
Web Exclusive: ಭರ್ತಿಯಾಗದ ನವಿಲುತೀರ್ಥ: ಹಿಂಗಾರು ಹಂಗಾಮಿನ ಬೆಳೆಗಿಲ್ಲ ನೀರು
ಬೆಳಗಾವಿ: 2025ರ ಸೆಪ್ಟೆಂಬರ್ ಮೊದಲ ವಾರ. ಉತ್ತರ ಕರ್ನಾಟಕದ ಜನರ ಜೀವನಾಡಿ ‘ನವಿಲುತೀರ್ಥ’ ಜಲಾಶಯ ಭರ್ತಿಯಾಗಿ ಜನರ, ಅದರಲ್ಲೂ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಅಣೆಕಟ್ಟೆ ತುಂಬಿದ್ದರಿಂದ ಮಲಪ್ರಭಾ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ ಭರಪೂರ ನೀರು ಹರಿಸಿ, ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಕೊಡಲಾಗಿತ್ತು. ರೈತರು ಉತ್ತಮ ಫಸಲು ತೆಗೆದು ಖುಷಿಪಟ್ಟಿದ್ದರು!
ಆದರೆ, ಈ ವರ್ಷ ಸೆಪ್ಟೆಂಬರ್ ಮೊದಲ ವಾರ ಬಂದರೂ ಶೇ 60ರಷ್ಟು ಕೂಡ ಭರ್ತಿಯಾಗಿಲ್ಲ. ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಮಳೆ ಬಿಡುವು ಕೊಟ್ಟಿದ್ದರಿಂದ ಮಂಗಳವಾರದಿಂದ ಒಳಹರಿವು ನಿಂತಿದೆ.
ಹಾಗಾಗಿ ಈ ವರ್ಷ ಜಲಾಶಯ ಭರ್ತಿಯಾಗುವ ಸಾಧ್ಯತೆ ಕ್ಷೀಣಿಸಿದ್ದು, ಇದನ್ನೇ ನೆಚ್ಚಿಕೊಂಡವರ ಮೊಗದಲ್ಲಿ ನಿರಾಸೆ ಮೂಡಿದೆ.
ಇನ್ಮುಂದೆ ಮಳೆಯಾದರೆ ಪರವಾಗಿಲ್ಲ. ಆದರೆ, ಸೆಪ್ಟೆಂಬರ್‌ನಲ್ಲೂ ವರುಣ ಕೈಹಿಡಿಯದಿದ್ದರೆ ಡ್ಯಾಂ ಭರ್ತಿಯಾಗದೆ, ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಒದಗಿಸುವುದು ಅನುಮಾನ ಎಂಬಂತಾಗಿದೆ.
ನಾಲ್ಕು ಜಿಲ್ಲೆಗಳಿಗೆ ಆಸರೆ
ಸವದತ್ತಿ ಬಳಿ ನಿರ್ಮಾಣಗೊಂಡಿರುವ ನವಿಲುತೀರ್ಥ ಜಲಾಶಯವು 37.73 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ಮೂಲಕ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಆಯ್ದ ಗ್ರಾಮ, ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುತ್ತದೆ. ಇದರೊಂದಿಗೆ 1.96 ಲಕ್ಷ ಎಕರೆ ಕೃಷಿಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸುತ್ತದೆ.
ಇದಕ್ಕಾಗಿ ಎರಡು ಕಾಲುವೆ ನಿರ್ಮಿಸಲಾಗಿದೆ. ಬಲದಂಡೆ ಕಾಲುವೆಯು ಗದಗ ಜಿಲ್ಲೆಯ ರೋಣದವರೆಗೆ 148 ಕಿ.ಮೀ ಇದೆ. ಡ್ಯಾಂನಿಂದ ಎಂಟೇ ಕಿ.ಮೀ ದೂರದಲ್ಲಿ ಈ ಕಾಲುವೆ ಇಬ್ಭಾಗವಾಗಿ, ನರಗುಂದದವರೆಗೆ ಪ್ರತ್ಯೇಕ(ಶಾಖಾ) ಕಾಲುವೆ ನಿರ್ಮಿಸಲಾಗಿದೆ. ಎಡದಂಡೆ ಕಾಲುವೆ 150 ಕಿ.ಮೀ ಇದ್ದು, ಬಾಗಲಕೋಟೆ ಜಿಲ್ಲೆಯ ಬಾದಾಮಿಯವರೆಗೆ ನೀರು ಹರಿಸಲಾಗುತ್ತದೆ.
‘ಕಳೆದ ವರ್ಷ ಉತ್ತಮ ಮಳೆಯಾಗಿ ಸೆಪ್ಟೆಂಬರ್ ಮೊದಲ ವಾರವೇ ಡ್ಯಾಂ ಭರ್ತಿಯಾಗಿತ್ತು. ಹಾಗಾಗಿ ಅಣೆಕಟ್ಟೆಯಿಂದ ಎರಡೂ ಕಾಲುವೆಗಳಿಗೆ, ಹಿಂಗಾರು ಹಂಗಾಮಿನ ಬೆಳೆಗಳಿಗಾಗಿಯೇ 20 ಟಿಎಂಸಿ ಅಡಿಗೂ ಹೆಚ್ಚು(2025ರ ಅಕ್ಟೋಬರ್ ನಿಂದ 2026ರ ಫೆಬ್ರುವರಿ ವರೆಗೆ) ನೀರು ಹರಿಸಿದ್ದೆವು. ಆದರೆ, ಈಗ ಜಲಾಶಯದಲ್ಲಿ 22 ಟಿಎಂಸಿ ಅಡಿ ನೀರಷ್ಟೇ ಲಭ್ಯವಿದೆ. ಈ ಪೈಕಿ 14 ಟಿಎಂಸಿ ಅಡಿಗಿಂತ ಹೆಚ್ಚಿನ ನೀರು ಕುಡಿಯುವ ಉದ್ದೇಶಕ್ಕಾಗಿ ಬೇಕಾಗಲಿದೆ. ಹಾಗಾಗಿ ಹಿಂಗಾರು ಹಂಗಾಮಿನ ಬೆಳೆಗಳಿಗಾಗಿ ಕಾಲುವೆಗೆ ನೀರು ಬಿಡಲು ಕಷ್ಟವಾಗುತ್ತದೆ’ ಎಂದು ಜಲಾಶಯದ ಎಇಇ ವಿವೇಕ ಮುದಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಚೆಗೆ ಜಲಾಶಯದಿಂದ ಎರಡೂ ಕಾಲುವೆಗೆ ತಲಾ 1 ಟಿಎಂಸಿ ಅಡಿ ನೀರು ಹರಿಸಿದ್ದೆವು. ಇದೇವಾರ ನೀರು ಹರಿಸುವ ಅವಧಿ ಮುಗಿದಿದೆ. ಈಗ ಮತ್ತೆ ರೈತರು ಕಾಲುವೆಗೆ ನೀರು ಬಿಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ನಿರೀಕ್ಷೆಯಂತೆ ಮಳೆ ಆಗದ್ದರಿಂದ ನೀರು ಬಿಡುತ್ತಿಲ್ಲ. ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ ತೊಂದರೆ ಇಲ್ಲ. ಇಲ್ಲದಿದ್ದರೆ ಕೃಷಿಗಾಗಿ ನೀರು ಬಿಡಲಾಗದು’ ಎನ್ನುತ್ತಾರೆ ಅವರು.