
‘ಕುಮಾರಸ್ವಾಮಿ ‘3ಬಿ’ಗೆ ಖ್ಯಾತರು’: ಸಚಿವ ಎಚ್.ಸಿ. ಬಾಲಕೃಷ್ಣ
ಬೆಂಗಳೂರು: ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳು ಉದ್ದೇಶಪೂರ್ವಕವಾಗಿದ್ದು, ಇದರಲ್ಲಿ ಯಾವುದೇ ಹೊಸ ವಿಷಯ ಇಲ್ಲ’ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕುಮಾರಸ್ವಾಮಿಯವರು ಬೆದರಿಕೆ ಹಾಕುವ ರಾಜಕಾರಣ ಮಾಡುತ್ತಿದ್ದಾರೆ. ಅವರು ಬ್ಲ್ಯಾಕ್ಮೇಲರ್, ಬ್ಯಾಕ್ ಸ್ಟ್ಯಾಬರ್, ಬ್ಲ್ಯಾಕ್ ಮ್ಯಾಜಿಕ್ ಈ ‘3ಬಿ’ಗೆ ಖ್ಯಾತರು. ಇದೇ ಇವರ ಕೆಲಸ’ ಎಂದು ವಾಗ್ದಾಳಿ ನಡೆಸಿದರು.
‘ಈ ಹಿಂದೆ, ಧರ್ಮಸಿಂಗ್, ಯಡಿಯೂರಪ್ಪ ಅವರ ಬೆನ್ನಿಗೆ ಚೂರಿ ಹಾಕಿದರು. ಮಾಟಮಂತ್ರ ಮಾಡಿಸಿ ಹೆದರಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೇಂದ್ರದಲ್ಲಿ ಉತ್ತಮ ಖಾತೆಯ ಸಚಿವರಾಗಿರುವ ಕುಮಾರಸ್ವಾಮಿ ಅವರು ತಮ್ಮ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವ ಬದಲು ದಿನನಿತ್ಯ ಟೀಕೆ ಮಾಡುತ್ತಾ ಏಕೆ ತಿರುಗಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ನೈಸ್ ಯೋಜನೆ ಆರಂಭಿಸಿದ್ದು ಎಚ್.ಡಿ.ದೇವೇಗೌಡರು. ಅದರಲ್ಲಿ ಲೋಪಗಳಾಗಿದ್ದರೆ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವುಗಳನ್ನು ಏಕೆ ಸರಿಪಡಿಸಲಿಲ್ಲ ಅಥವಾ ಈ ಬಗ್ಗೆ ಏಕೆ ಮಾತನಾಡಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ನೈಸ್ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸಹಕಾರ ಸಿಗಲಿಲ್ಲ ಎಂದು ಕುಮಾರಸ್ವಾಮಿ ಈಗ ಹೇಳುತ್ತಿದ್ದಾರೆ. ಹಾಗಿದ್ದರೆ ಆಗಲೇ ರಾಜೀನಾಮೆ ನೀಡಬೇಕಿತ್ತು, ಅಧಿಕಾರದಲ್ಲೇ ಏಕೆ ಮುಂದುವರಿದರು’ ಎಂದು ಹೇಳಿದರು.
‘ಕುಮಾರಸ್ವಾಮಿ ಅವರ ಕುಟುಂಬದ ಆಸ್ತಿ ವಿಚಾರಗಳ ಬಗ್ಗೆಯೂ ತನಿಖೆಯಾಗಲಿ. ಈ ಬಗ್ಗೆ ನಾವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ. ಅಲ್ಲದೆ, ಹತ್ತು ಸಾವಿರ ಜನರನ್ನು ಕರೆತಂದು ಹೆದ್ದಾರಿ ಬಂದ್ ಮಾಡುತ್ತೇನೆ ಎಂದು ಹೇಳುವುದು ಕುಮಾರಸ್ವಾಮಿಯವರ ಘನತೆಗೆ ತಕ್ಕದ್ದಲ್ಲ. ನೈಸ್ ವಿಚಾರದಲ್ಲಿ ಅಶೋಕ್ ಖೇಣಿ ಅವರೊಂದಿಗೆ ವ್ಯಾಪಾರಕ್ಕೆ ಯತ್ನಿಸಿದ್ದರು. ಅದು ಸಾಕಾರಗೊಳ್ಳಲಿಲ್ಲ. ಅದಕ್ಕೆ ಈಗ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ದೂರಿದರು.