
ಗೌಡನಹಳ್ಳಿ ಸರ್ಕಾರಿ ಶಾಲೆಗೆ ₹26 ಲಕ್ಷ ಮೌಲ್ಯದ ಹೊಸ ಬಸ್
ಶಿಡ್ಲಘಟ್ಟ: ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು ಚಿಕ್ಕ ಗೂಡ್ಸ್ ವಾಹನವನ್ನು ಅವಲಂಬಿಸಿತ್ತು. ಇಂದು 52 ಆಸನಗಳ ಹೊಸ ಬಸ್ ಹೊಂದಿದೆ.
ಸುತ್ತಮುತ್ತಲಿನ 20 ಗ್ರಾಮಗಳ 180ಕ್ಕೂ ಹೆಚ್ಚು ಮಕ್ಕಳು ಎರಡು ಬಸ್ ಮಾರ್ಗಗಳ ಮೂಲಕ ಪ್ರತಿದಿನ ಶಾಲೆಗೆ ಬರುತ್ತಿದ್ದಾರೆ. ಇದರಿಂದ ಶಾಲೆ ದಾಖಲಾತಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಪ್ರಸಕ್ತ 2026–27ನೇ ಸಾಲಿನಲ್ಲಿ 228 ಮಕ್ಕಳು ದಾಖಲಾಗಿದ್ದಾರೆ.
2019–20ರಲ್ಲಿ 82 ಇದ್ದ ದಾಖಲಾತಿ, 2024–25ರಲ್ಲಿ 155ಕ್ಕೆ ಏರಿತು. ನಂತರ ಮತ್ತಷ್ಟು ಹೆಚ್ಚಳ ಕಂಡು ಪ್ರಸಕ್ತ ಸಾಲಿನಲ್ಲಿ 228ಕ್ಕೆ ತಲುಪಿದೆ. 2022–23ರಲ್ಲಿ ₹5 ಲಕ್ಷ ಮೌಲ್ಯದ 35 ಆಸನಗಳ ಸೆಕೆಂಡ್‌ಹ್ಯಾಂಡ್ ಬಸ್ ಒದಗಿಸಲಾಗಿತ್ತು. ಮಕ್ಕಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಗೌಡನಹಳ್ಳಿ ಮಂಜುನಾಥ್ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಅವರ ಸಹಕಾರದಿಂದ ₹26 ಲಕ್ಷ ಮೌಲ್ಯದ 52 ಆಸನಗಳ ಹೊಸ ಬಸ್ ಶಾಲೆಗೆ ದೊರೆತಿದೆ. ಗಾಂಧಿ ಜಯಂತಿಯಂದು ಬಸ್ ಹಸ್ತಾಂತರಿಸಲಾಯಿತು.
ಶಾಲೆಯಲ್ಲಿ 2022–23ರಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳೂ ನಡೆಯುತ್ತಿವೆ. ಆರಂಭದಲ್ಲಿ ಇಲಾಖೆ ಆರ್ಥಿಕ ನೆರವಿಲ್ಲದೆ ಎಸ್.ಡಿ.ಎಂ.ಸಿ ಮತ್ತು ಪೋಷಕರ ಸಹಕಾರದಿಂದ ನಡೆಯುತ್ತಿತ್ತು. 2024–25ರಿಂದ ಇಲಾಖೆ ಅನುಮೋದನೆಯೊಂದಿಗೆ ಅನುದಾನ ಹಾಗೂ ವೇತನ ದೊರೆಯುತ್ತಿದೆ.
ಪಠ್ಯದ ಜತೆಗೆ ಕ್ರೀಡೆ, ಪ್ರತಿಭಾ ಕಾರಂಜಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಒತ್ತು ನೀಡಲಾಗುತ್ತಿದೆ. 2023–24ನೇ ಸಾಲಿನಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಕಾರ್ಯನಿರ್ವಹಣೆಗೆ ‘ಪುಷ್ಟಿ’ ಪ್ರಶಸ್ತಿ ದೊರೆತಿದೆ.
ಒಪ್ಪಂದ ಪ್ರಕ್ರಿಯೆ ಪೂರ್ಣ
ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಅವರ ಸಹಕಾರದೊಂದಿಗೆ ಎಂಒಯು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ವಾಹನದ ನಿರ್ವಹಣೆಗಾಗಿ ಶಾಲಾ ವಾಹನ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಚಾಲಕ ಮತ್ತು ಸಹಾಯಕಿ ವೇತನ, ಇಂಧನ ಹಾಗೂ ವಾಹನ ನಿರ್ವಹಣೆಯನ್ನು ದಾನಿಗಳು, ಎಸ್.ಡಿ.ಎಂ.ಸಿ ಮತ್ತು ಪೋಷಕರ ಸಹಕಾರದಿಂದ ನಿರ್ವಹಿಸುವ ಉದ್ದೇಶ ಹೊಂದಲಾಗಿದೆ.