
Web Exclusive: ಕಲ್ಯಾಣ ಕರ್ನಾಟಕ ವಿಮೋಚನೆ ಹೋರಾಟದ ರಕ್ತಸಿಕ್ತ ಅಧ್ಯಾಯದ ಮೆಲುಕು
ಬೀದರ್: ಸೆಪ್ಟೆಂಬರ್ ಬರುತ್ತಿದ್ದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ (ಅಂದಿನ ಹೈದರಾಬಾದ್ ಕರ್ನಾಟಕ) ವಿಮೋಚನೆಯ ಸಂಭ್ರಮ ಗರಿಗೆದರುತ್ತದೆ.
ಇಡೀ ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ, ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಹೈದರಾಬಾದ್ ನಿಜಾಮನ ಅಧೀನದಲ್ಲಿದ್ದ ಈ ಪ್ರದೇಶಕ್ಕೆ ಸ್ವಾತಂತ್ರ್ಯ ಸಿಕ್ಕದ್ದು 1948ರ ಸೆಪ್ಟೆಂಬರ್ 17ರಂದು. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಈ ಭಾಗದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.
ದೇಶದ ಬಹುತೇಕ ಭಾಗಗಳಲ್ಲಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ತ್ರಿವರ್ಣ ಧ್ವಜಾರೋಹಣ ಮಾಡಿದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 17ರಂದು ತಿರಂಗಾ ಹಾರಾಡುತ್ತದೆ.
ಅಂದಹಾಗೆ, ಕಲ್ಯಾಣ ಕರ್ನಾಟಕ ವಿಮೋಚನೆಗೆ ನಡೆದ ಹೋರಾಟದ ಕುರಿತು ಮೆಲುಕು ಹಾಕಿದರೆ ರಕ್ತಸಿಕ್ತ ಚರಿತ್ರೆ ತೆರೆದುಕೊಳ್ಳುತ್ತದೆ. 1948ರ ಮೇ 9 ಮತ್ತು 10ರಂದು ರಜಾಕಾರರು ಮತ್ತು ವಿಮೋಚನೆಯ ಹೋರಾಟಗಾರರ ನಡುವಿನ ಸಂಘರ್ಷದಲ್ಲಿ ಅನೇಕ ಜನ ಅಸುನೀಗಿದ್ದರು.
ಇದೇ ಸಂದರ್ಭದಲ್ಲಿ ತ್ರಿವರ್ಣ ಧ್ವಜವಿರುವ ಗಾಳಿಪಟವೊಂದನ್ನು ಬೀದರ್ ಜಿಲ್ಲೆಯ ಹುಲಸೂರ ತಾಲ್ಲೂಕಿನ ಗೊರಟಾದಲ್ಲಿ ಹಾರಿಸಿದಾಗ, ಅದು ರಜಾಕಾರರ ಕೆಂಗಣ್ಣಿಗೆ ಗುರಿಯಾಗಿ ದೊಡ್ಡ ಹತ್ಯಾಕಾಂಡವೇ ನಡೆದು ಹೋಯಿತು. ಇದಾದ ನಂತರ ಮೇ 9 ಹಾಗೂ 10ರಂದು ನಡೆದ ದೊಡ್ಡ ಸಂಘರ್ಷದಲ್ಲಿ ಗೊರಟಾ ಹೊರವಲಯದಲ್ಲಿರುವ ಲಕ್ಷ್ಮಿ ದೇವಿ ಗುಡಿ ಮುಂಭಾಗದಲ್ಲಿ ಹತ್ಯಾಕಾಂಡ ನಡೆದು ಹೋಗುತ್ತದೆ. ಇದನ್ನು ಕರ್ನಾಟಕದ ‘ಜಲಿಯನ್ ವಾಲಾಬಾಗ್’ ಎಂದು ಕರೆಯಲಾಗುತ್ತದೆ.
ಈ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಅಂದಿನ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪೊಲೀಸ್ ಕಾರ್ಯಾಚರಣೆಗೆ ಆದೇಶ ಕೊಟ್ಟು, ಪರಿಸ್ಥಿತಿಯನ್ನು ನಿಯಂತ್ರಿಸಿ, ಇಡೀ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪಾಕಿಸ್ತಾನದಲ್ಲಿ ವಿಲೀನಗೊಳಿಸಲು ಉದ್ದೇಶಿಸಿದ್ದ ನಿಜಾಮ ಯಾವುದೇ ವಿಧಿಯಿಲ್ಲದೇ ಅಂತಿಮವಾಗಿ ಪಟೇಲರ ಎದುರು ಮಂಡಿಯೂರಿ ಶರಣಾಗುತ್ತಾನೆ.
ಈ ಘಟನೆಗಳು ನಡೆದು ದಶಕಗಳೇ ಕಳೆದಿವೆ. ಆದರೆ, ಜನರ ಮನಸ್ಸಿನಿಂದ ಆ ಕರಾಳ ಭೀತಿ, ಹೋರಾಟ ಹಾಗೂ ಪೊಲೀಸ್ ಕಾರ್ಯಾಚರಣೆಯ ನೆನಪುಗಳು ಮಾಸಿಲ್ಲ. ಆ ಘಟನೆಯನ್ನು ಕಣ್ಣಾರೆ ಕಂಡ ಬಹುತೇಕರು ಈಗ ನಮ್ಮ ನಡುವೆ ಇಲ್ಲ. ಆದರೆ, ಅವರ ಕುಟುಂಬದವರು ನಮ್ಮ ನಡುವೆ ಈಗಲೂ ಇದ್ಧಾರೆ. ಹಿರಿಯರಿಂದ ತಿಳಿದುಕೊಂಡ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
'ರಜಾಕಾರರ ದಬ್ಬಾಳಿಕೆ, ಹಿಂಸೆ ಮತ್ತು ಭಯದ ವಾತಾವರಣದಲ್ಲಿ ಗೊರಟಾ ಹಾಗೂ ಸುತ್ತಮುತ್ತಲಿನ ಜನರು ಬದುಕಬೇಕಾಗಿತ್ತು. ಜನರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದ ಕಾಲವದು. ಆ ಹತ್ಯಾಕಾಂಡದ ನೆನಪು ಇಂದಿಗೂ ಮನಕಲಕುತ್ತದೆ. ಹುತಾತ್ಮರ ತ್ಯಾಗವನ್ನು ಮುಂದಿನ ಪೀಳಿಗೆ ಮರೆಯಬಾರದು’ ಎನ್ನುತ್ತಾರೆ ಗೊರಟಾ ಗ್ರಾಮದ ಹಿರಿಯರಾದ
ಕಲ್ಲಪ್ಪ.
ಇದೆಲ್ಲಕ್ಕಿಂತ ಮುಖ್ಯವಾಗಿ ಆ ಹೋರಾಟದ ನೆನಪು ಭುಲಾಯಿ ಪದಗಳಲ್ಲಿ ದಾಖಲಾಗಿದೆ. ಹೀಗೊಂದು ಭುಲಾಯಿ ಪದ ಇದೆ.
‘ಹೊಟ್ಯಾಗಾಗ್ಯಾದೋ ಬೆಂಕಿ ಬುಕ್ಕುತ್ತಾನೋ ಮಣ್ಣು ಫಕ್ಕಿ, ಒಡಕೊಂಡನ ಕೈ ಕಾಲು ತಿಕ್ಕಿ/ವಂದೇ ಮಾತರಮ್ಮೆಂದು ಘೋಷಣೆ ಮಾಡ್ಯಾನೋ ಬಿದ್ದು ಜೀವ ಹೋಯಿತು ಆಗ ಆವಂದು’. ಈಗಲೂ ಗೊರಟಾ ಸುತ್ತಮುತ್ತಲಿನ ಜನ ಈ ಭುಲಾಯಿ ಪದ ಹಾಡುತ್ತ, ಹೋರಾಟ ಹಾಗೂ ಹೋರಾಟಗಾರರನ್ನು ಸ್ಮರಿಸಿಕೊಳ್ಳುತ್ತಾರೆ. ಗ್ರಾಮೀಣ ಮಹಿಳೆಯರು ಹಾಡುತ್ತಿದ್ದ ಈ ಭುಲಾಯಿ ಪದಗಳನ್ನು ಹೊಸ ತಲೆಮಾರಿನ ಯುವತಿಯರು ಕೂಡ ಹೇಳುತ್ತಾರೆ. ಇದೀಗ ಇದು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿದೆ.