
20 ಕಿ.ಮೀ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಲು ಚಿಂತನೆ: ರಾಮಲಿಂಗಾರೆಡ್ಡಿ
ಚಿಕ್ಕಮಗಳೂರು: ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಜಿಲ್ಲೆಯಲ್ಲಿ ಹೊಸದಾಗಿ 20 ಕಿಲೋ ಮೀಟರ್ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೀರ್ತಿಚಕ್ರ ಪಿ. ಶ್ರೀನಿವಾಸ್ ಅರಣ್ಯ ಸಂಕೀರ್ಣ ಕಟ್ಟಡ ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾರಿಕೇಡ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.
ಕಸ್ತೂರಿ ರಂಗನ್ ವರದಿ ಕುರಿತು ಭೌತಿಕ ಸರ್ವೆ ಕಾರ್ಯ ನಡೆಸಿ ಕೇರಳಂ ಮಾದರಿಯಲ್ಲಿ ವರದಿ ಸಲ್ಲಿಸಲು ಒಂದು ವರ್ಷಗಳ ಕಾಲಾವಕಾಶ ಕೇಳಲಾಗಿದೆ. ಕಸ್ತೂರಿ ರಂಗನ್ ವರದಿ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚಿಸಲಾಗಿದೆ ಎಂದರು.
ಅರಣ್ಯ ಪ್ರದೇಶ ಉಳಿಯಬೇಕು. ಜನರಿಗೂ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಭೌತಿಕ ಸರ್ವೆ ಕಾರ್ಯ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕಂದಾಯ ಮತ್ತು ಅರಣ್ಯ ಭೂಮಿ ಗುರುತಿಸಲು ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಕೆಲವು ಕಡೆ ಪೂರ್ಣಗೊಂಡಿದ್ದು, ಹಲವೆಡೆ ಸರ್ವೆ ಕಾರ್ಯ ನಡೆಯಬೇಕಿದೆ. ಮುಂದಿನ ಎರಡು –ಮೂರು ತಿಂಗಳಲ್ಲಿ ಸರ್ವೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣಕ್ಕೆ 13 ಸಾವಿರ ಎಕರೆ ಜಾಗ ಅಗತ್ಯವಿದೆ. ಕಡಿಮೆ ಜಾಗ ಆಗಿರುವುದರಿಂದ ಪಂಪ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುವುದು. ಇದರಿಂದ ಅಭಯಾರಣ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದರು.
ಶಾಸಕರಾದ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಆರತಿ ಕೃಷ್ಣ, ಕೆಪೆಕ್ ಅಧ್ಯಕ್ಷ ಬಿ.ಎಚ್. ಹರೀಶ್, ರಾಜ್ಯ ಪರಿಸರ ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಎ.ಎನ್ ಮಹೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಭದ್ರಾ ವನ್ಯಜೀವಿ ವಿಭಾಗದ ನಿರ್ದೇಶಕ ಪುಲ್ಕಿತ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಇದ್ದರು.
₹9.80 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ
ಅರಣ್ಯ ಇಲಾಖೆ ವೃತ್ತ ಕಚೇರಿ ಸೇರಿ ಡಿಸಿಎಫ್, ಎಸಿಎಫ್ ಮತ್ತು ಆರ್‌ಎಫ್‌ಒ ಕಚೇರಿಗಳು ಈಗ ಒಂದೇ ಕಟ್ಟಡದಲ್ಲಿ ತೆರೆಯಲಿವೆ.
ಈ ಹಿಂದೆ ಇದ್ದ ಗಂಧದ ಕೋಠಿ ಜಾಗದಲ್ಲಿ ಇದ್ದ ಹಳೇ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ. 2021ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, 2022ರಲ್ಲಿ ₹9.80 ಕೋಟಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು.
2023ರಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಮಂಗಳವಾರ ಲೋಕಾರ್ಪಣೆಗೊಂಡಿದೆ.
ಹೆಚ್ಚುವರಿಯಾಗಿ ಕಟ್ಟಡದ ಸುತ್ತಲೂ ಕಾಂಪೌಂಡ್ ಹಾಗೂ ಹೊರಾಂಗಣ ನಿರ್ಮಾಣ ಕಾಮಗಾರಿಯನ್ನು ₹45 ಲಕ್ಷ ವೆಚ್ಚದಲ್ಲಿ ನಿರ್ವಹಿಸಲಾಗಿದೆ. ಕಟ್ಟಡದ ಒಳಾಂಗಣ ವಿನ್ಯಾಸ ಕಾಮಗಾರಿಯನ್ನು ₹75 ಲಕ್ಷ ವೆಚ್ಚದಲ್ಲಿ ಅರಣ್ಯ ಇಲಾಖೆ ಕೈಗೊಂಡಿದೆ.
ಕಟ್ಟಡಕ್ಕೆ ಪಿ.ಶ್ರೀನಿವಾಸ್ ಹೆಸರು
ಹೊಸ ಕಟ್ಟಡಕ್ಕೆ ‘ಕೀರ್ತಿಚಕ್ರ ಪಿ.ಶ್ರೀನಿವಾಸ್ ಅರಣ್ಯ ಸಂಕೀರ್ಣ’ ಎಂದು ಹೆಸರಿಡಲಾಗಿದೆ.
1991ರಲ್ಲಿ ವೀರಪ್ಪನ್ ಸಂಚಿಗೆ ಬಲಿಯಾದ ಪಿ.ಶ್ರೀನಿವಾಸ್ ಅವರು 1978ರಿಂದ 1991ರವರೆಗೆ ಚಿಕ್ಕಮಗಳೂರು ವಿಭಾಗದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ್ದರು.
ಕೆಳ ಹಂತದ ನೌಕರರಿಗೆ ಶ್ರೀನಿವಾಸ ನಗರದಲ್ಲಿ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿದ್ದರು. ಚಿಂತಾಮಣಿ ಮಹಾ ಸರಸ್ವತಿ ದೇವಾಲಯ ನಿರ್ಮಾಣ ಮಾಡಿದ್ದು, ಹಲವು ಜನಪರ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಂಡಿದ್ದರು.
‘ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿಚಕ್ರ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿ ಪಡೆದ ಏಕೈಕ ಐಎಫ್‌ಎಸ್ ಅಧಿಕಾರಿ ಅವರು. ಆದ್ದರಿಂದ ಅವರ ಹೆಸರು ಶಾಶ್ವತವಾಗಿ ಉಳಿಸಲು ಕಟ್ಟಡಕ್ಕೆ ಪಿ.ಶ್ರೀನಿವಾಸ್ ಅವರ ಹೆಸರು ಇಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.