
16 ದಿನಗಳ ಏಷ್ಯನ್ ಕ್ರೀಡಾ ಹಬ್ಬಕ್ಕೆ ಭವ್ಯ ತೆರೆ: ಸಾಯೊನಾರಾ ನಾಗೋಯಾ..
ನಾಗೋಯಾ: ಕಳೆದ ಹದಿನಾರು ದಿನಗಳಿಂದ ಕೆಲವು ಕ್ರೀಡಾಪಟುಗಳ ಆನಂದಭಾಷ್ಪ ಮತ್ತು ಇನ್ನೂ ಹಲವರ ಹತಾಶೆಯ ಕಣ್ಣೀರು ಜಾರಿಹೋಗಿ ಮಣ್ಣಲ್ಲಿ ಬೆರೆತುಹೋದವು. ಆ ಎಲ್ಲ ಕ್ಷಣಗಳು ಇತಿಹಾಸದ ಪುಟಗಳಲ್ಲಿ ಭದ್ರವಾದವು. ಅವೆಲ್ಲಕ್ಕೂ ಕಳಸವಿಟ್ಟಂತೆ ಭಾನುವಾರ ಸಂಜೆಯ ಸಮಾರೋಪ ಸಮಾರಂಭ ಕಳೆಗಟ್ಟಿತು. 20ನೇ ಏಷ್ಯನ್ ಕ್ರೀಡಾಕೂಟಕ್ಕೆ ತೆರೆ ಬಿತ್ತು.
ಮಿಝುಹೊ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ರಾಜಕುಮಾರ್ ಅಕಿಶಿನೊ ಮತ್ತು ರಾಜಕುಮಾರಿ ಕಿಕೊ ಅವರ ಸಮ್ಮುಖದಲ್ಲಿ ಭವ್ಯ ಸಮಾರಂಭ ನೆರವೇರಿತು. ಜಪಾನಿ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು. ಸಂಗೀತ ಮತ್ತು ವರ್ಣರಂಜಿತ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಮುದಗೊಳಿಸಿದವು. ಸೆಪ್ಟೆಂಬರ್ 19ರಂದು ನಡೆದಿದ್ದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರಿಗಿಂತಲೂ ಹೆಚ್ಚಿನ ಸಂಖ್ಕೆಯಲ್ಲಿ ಸಮಾರೋಪಕ್ಕೆ ಜನ ಸೇರಿದ್ದರು.
ಮಳೆ, ಬಿರುಗಾಳಿ ಅಬ್ಬರಿಸುವ ಆತಂಕದ ನಡುವೆ ಆರಂಭವಾಗಿದ್ದ ಕೂಟವು ಏಷ್ಯಾದ ಹಲವು ಕ್ರೀಡಾಪಟುಗಳ ಸಾಧನೆಗಳಿಗೆ ವೇದಿಕೆಯೂ ಆಯಿತು.
ಮುಕ್ತಾಯ ಸಮಾರಂಭದಲ್ಲಿ ಏಷ್ಯಾಡ್ ಕ್ರೀಡೆಗಳ ಧ್ವಜವನ್ನು ಮುಂದಿನ ಬಾರಿಯ ಆತಿಥೇಯ ದೇಶವಾದ ಕತಾರ್‌ಗೆ ಹಸ್ತಾಂತರಿಸಲಾಯಿಉತ. 2030ರಲ್ಲಿ ದೋಹಾದಲ್ಲಿ ಕೂಟ ಆಯೋಜನೆಗೊಳ್ಳಲಿದೆ. ಕತಾರ್ ಈಕ್ವೆಸ್ಟ್ರಿಯನ್ ಸವಾರ ಜೆಸಿಮ್ ಅಲ್ ಕುವಾರಿ ಅವರು ಬಿಳಿಯ ರಾಂಪ್ ಮೇಲೆ ಅಶ್ವಾರೋಹಿಯಾಗಿ ಬಂದರು. ವೇದಿಕೆಯ ಕೇಂದ್ರಭಾಗಕ್ಕೆ ತಲುಪಿದ ಅವರು ತಮ್ಮದೇ ದೇಶದ ಹೈಜಂಪ್ ಒಲಿಂಪಿಯನ್ ಮುತಾಝ್ ಬಾರಶಿಮ್ ಅವರಿಂದ ಧ್ವಜ ಪಡೆದುಕೊಂಡರು. ಇಬ್ಬರೂ ಅಥ್ಲೀಟ್‌ಗಳು ಕತಾರ್ ಸಾಂಪ್ರದಾಯಿಕ ಪೋಷಾಕು ಧರಿಸಿದ್ದರು.
ದೋಹಾದಲ್ಲಿ ನಡೆಯುತ್ತಿರುವ ಸಿದ್ಧತೆ, ಏಷ್ಯಾಡ್ ಗೇಮ್ಸ್ ಕುರಿತು ಅಲ್ಲಿಯ ಜನರ ಉತ್ಸುಕತೆಯ ಭಾವಗಳನ್ನು ಡಿಜಿಟಲ್ ಪರದೆಗಳ ಮೇಲೆ ಪ್ರದರ್ಶಿಸಲಾಯಿತು. ಕತಾರ್ ಸಂಸ್ಕೃತಿ, ಜಾನಪದ ಪ್ರದರ್ಶನಗಳೂ ಅದರಲ್ಲಿ ಪ್ರದರ್ಶಿತಗೊಂಡವು.
ಇದಕ್ಕೂ ಮುನ್ನ ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒಸಿಎ) ಅಧ್ಯಕ್ಷ ಶೇಖ್ ಜೊವಾನ್ ಬಿನ್ ಹಮದ್ ಅಲ್ ಥಾನಿ, ‘ಏಷ್ಯನ್ ಕ್ರೀಡೆಗಳಿಗಾಗಿ ಮುಂದಿನ ಪೀಳಿಗೆಯನ್ನು ಸಿದ್ಧಗೊಳಿಸಿ’ ಎಂದು ಕರೆ ನೀಡಿದರು.
‘ಐಚಿ ನಾಗೋಯಾದಲ್ಲಿ ಇವತ್ತು ರಾತ್ರಿ ಬಾವುಟ ಇಳಿಸುತ್ತಿದ್ದೇವೆ. ಈ ಕ್ರೀಡಾಕೂಟಕ್ಕೆ ಮಂಗಳ ಹಾಡುತ್ತೇವೆ. ಆದರೆ ಏಷ್ಯನ್ ಕ್ರೀಡೆಗಳ ಹಿರಿಮೆಯನ್ನು ಎತ್ತರಿಸಿದ್ದೇವೆ. 350ಕ್ಕೂ ಹೆಚ್ಚು ದಾಖಲೆಗಳು ಮುರಿಯಲ್ಪಟ್ಟವು. ಅದರಲ್ಲಿ 50 ವಿಶ್ವದಾಖಲೆಗಳೂ ಇದ್ದವು. 45 ಎನ್‌ಒಸಿ (ರಾಷ್ಟ್ರೀಯ ಒಲಿಂಪಿಕ್ ಕಮಿಟಿ) ಗಳ ಪೈಕಿ 40 ದೇಶಗಳ ಅಥ್ಲೀಟ್‌ಗಳು ಪದಕಗಳನ್ನು ಜಯಿಸಿದ್ದಾರೆ. ಇದೊಂದು ದಾಖಲೆಯಾಗಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕ್ರೀಡಾ ಸಾಧನೆಗಳ ಜೊತೆಗೆ ಈ ಕೂಟದಲ್ಲಿ ಸ್ಪರ್ಧಿಗಳು ಎದುರಿಸಿದ ಹಲವು ಸಮಸ್ಯೆಗಳೂ ಕೂಡ ನೆನಪಿನ ಪುಟ ಸೇರಿದವು. ಈ ಕೂಟದಲ್ಲಿ ಕ್ರೀಡಾಗ್ರಾಮವನ್ನು ನಿರ್ಮಾಣ ಮಾಡಿರಲಿಲ್ಲ. ಹೀಗಾಗಿ ಹಲವು ಪ್ರವಾಸಿ ಅಥ್ಲೀಟ್‌ಗಳು, ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಟ ಆರಂಭಕ್ಕೂ ಕೆಲ ದಿನಗಳ ಮುನ್ನ ಮೂಲಸೌಲಭ್ಯಗಳು ಸಿಗದೇ ಪರದಾಡಿದ್ದು ವರದಿಯಾಗಿತ್ತು.
ಕ್ರೀಡೆಗಳ ಆಯೋಜನೆಯ ತಾಣಗಳು ಕೂಡ ನಗರದ ಬೇರೆ ಬೇರೆ ಕಡೆ ಇದ್ದವು. ಕೆಲವು ಸ್ಥಳಗಳು ನಗರದ ಹೊರವಲಯದಲ್ಲಿದ್ದವು. ಇದರಿಂದಾಗಿ ಆಯೋಜಕರು ಸರಂಜಾಮು ಸಾಗಣೆ ಮಾಡಲು ಕಷ್ಟಪಡಬೇಕಾಯಿತು. ಅಲ್ಲದೇ ಸ್ಪರ್ಧಿಗಳು ಕೂಡ ತಾವು ತಂಗಿದ್ದ ಸ್ಥಳದಿಂದ ಸ್ಪರ್ಧೆಯ ತಾಣಕ್ಕೆ ತಲುಪಲು ದೀರ್ಘ ಸಮಯದ ಪ್ರಯಾಣ ಮಾಡಬೇಕಾಯಿತು.
ಆದರೆ ಆ ಎಲ್ಲ ಕಷ್ಟ ಕೋಟಲೆಗಳೆಲ್ಲವೂ ಹಿನ್ನೆಲೆಗೆ ಸರಿದವು. ಭಾಗವಹಿಸಿದ್ದ ದೇಶಗಳ ತಂಡಗಳು ಸಾಲುಸಾಲಾಗಿ ಧ್ವಜ ಹಿಡಿದು ಪಥಸಂಚಲನದಲ್ಲಿ ಪಾಲ್ಗೊಂಡರು. ಭಾರತ ತಂಡವನ್ನು ಟ್ರ್ಯಾಪ್ ಶೂಟಿಂಗ್ ಚಿನ್ನದ ಪದಕ ವಿಜೇತರಾದ ನೀರೂ ಧಂಡಾ ಅವರು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದರು.
ಇನ್ನೊಂದೆಡೆ ಜಪಾನಿ ಕಲಾವಿದರು, ಕ್ರೀಡಾಳುಗಳು ಮತ್ತು ಆಯೋಜಕರು ಅತಿಥಿಗಳಿಗೆ ಸಾಯೋನಾರಾ (ವಿದಾಯ) ನೀಡಿದರು. ‘ಅರಿಗಾತೊವು ಗಝೈಮಾಸು’ ಅಂದರೆ ‘ಧನ್ಯವಾದ’ ಕೂಡ ಅರ್ಪಿಸಿದರು.