
ಮೈಸೂರು ಜಿಲ್ಲೆಗೆ ಮತ್ತೊಂದು 'ಪೋಕ್ಸೊ' ವಿಶೇಷ ನ್ಯಾಯಾಲಯ ಸ್ಥಾಪನೆ
ಮೈಸೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳ ತ್ವರಿತ ವಿಲೇವಾರಿಗೆ ಮತ್ತು ಸಂತ್ರಸ್ತರಿಗೆ ಕಡಿಮೆ ಸಮಯದಲ್ಲಿ ನ್ಯಾಯ ದೊರಕಿಸುವಂತೆ ಮಾಡುವ ಉದ್ದೇಶದಿಂದ ನಗರದಲ್ಲಿ ಮತ್ತೊಂದು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿದೆ.
ಇಲ್ಲಿನ ಹಳೆಯ ಜಿಲ್ಲಾ ನ್ಯಾಯಾಲಯ ಗಳ ಸಂಕೀರ್ಣದಲ್ಲಿ ವಕೀಲರ ಸಂಘದ ಪಕ್ಕದಲ್ಲಿರುವ ಎಫ್‌ಟಿಎಸ್‌ಸಿ–1 ನ್ಯಾಯಾಲಯದ ಎದುರಿನ ಕಟ್ಟಡವನ್ನು ನವೀಕರಿಸಿ ಒದಗಿಸಲಾಗಿದೆ. ಈ ಹಿಂದೆ, ಜೆಎಂಎಫ್‌ಸಿ 3ನೇ ನ್ಯಾಯಾಲಯದ ಕಟ್ಟಡವಿದ್ದ ಜಾಗದಲ್ಲಿ ಪೋಕ್ಸೊ ವಿಶೇಷ ನ್ಯಾಯಾಲಯ ಕಾರ್ಯಾರಂಭ ಮಾಡಲಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಫ್‌ಟಿಎಸ್‌ಸಿ–2(ಪೋಕ್ಸೊ ವಿಶೇಷ ನ್ಯಾಯಾಲಯ) ಇದಾಗಿದೆ. ಬುಧವಾರ (ಅ.28) ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಜಯಂತ್‌ಕುಮಾರ್ ನೆರವೇರಿಸುವರು.
ನ್ಯಾಯಾಧೀಶರ ನೇಮಕ: ಇಲ್ಲಿಗೆ, ಈವರೆಗೆ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಕೆ. ರವಿಕಾಂತ ಅವರನ್ನು ಈ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ.
ಸದ್ಯ ಇಲ್ಲಿ 600ಕ್ಕೂ ಹೆಚ್ಚು ಪೋಕ್ಸೊ ಪ್ರಕರಣಗಳಿದ್ದು, ಈ ನ್ಯಾಯಾಲಯಗಳಿಗೆ ಠಾಣಾವಾರು ಪ್ರಕರಣಗಳ ಹಂಚಿಕೆ ಆಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿ ಆಗುತ್ತಿದ್ದುದ್ದರಿಂದ ಮೈಸೂರಿನಲ್ಲಿ ಪೋಕ್ಸೊ ನ್ಯಾಯಾಲಯವನ್ನು ಪ್ರತ್ಯೇಕವಾಗಿ ಆರಂಭಿಸಿ, ಅಲ್ಲಿಗೆ ನ್ಯಾಯಾಧೀಶರೊಂದಿಗೆ ಸರ್ಕಾರಿ ಅಭಿಯೋಜಕರು ಹಾಗೂ ಇತರ ಅಗತ್ಯ ಸಿಬ್ಬಂದಿಯನ್ನು ಒದಗಿಸಲಾಗಿತ್ತು. ಈಗ ಇಂಥದ್ದೇ ಮತ್ತೊಂದು ನ್ಯಾಯಾಲಯ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.
‘ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಈಗಾಗಲೇ ವಿಶೇಷ ಪೋಕ್ಸೊ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮತ್ತೊಂದು ನ್ಯಾಯಾಲಯದ ಅವಶ್ಯಕತೆ ಇತ್ತು. ಇದರಿಂದ, ಬಾಕಿ ಇರುವ ಪ್ರಕರಣಗಳ ಒತ್ತಡ ತಗ್ಗಿಸಲು ಸಹಕಾರಿ ಆಗಲಿದೆ. ಕೆಲವು ವರ್ಷಗಳಿಂದಲೂ ಈ ಬೇಡಿಕೆ ಇತ್ತು’ ಎನ್ನುತ್ತಾರೆ ವಕೀಲ ಪಿ.ಜೆ. ರಾಘವೇಂದ್ರ.
‘ಇನ್ನೊಂದು ನ್ಯಾಯಾಲಯ ಆರಂಭದಿಂದ, ಬಾಕಿ ಇರುವ ನೂರಾರು ಪ್ರಕರಣಗಳ ವಿಚಾರಣೆ ತ್ವರಿತವಾಗಿ ನಡೆದು, ಸಂತ್ರಸ್ತರು ನ್ಯಾಯಾಲಯಕ್ಕೆ ಹೆಚ್ಚಿನ ಸಮಯ ಅಲೆಯುವ ಮಾನಸಿಕ ಆಘಾತದಿಂದ ದೂರವಾಗಬಹುದು. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ವೇಗವಾಗಿ ವಿಚಾರಣೆಗೆ ಸಹಕಾರಿ ಆಗಲಿದೆ’ ಎಂದು ಅವರು ತಿಳಿಸಿದರು.
ನಗರದ ವಿಶೇಷ ಪೋಕ್ಸೊ ನ್ಯಾಯಾಲಯವು ಇತ್ತೀಚೆಗೆ, ಬಲೂನು ಮಾರಲು ಕುಟುಂಬದೊಂದಿಗೆ ಬಂದಿದ್ದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಪ್ರಸ್ತಾವ ಸಲ್ಲಿಸಲಾಗಿತ್ತು...
ಜಿಲ್ಲೆಯಲ್ಲಿ ಪ್ರಕರಣಗಳ ಹೊರೆ ಕಡಿಮೆ ಮಾಡಲು ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಹೈಕೋರ್ಟ್ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದರಲ್ಲಿ ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ನ್ಯಾಯಾಲಯದ ಬೇಡಿಕೆಯನ್ನೂ ಇಡಲಾಗಿತ್ತು.
ಸುಪ್ರೀಂ ಕೋರ್ಟ್ ಮಾರ್ಗಸೂಚಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿಯಮಾವಳಿಗಳ ಪ್ರಕಾರ, ಯಾವುದೇ ಜಿಲ್ಲೆಯಲ್ಲಿ 100ಕ್ಕಿಂತ ಹೆಚ್ಚು ಪೋಕ್ಸೊ ಪ್ರಕರಣಗಳು ಬಾಕಿ ಇದ್ದಲ್ಲಿ ಅಲ್ಲಿಗೆ ಕಡ್ಡಾಯವಾಗಿ ಪ್ರತ್ಯೇಕ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ, ಮೈಸೂರು ಜಿಲ್ಲೆಯು ಕರ್ನಾಟಕದಲ್ಲೇ ಅತಿ ಹೆಚ್ಚು ಪೋಕ್ಸೊ ಪ್ರಕರಣಗಳು ದಾಖಲಾಗುವ ಜಿಲ್ಲೆಗಳಲ್ಲಿ ಒಂದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.