧ್ಯತೆ, ಚುನಾವಣಾ ವೆಚ್ಚ ಭರಿಸುವ ಆರ್ಥಿಕ ಸಾಮರ್ಥ್ಯ ಮತ್ತು ಅಭ್ಯರ್ಥಿಯ ಜಾತಿ ಪ್ರಮುಖ ಮಾನದಂಡಗಳಾಗುವ ಸಾಧ್ಯತೆಯಿದೆ ಎಂದು ರಾಜಕೀಯ ಪಕ್ಷಗಳ ಮುಖಂಡರು ಅಭಿಪ್ರಾಯಪಡುತ್ತಾರೆ.
ಹಿಂದೆ ಪಕ್ಷದ ಅಸ್ತಿತ್ವ ಉಳಿಸಿಕೊ ಳ್ಳುವ ಉದ್ದೇಶದಿಂದಲೂ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಈಗ ಗೆಲ್ಲುವ ಸಾಧ್ಯತೆ ಇದ್ದರೆ ಮಾತ್ರ ಯುವಜನರು ಸ್ಪರ್ಧಿಸಲು ಮುಂದೆ ಬರುತ್ತಿರು ವುದು ಹೊಸ ಬೆಳವಣಿಗೆಯಾಗಿದೆ ಎಂದು ಮುಖಂಡರೊಬ್ಬರು ಹೇಳಿದರು.
ಮೂರಕ್ಕೆ ಹೆಚ್ಚಿದ ಜಿಲ್ಲಾ ಪಂಚಾಯಿತಿ ಸ್ಥಾನಗಳು
ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯನ್ನು ಹಿಂದೆ ಎರಡು ಭಾಗಗಳಾಗಿ ವಿಂಗಡಿಸಿ, ತಲಾ ಏಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಂದರಂತೆ ಒಟ್ಟು ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿತ್ತು. ಪ್ರಸ್ತುತ ಕ್ಷೇತ್ರಗಳ ಮರುವಿಂಗಡಣೆಯೊಂದಿಗೆ ಜಿಲ್ಲಾ ಪಂಚಾಯಿತಿ ಸ್ಥಾನಗಳ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸಲಾಗಿದೆ.
ಮುತ್ತಿನಕೊಪ್ಪ ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬಿ’ ಮಹಿಳೆ, ಕರ್ಕೇಶ್ವರ ಕ್ಷೇತ್ರವನ್ನು ಸಾಮಾನ್ಯ ವರ್ಗ ಹಾಗೂ ಬಿ. ಕಣಬೂರು ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ.
ಮರುವಿಂಗಡಣೆಯ ಪ್ರಕಾರ ಮುತ್ತಿನಕೊಪ್ಪ, ಕಡಹಿನಬೈಲು, ಮೆಣಸೂರು, ನಾಗಲಾಪುರ ಮತ್ತು ಹೊನ್ನೇಕೂಡಿಗೆ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಮುತ್ತಿನಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರ ರಚಿಸಲಾಗಿದೆ. ಕರ್ಕೇಶ್ವರ, ಕಾನೂರು, ಸೀತೂರು, ಗುಬ್ಬಿಗಾ, ಬಾಳೆ ಹಾಗೂ ಆಡುವಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಕರ್ಕೇಶ್ವರ ಕ್ಷೇತ್ರ ರಚಿಸಲಾಗಿದೆ. ಬಿ. ಕಣಬೂರು, ಬನ್ನೂರು ಮತ್ತು ಮಾಗುಂಡಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಬಿ. ಕಣಬೂರು ಕ್ಷೇತ್ರ ರೂಪಿಸಲಾಗಿದೆ.
ಹೊಸದಾಗಿ ರಚನೆಯಾಗಿರುವ ಕರ್ಕೇಶ್ವರ ಜಿಲ್ಲಾ ಪಂಚಾಯಿತಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಿರುವುದಕ್ಕೆ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಗಳು ಹೆಚ್ಚಾದರೆ ಅನುದಾನವೂ ಹೆಚ್ಚಾಗಿ, ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
261018-126-1773270375