
ಚಿಕ್ಕಮಗಳೂರಿನಲ್ಲಿ ಇಂದು ಕ್ರಿಶ್ಚಿಯನ್ ಸಮುದಾಯದ ಫಲಾನುಭವಿಗಳ ಸಮಾವೇಶ
ಚಿಕ್ಕಮಗಳೂರು: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಎಐಟಿ ಸರ್ಕಲ್ ಸಮೀಪದ ಸ್ಫೂರ್ತಿ ಸದನ ಸಭಾಂಗಣದಲ್ಲಿ ಅ. 28ರಂದು ಬೆಳಿಗ್ಗೆ 10ಕ್ಕೆ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಹಾಗೂ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೇಲ್ವಿನ್ ಲಸ್ರಾದೋ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಗೆ ₹12.03 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಜಿಲ್ಲೆಯ ವಿವಿಧ ಚರ್ಚ್‌ಗಳ ದುರಸ್ತಿ, ನವೀಕರಣ, ಸ್ಮಶಾನದ ಸುತ್ತ ತಡೆಗೋಡೆ ಹಾಗೂ ಅಭಿವೃದ್ಧಿ ಕಾಮಗಾರಿ, ಸಮುದಾಯ ಭವನ, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳ ಅಭಿವೃದ್ಧಿಗಾಗಿ ₹8.63 ಕೋಟಿ ಬಿಡುಗಡೆಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೃತ್ತಿ ಪ್ರೋತ್ಸಾಹ ಯೋಜನೆಯಡಿ 184 ಜನರಿಗೆ, ಶ್ರಮಶಕ್ತಿ ಯೋಜನೆಯಡಿ 52 ಜನರಿಗೆ, ಸ್ವಾವಲಂಬಿ ಸಾರಥಿ ಯೋಜನೆಯಡಿ 41 ಜನರಿಗೆ, ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ 9 ಜನರಿಗೆ, ನೇರ ಸಾಲ ಯೋಜನೆಯಡಿ 9 ಜನರಿಗೆ, ಕ್ಷಮಾಶಕ್ತಿ ಯೋಜನೆಯಡಿ 7 ಜನ ವಿಶೇಷ ಮಹಿಳೆಯರಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ 6 ಜನರಿಗೆ ಕೊಳವೆ ಬಾವಿ, ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಒಬ್ಬರಿಗೆ ಒಟ್ಟು ₹3.4 ಕೋಟಿ ಮೌಲ್ಯದ ಸವಲತ್ತು ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಜಾಫೆಟ್, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಧರ್ಮ ಗುರುಗಳು, ಜಿಲ್ಲಾಧಿಕಾರಿ ಭಾಗವಹಿಸಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಜೇಮ್ಸ್ ಡಿಸೋಜ, ಮುಖ್ಯ ಸಭಾ ಪಾಲಕ ಕೆ.ಕೆ. ವರ್ಗಿಸ್, ಸಿಸಿಎ ಅಧ್ಯಕ್ಷ ಫಾಸ್ಟರ್ ರಂಗ, ಮುಖಂಡರಾದ ಸಿ.ಎಂ. ಜಾರ್ಜ್, ಕ್ರಿಸ್ಟೋಫರ್ ಜಾರ್ಜ್ ಭಾಗವಹಿಸಿದ್ದರು.