
ಸಂಬಳ 4.3 ಲಕ್ಷ, ಹೋಮ್ ಲೋನ್ 3.24 ಕೋಟಿ : ಸಾಲ ತೀರಿಸುವುದೇ ಹೇಗೆಂಬ ಚಿಂತೆ
Home Loan: ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಸ್ವಂತ ಮನೆ ಅಂದುಕೊಂಡಷ್ಟು ಸುಲಭ ಅಲ್ಲ. ಮನೆ ಕಟ್ಟಿ ನೋಡು-ಮದುವೆ ಮಾಡಿ ನೋಡು ಎನ್ನುವ ಮಾತಿದೆ. ಒಂದು ಲೆಕ್ಕ ಇಟ್ಟುಕೊಂಡು ಮನೆಗೆ ಕೈ ಹಾಕಿದರೆ ಎಲ್ಲಾ ಕೆಲಸ ಮುಗಿುವಷ್ಟರಲ್ಲಿ ಇನ್ನೊಂದು ಲೆಕ್ಕವಾಗಿ ಬಿಡುತ್ತದೆ. ಇಷ್ಟಕ್ಕೂ ಯಾರೂ ಕೈಯ್ಯಲ್ಲಿ ದುಡ್ಡು ಇಟ್ಟುಕೊಂಡೇ ಮನೆ ನಿರ್ಮಾಣಕ್ಕೆ ಇಳಿಯುವುದಿಲ್ಲ. ಬ್ಯಾಂಕ್ ಲೋನ್ ತೆಗೆದುಕೊಳ್ಳಲೇ ಬೇಕು.
ಕನಸಿನ ಮನೆಗೆ ಕೋಟಿಗಟ್ಟಲೆ ಖರ್ಚಾಗುವಾಗ ಹೊಮ್ ಲೋನ್ ಮಾಡೇಬೇಕಾಗುತ್ತದೆ. ಲೋನ್ ತೆಗೆದುಕೊಂಡರೆ ಸಾಕೇ? ಪ್ರತೀ ತಿಂಗಳು ಇಎಂಐ ಕಟ್ಟಬೇಕು. ಈ ಮೂಲಕವೇ ಮನೆಗೆ ತೆಗೆದುಕೊಂಡ ಸಾಲ ತೀರಿಸಬೇಕು. ಆದರೆ ಈ ಲೋನ್ ಇಎಂಐ ಜೀವನ ಪೂರ್ತಿ ನಡೆದರೆ ನೆಮ್ಮದಿ ಕೆಡುವುದಂತೂ ಸತ್ಯ.
ತೆಗೆದುಕೊಂಡ ದೊಡ್ಡ Home Loan:
ಇದೇ ರೀತಿಯ ಪ್ರಕರಣ ಈಗ ಸುದ್ದಿಯಲ್ಲಿದೆ. 35 ವರ್ಷದ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶೇರ್ ಮಾಡಿದ್ದಾರೆ. ಇವರು 3.6 ಕೋಟಿ ಮೌಲ್ಯದ ಫ್ಲಾಟ್ ಖರೀದಿಸಿದ್ದಾರೆ. ಅಸಲಿಗೆ ಇವರ ಮನೆಯಲ್ಲಿ ಇವರೊಬ್ಬರೇ ದುಡಿಯುವುದು. ಇಷ್ಟಿದ್ದರೂ ತಮ್ಮ ಕನಸಿನ ಮನೆ ಖರೀದಿಗಾಗಿ 36 ಲಕ್ಷ ಡೌನ್ ಪೇಮೆಂಟ್ ಮಾಡಿದ್ದಾರೆ. 3.24 ಕೋಟಿ ಹೋಮ್ ಲೋನ್ ಮಾಡಿದ್ದಾರೆ. ಸಾಲದ ಬಡ್ಡಿದರ 7.4 ಶೇ. ಸಾಲದ ಅವಧಿ 30 ವರ್ಷ. ಈಗ ಈ ವ್ಯಕ್ತಿಗೆ ಇಷ್ಟು ದೊಡ್ಡ ಸಾಲ ಮತ್ತು ಅದರ ಇಎಂಐ ಟೆನ್ಶನ್ ಕೊಡುತ್ತಿದೆಯಂತೆ. ಇಷ್ಟು ದೊಡ್ಡ ಸಾಲವನ್ನು ತೀರಿಸುವುದು ಹೇಗೆ ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ. ಆದರೆ, ಈ ಪೋಸ್ಟಿಗೆ ಬಂದ ರೆಸ್ಪಾನ್ಸ್ ನೋಡಿ ಏನಾಯಿತೋ ಏನೋ, ಆ ಮನುಷ್ಯ ತಾವು ಹಾಕಿದ ಪೋಸ್ಟನ್ನೇ ಡಿಲೀಟ್ ಮಾಡಿದ್ದಾರೆ. ಸುಮಾರು 3.5 ಮಿಲಿಯನ್ ಮಂದಿ ಈ ಪೋಸ್ಟನ್ನು ವೀಕ್ಷಿಸಿದ್ದರು.
EMI ಬಗ್ಗೆ ಕೇಳಿದ ನಂತರ ಹೆಚ್ಚಾದ ಟೆನ್ಶನ್ :
ಪ್ರಸ್ತುತ ಬಡ್ಡಿದರದ ಪ್ರಕಾರ 30 ವರ್ಷಗಳ ಅವಧಿಗೆ ಲೆಕ್ಕ ಹಾಕಿದರೆ 3.24 ಕೋಟಿ ಸಾಲದ ಇಎಂಐ ತಿಂಗಳಿಗೆ 2.24 ಲಕ್ಷ ಆಗಿರುವುದು. ಅಂದರೆ ತಿಂಗಳ ಸಂಬಳದ ಅರ್ಧಕ್ಕಿಂತ ಹೆಚ್ಚಾಗಿದೆ.
ಇಲ್ಲಿ ಇನ್ನೊಂದು ಸಮಾಧಾನಕರ ವಿಷಯ ಅಂದರೆ ಈ ವ್ಯಕ್ತಿ ಬಳಿ ಬೆಂಗಳೂರಿನಲ್ಲಿ 2BHK ಮನೆ (home) ಇದೆ. ಅದರ ಮೇಲೆ ಲೋನ್ ಇಲ್ಲ. ಈ ಮನೆಯ ಪ್ರಸ್ತುತ ಮೌಲ್ಯ ಸುಮಾರು 80 ಲಕ್ಷದವರೆಗೆ ಇರಬಹುದು. ಅಂದರೆ ಇವರ ಬಳಿ ಆಸ್ತಿ ಇಲ್ಲ ಎಂದಲ್ಲ. ಅಗತ್ಯ ಬಿದ್ದರೆ, ಅವರು ತಮ್ಮ ಆದಾಯವನ್ನು ಹೆಚ್ಚಿಸಲು ಈ ಮನೆಯನ್ನು ಬಾಡಿಗೆಗೆ ಕೂಡಾ ನೀಡಬಹುದು. ಹೊಸ ಸಾಲದ ಹೊರೆಯನ್ನು ಕಡಿಮೆ ಮಾಡಲು ಅದನ್ನು ಮಾರಾಟ ಮಾಡಲೂಬಹುದು.
ಜನರ ಕಾಮೆಂಟ್ ಹೀಗಿದೆ :
ಇವರ ಈ ಪೋಸ್ಟ್‌ಗೆ ಜನ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಸಾಲ ತೆಗೆದುಕೊಂಡಿರುವ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದರೆ ಹೊಸ ಫ್ಲಾಟ್ ಖರೀದಿ ನಿರ್ಧಾರ ಮರುಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ. ಇನ್ನು ಕೆಲವರು ಈಗಾಗಲೇ ನಿಮ್ಮ ಬಳಿ ಇರುವ 2BHK ಒಂದು ದೊಡ್ಡ ಸೆಕ್ಯೂರಿಟಿ ಆಗಬಹುದು ಎಂದಿದ್ದಾರೆ.
ಇನ್ನು ಇವರ ಬಳಿ ಕೇವಲ 13 ಲಕ್ಷ ನಗದು ಉಳಿದುಕೊಂಡಿರುವ ಬಗ್ಗೆಯೂ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ತಲೆ ಮೇಲೆ ಕೋಟಿಗಟ್ಟಲೆ ಸಾಲ ಇದೆ. ಮನೆಯಲ್ಲಿ ನೀವೊಬ್ಬರೇ ದುಡಿಯುವುದು. ಒಬ್ಬರೇ ದುಡಿಯುವ ಕುಟುಂಬದಲ್ಲಿ (family) ಇಷ್ಟು ದೊಡ್ಡ ಸಾಲ, ಕೈಯ್ಯಲ್ಲಿ ಬರೀ 13 ಲಕ್ಷ ನಗದು ಎಲ್ಲಿಗೂ ಸಾಕಾಗುವುದಿಲ್ಲ ಎಂದು ಬರೆದಿದ್ದಾರೆ. ಇದಲ್ಲದೆ, ಮನೆ ಇನ್ನೂ ನಿರ್ಮಾಣ ಹಂತದಲ್ಲಿದೆ. ಅದು ಕಂಪ್ಲೀಟ್ ಆಗಬೇಕಾದರೆ ಸುಮಾರು ನಾಲ್ಕು ವರ್ಷ ಬೇಕಾಗಬಹುದು. ಈ ಸಮಯದಲ್ಲಿ ಬಡ್ಡಿದರಗಳು ಮತ್ತು ಆದಾಯದಲ್ಲಿನ ಬದಲಾವಣೆಗಳು ಹಣಕಾಸು ಯೋಜನೆಯ ಮೇಲೂ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.