
PV Web Exclusive: ತೀವ್ರ ಬರಪೀಡಿತ ಜಿಲ್ಲೆ ವಿಜಯನಗರದಲ್ಲಿ ಮಳೆಗಾಗಿ ನಾನಾ ಆಚರಣೆ
ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ವಿಳಂಬ, ಮಳೆ ಆರಂಭವಾದ ಬಳಿಕವೂ ಸಮರ್ಪಕವಾಗಿ ಸುರಿಯದೆ ರೈತರ ಬೆಳೆ ನಾಶದಂತಹ ಪ್ರಕೃತಿ ವಿಕೋಪ ಕಾಣಿಸಿತು. ಅತ್ಯಂತ ಕಡಿಮೆ ಮಳೆಯಾದ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯನಗರ ಜಿಲ್ಲೆಯೂ ಸ್ಥಾನ ಪಡೆಯಿತು. ರೈತರು ಬಹಳಷ್ಟು ಕಷ್ಟ, ನಷ್ಟ ಅನಭವಿಸಿದರು.
‘ಹಸಿರು ಬರ’ದಿಂದ ಮುಂದೆ ಬೆಳೆಯೂ ಸರಿಯಾಗಿ ಬರುವುದಿಲ್ಲ ಎಂಬುದನ್ನು ಈಗಾಗಲೇ ಅಂದಾಜಿಸಿ ತಮ್ಮ ಅದೃಷ್ಟಕ್ಕೆ ಹಲುಬುವುದೊಂದೇ ಅವರಿಗೆ ಇರುವ ದಾರಿ. ಇಂತಹ ಸನ್ನಿವೇಶದಲ್ಲಿ ವಿಶೇಷವಾಗಿ ಗಮನ ಸೆಳೆದುದು ಮಳೆಗಾಗಿ ಜಿಲ್ಲೆಯಲ್ಲಿ ನಡೆದ ವಿಶಿಷ್ಟ ಆಚರಣೆಗಳು. ಇಲ್ಲಿ ದೇವರನ್ನು ಮನಸೋಇಚ್ಚೆ ಬೈದರು, ಬಳಿಕ ನೈವೇದ್ಯ ಇಟ್ಟರು. ಕತ್ತೆ, ಕಪ್ಪೆ ಮದುವೆಗಳನ್ನು ಮಾಡಿದರು, ಕಂಬಳಿ ಬೀಸಿದರು, ಕುಂಭದ ಮೇಲೆ ಬಾಲಕನನ್ನು ಕೂರಿಸಿದರು... ಒಂದೇ ಎರಡೇ. ಇಷ್ಟೆಲ್ಲ ಮಾಡಿದರೂ ವರುಣದೇವನಿಗೆ ಮಾತ್ರ ಅಂತಹ ಕರುಣೆ ಬರಲೇ ಇಲ್ಲ.
ಮಳೆ ಕರುಣಿಸು ದೇವಾ ಎಂದು ಪ್ರಾರ್ಥಿಸಿ, ಆತನ ಭಜನೆ ಮಾಡಿ, ಅಭಿಷೇಕ, ಮಂತ್ರ, ತಂತ್ರಗಳೊಂದಿಗೆ ಆತನನ್ನು ಸಂತೃಪ್ತಗೊಳಿಸಿ ಮಳೆ ಬಂದಾಗ ದೇವರ ಕೃಪೆಯಿಂದಲೇ ಮಳೆ ಬಂತು ಎಂದು ಹೇಳುವುದು ನಮ್ಮಲ್ಲಿ ಅನಾದಿ ಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯ. ಸಾಕಷ್ಟು ಮಳೆ ಸುರಿದ ವರ್ಷಗಳಲ್ಲಿ ಇಂತಹ ಆಚರಣೆಗಳು ಅಷ್ಟಾಗಿ ನಡೆಯುವುದಿಲ್ಲ. ಆದರೆ ಮಳೆ ಕೊರತೆಯಾಗಿ ತೀವ್ರ ಬರಗಾಲ ಪರಿಸ್ಥಿತಿ ಎದುರಾದಾಗ ದೇವರನ್ನು ಸಿಕ್ಕಾಪಟ್ಟೆ ಬೈದು ಬಳಿಕ ಆತನಿಗೆ ನೈವೇದ್ಯ ನೀಡುವ ಹಳೆಯ ಸಂಪ್ರದಾಯಕ್ಕೆ ಜೀವ ತುಂಬುತ್ತದೆ. ಮತ್ತೊಮ್ಮೆ ಇಂತಹ ಆಚರಣೆಯ ಬಗ್ಗೆ ಜನರಿಗೆ ಅರಿವಾಗುತ್ತದೆ.
ಹೊಸಪೇಟೆಯ ಸಂಡೂರು ರಸ್ತೆಯ ಜಂಬುನಾಥಹಳ್ಳಿ ಸಮೀಪ ಕಾಟಮಯ್ಯ ದೇವಸ್ಥಾನವಿದೆ. ಇದು ಒಂದು ಐತಿಹಾಸಿದ ದೇವಾಲಯ. ಮಳೆಗಾಗಿ ದೇವರನ್ನು ಬೈದು ಒಲಿಸಿಕೊಳ್ಳುವ ಸಂಪ್ರದಾಯ ಇಲ್ಲಿ ನಡೆಯುತ್ತದೆ. ಮಳೆ ಕರುಣಿಸದ ದೇವರಿಗೆ ಹರಕೆ ಹಾಗೂ ಆಕ್ರೋಶದ ಮಾತುಗಳ ಮೂಲಕ ಬೈಯುತ್ತಾರೆ. ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ದೇವರಿಗೆ ಹುಗ್ಗಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ್ ಸೇರಿ ನಾನಾ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಪೂಜೆ ಮುಗಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯುತ್ತದೆ.
ಹೊಸಪೇಟೆಯ ಬಾಣದಕೇರಿ ಯಜಮಾನರು, ಪ್ರಮುಖರು ಸೇರಿ ಈ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಕಾಟಮಯ್ಯನಿಗೆ ವಿಶೇಷ ಪೂಜೆ, ಗಂಗೆ ಪೂಜೆಯನ್ನು ವಿಧಿವಿಧಾನಗಳ ಮೂಲಕ ನೆರವೇರಿಸಿದ ಜನರು ಮಳೆ ಎದುರುನೋಡಿದರು. ಮಳೆ ಮಾತ್ರ ಸುರಿಯಲಿಲ್ಲ.
‘ಹಿಂದೆ ಕಾಟಮಯ್ಯನ ಪೂಜೆ ಮಾಡಿದಾಗ ಮಳೆ ಚೆನ್ನಾಗಿ ಬರುತ್ತಿತ್ತು. ಮಳೆಯಲ್ಲೇ ಪ್ರಸಾದ ಊಟ ಮಾಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗುತ್ತಿತ್ತು. ಆದರೆ ಈ ವರ್ಷ ಪೂಜೆಯ ಬಳಿಕವೂ ಮಳೆ ಸುರಿಯಲಿಲ್ಲ’ ಎಂದು ಮುಖಂಡರಾದ ಷಣ್ಮುಖಪ್ಪ ನೀರಲಗಿ ಹೇಳಿದರು.
‘ಈ ದೇವಸ್ಥಾನಕ್ಕೆ 120ಕ್ಕೂ ಅಧಿಕ ವರ್ಷದ ಇತಿಹಾಸ ಇದೆ. ಪ್ರತಿ ವರ್ಷ ಶ್ರಾವಣ ಮಾಸದ ಮೂರನೇ ಶನಿವಾರ ಈ ಆಚರಣೆ ಮಾಡುತ್ತ ಬರುವುದು ಸಂಪ್ರದಾಯ. ಈ ಬಾರಿ ಮಳೆ ಇಲ್ಲದ ಕಾರಣ ನಾಡಿಗೆ ಮಳೆಯಾಗಲಿ ಎಂದು ಕಾಟಮಲ್ಲಯ್ಯನಿಗೆ ಒಂದಿಷ್ಟು ಬೈದು, ಆತನಿಗೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದ್ದೇವೆ’ ಎಂದು ಲಕ್ಷ್ಮಣ ತಿಳಿಸಿದರು.
ಪ್ರತಿ ವರ್ಷ ಭಕ್ತರು ಈ ದಿನ ದೇವರಿಗೆ ಬೈಯುತ್ತಾರೆ. ಆದರೆ ಮಳೆ ಸುರಿಯುವ ಕಾರಣ ಅಂತಹ ಬೈಗುಳ ಕೇಳಿಸುವುದಿಲ್ಲ. ಈ ಬಾರಿ ಮಳೆ ಸುರಿದಿಲ್ಲ, ಹೀಗಾಗಿ ಬೈಗುಳದ ಸದ್ದು ಕೇಳಿಸುವಂತಾಯಿತು!
ಮಳೆಗಾಗಿ ಜಿಲ್ಲೆಯಲ್ಲಿ ಹತ್ತಾರು ಬಗೆಯಲ್ಲಿ ವಿಶಿಷ್ಟ ಆಚರಣೆಗಳು ನಡೆದವು. ಈ ಬಾರಿ ಮಳೆ ಸುರಿಯದ ಕಾರಣ ಅವುಗಳು ಬಹಳ ಗಮನ ಸೆಳೆದವು.
ಕಪ್ಪೆಗಳು ಮಳೆಯ ಸೂಚಕ, ಅವುಗಳಿಗೆ ವರುಣನ ವಾಹನಗಳು ಎಂಬ ಪ್ರತೀತಿಯೂ ಇದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದರಿಂದ ವರುಣದೇವ ಪ್ರಸನ್ನನಾಗಿ ಶೀಘ್ರವೇ ಮಳೆ ಸುರಿಸುತ್ತಾನೆ ಎಂಬ ಬಲವಾದ ಜನಪದ ನಂಬಿಕೆ ಉತ್ತರ ಕರ್ನಾಟಕ, ಬಯಲು ಸೀಮೆ ಪ್ರದೇಶಗಳಲ್ಲಿ ಇರುವಂತೆ ವಿಜಯನಗರ ಜಿಲ್ಲೆಯಲ್ಲೂ ಇದೆ. ಹೀಗಾಗಿ ಜಿಲ್ಲೆಯ ಹಲವೆಡೆ ಈ ಬಾರಿ ಕಪ್ಪೆಗಳ ಮದುವೆಗಳ ಸರಣಿಯೇ ನಡೆಯಿತು.
ಊರಿನ ಜನರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಹಿಡಿದು ತಂದು, ಅವುಗಳನ್ನು ವಧು-ವರರೆಂದು ಸಜ್ಜುಗೊಳಿಸಿದ್ದರು. ಊರಿನ ದೇವಸ್ಥಾನದಲ್ಲಿ ಅಥವಾ ಪ್ರಮುಖ ಬೀದಿಗಳಲ್ಲಿ ಬಾಸಿಂಗ ಕಟ್ಟಿ, ಅರಿಶಿನ-ಕುಂಕುಮ ಹಚ್ಚಿ, ಮುತ್ತೈದೆಯರಿಂದ ಅಕ್ಷತೆ ಹಾಕಿಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದರು. ಮದುವೆ ಅಂದ ಮೇಲೆ ಊಟ ಬೇಕಲ್ಲವೇ, ಅದು ಇದ್ದೇ ಇತ್ತು. ಕೂಡ್ಲಿಗಿಯ ಪೇಟೆ ಬಸವೇಶ್ವರ ದೇವಸ್ಥಾನದ ಬಯಲು ಸಹಿತ ಹಲವೆಡೆ ಕಪ್ಪೆಗಳ ಮದುವೆ ನಡೆಯಿತು.
ನಮ್ಮ ಸುತ್ತಮುತ್ತ ಇರುವ ಮೂಕಪ್ರಾಣಿಗಳಿಗೆ ಮದುವೆ ಮಾಡಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅದರಂತೆ ಕತ್ತೆಗಳಿಗೆ ಮದುವೆ ಮಾಡಿಸುವ ಆಚರಣೆ ಜಿಲ್ಲೆಯ ವಿವಿಧೆಡೆ ಕಾಣಿಸಿತು.
ಗಂಡು ಮತ್ತು ಹೆಣ್ಣು ಕತ್ತೆಗೆ ಮಾಲೆ ಹಾಕಿ, ಬ್ಯಾನರ್ ಹಚ್ಚಿ, ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮದುವೆ ಮಾಡಲಾಗುತ್ತದೆ. ಮದುವೆ ನಂತರ ಊಟ ಇದ್ದೇ ಇರುತ್ತದೆ. ಹರಪನಹಳ್ಳಿಯ ಕುರುಬರಗೇರಿ, ಕೋಣನಕೇರಿ ಸಹಿತ ಹಲವೆಡೆ ಕತ್ತೆಗಳ ಮದುವೆ ನಡೆಯಿತು.
ಬಿಳಿ ಬಟ್ಟೆ ತೊಟ್ಟು ಮಳೆರಾಯನಿಗೆ ಪ್ರಾರ್ಥನೆ
ಬಿಳಿ ಬಟ್ಟೆ ತೊಟ್ಟು ಮಳೆರಾಯನಿಗೆ ಪ್ರಾರ್ಥನೆ
ಗ್ರಾಮದ ಪ್ರಮುಖರು ಮತ್ತು ರೈತರು ಬಿಳಿ ವಸ್ತ್ರಗಳನ್ನು ಧರಿಸಿ, ಖಾಲಿ ಕಳಸಗಳನ್ನು ಹಿಡಿದು ಊರಿನ ಗ್ರಾಮದೇವತೆ ಹಾಗೂ ಈಶ್ವರನ ದೇವಾಲಯಗಳಿಗೆ ಕಾಲ್ನಡಿಗೆಯಲ್ಲಿ ತೆರಳುವ, ಊರಿನಲ್ಲಿ ಭಜನೆ ಹಾಗೂ ಜಾನಪದ ಹಾಡುಗಳನ್ನು ಹಾಡುತ್ತಾ ಮಳೆರಾಯನನ್ನು ಕರೆಯುವ ಆಚರಣೆಯೂ ಈ ಬಾರಿ ಕೆಲವೆಡೆ ಕಾಣಿಸಿತು.
ನಂದಿ, ಶಿವಲಿಂಗಕ್ಕೆ ಜಲಾಭಿಷೇಕ
ನಂದಿ, ಶಿವಲಿಂಗಕ್ಕೆ ಜಲಾಭಿಷೇಕ
ಶಿವನೇ ಮಳೆದೇವರು ಎಂಬ ನಂಬಿಕೆ ಈ ಭಾಗದಲ್ಲಿ ಪ್ರಬಲವಾಗಿದೆ. ಮಳೆಯಾಗದಿದ್ದಾಗ ಊರಿನ ಶಿವನ ದೇವಾಲಯದಲ್ಲಿರುವ ಶಿವಲಿಂಗ ಅಥವಾ ನಂದಿ ವಿಗ್ರಹ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವಂತೆ (ಕಂಠಮಟ್ಟ ಅಥವಾ ಪೂರ್ತಿಯಾಗಿ) ಕಳಸಗಳಿಂದ ನೀರು ತುಂಬಿ 'ಜಲಾಭಿಷೇಕ' ಮಾಡುವ ಆಚರಣೆಯೂ ನಡೆಯಿತು. ಶಿವನಿಗೆ ನೀರು ಎಂದರೆ ಇಷ್ಟ, ಆತನನ್ನು ಜಲಾಭಿಷೇಕದಿಂದ ಸಂತುಷ್ಟಗೊಳಿಸಿದರೆ ನಾಡಿಗೆ ಮಳೆ ಸುರಿಸುತ್ತಾನೆ ಎಂಬ ನಂಬಿಕೆಯಿಂದ ಇಂತಹ ಆಚರಣೆ ನಡೆಯಿತು.
ಬರಿಗಾಲಲ್ಲಿ ಊಟ, ಗಂಜಿ ಕೇಂದ್ರ ಆಚರಣೆ
ಬರಿಗಾಲಲ್ಲಿ ಊಟ, ಗಂಜಿ ಕೇಂದ್ರ ಆಚರಣೆ
ಊರಿನವರೆಲ್ಲರೂ ಒಟ್ಟಾಗಿ ಸೇರಿ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಬರಿಗಾಲಲ್ಲಿ ಊರಿನ ಹೊರಗಡೆಗೆ ತೆರಳಿ ಗಂಜಿ ಅಥವಾ ಅನ್ನಪ್ರಸಾದ ತಯಾರಿಸಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದ್ದೂ ಕೆಲವೆಡೆ ಕಾಣಿಸಿತು.
ಕುಂಭದ ಮೇಲೆ ಬಾಲಕನನ್ನು ಕೂರಿಸಿ ಪ್ರಾರ್ಥನೆ
ಕುಂಭದ ಮೇಲೆ ಬಾಲಕನನ್ನು ಕೂರಿಸಿ ಪ್ರಾರ್ಥನೆ
ಕೂಡ್ಲಿಗಿ ಪಟ್ಟಣದಲ್ಲಿ ಬುಡ್ಡೆಕಲ್ಲಿಗೆ ನೀರು ಹಾಕಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಾಲಕನನ್ನು ಕುಂಭದ ಮೇಲೆ ಕೂರಿಸುವ ಆಚರಣೆಯೂ ನಡೆಯಿತು. ಕುಂಭದ ಮೇಲೆ ಕುಳಿತ ಬಾಲಕ ಬಲಕ್ಕೆ ತಿರುಗಿದರೆ ಮಳೆ ಸುರಿಯುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇದೆ.
ಕೂಡ್ಲಿಗಿ ತಾಲ್ಲೂಕಿನ ಶಿವಪುರ ಗೊಲ್ಲರಹಟ್ಟಿಯ ಜನರು ಮಿಂಚೇರಿ ಗುಡ್ಡದ ಮೇಲೆ ಮಳೆ ಮಲ್ಲಪ್ಪ ದೇವಸ್ಥಾನದ ಬಳಿ ಕಂಬಳಿ ಬೀಸುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು. ಕಂಬಳಿ ಮೇಲೆ ಇಬ್ಬರು ಬಾಲಕರನ್ನು ಕೂರಿಸಿ ಅವರಿಗೆ ಪೂಜೆ ಮಾಡಿದರು. ಬಳಿಕ ಬಾಲಕರು ಕುಳಿತಿದ್ದ ಕಂಬಳಿಯನ್ನು ತೆಗೆದುಕೊಂಡು ಮದುವೆಯಾಗದ ಹುಡುಗರು (ಕೋರಿ) ಪಶ್ಚಿಮದತ್ತ ಕಂಬಳಿ ಬೀಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದ್ದು, ಅದನ್ನು ರೈತರು, ಭಕ್ತರು ಮಾಡಿದ್ದು ಸಹ ದಾಖಲಾಯಿತು.
ಇಷ್ಟೆಲ್ಲ ಮಾಡಿದರೂ ಮಳೆರಾಯನಿಗೆ ವಿಜಯನಗರ ಜಿಲ್ಲೆಯ ಮೇಲೆ ಅಂತಹ ಕರುಣೆಯೇ ಮೂಡಿಲ್ಲ. ಆಚರಣೆಯ ಹೆಸರಲ್ಲಿ ಊರ ಮಂದಿ ಪ್ರಸಾದ ಭೋಜನ ಸವಿದ ಸವಿ ಕ್ಷಣ ಬಿಟ್ಟರೆ ಉತ್ತಮವಾಗಿ ಮಳೆ ಸುರಿದು ಸಮಾಧಾನ ತಂದ ವಿದ್ಯಮಾನವಂತೂ ನಡೆಯಲೆ ಇಲ್ಲ.
ವಿಜಯನಗರ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಅವಧಿಯಲ್ಲಿ ಮಳೆ ಕೊರತೆ ಎಷ್ಟಿದೆ ಎಂಬ ಕುತೂಹಲ ಸಾಮಾನ್ಯ. ರಾಜ್ಯದಲ್ಲೇ ತೀವ್ರ ಮಳೆ ಕೊರತೆ ಇರುವ ಜಿಲ್ಲೆಗಳಲ್ಲಿ ವಿಜಯನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಸರ್ಕಾರವೇ ಹೇಳಿತ್ತು. ತುಂಗಭದ್ರಾ ನದಿ ಹಾಗೂ ಜಲಾಶಯ ಜಿಲ್ಲೆಯ ಸೆರಗಲ್ಲೇ ಇದ್ದರೂ ಜಿಲ್ಲೆಯ ಶೇ 70ರಷ್ಟು ಭಾಗ ಮಳೆಯಾಶ್ರಿತ ಪ್ರದೇಶ ಎಂದು ಹೇಳಿದರೆ ನಂಬಲೇಬೇಕು. ಹೀಗಾಗಿ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳೂ ತೀವ್ರ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದು ರೈತರಿಗೆ ಶೀಘ್ರ ಪರಿಹಾರ ಸಿಗಬಹುದು ಎಂಬ ಭರವಸೆ ಮೂಡಿತ್ತು. ಆದರೆ ಅದು ಸಹ ಹುಸಿಯಾಯಿತು. ಕೇವಲ ನಾಲ್ಕು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳು ಎಂದು ಸರ್ಕಾರ ಮೊದಲ ಪಟ್ಟಿಯಲ್ಲಿ ಘೋಷಿಸಿದೆ. ಕೂಡ್ಲಿಗಿ ಮತ್ತು ಕೊಟ್ಟೂರು ತಾಲ್ಲೂಕುಗಳು ಬರ ಪಟ್ಟಿಯಲ್ಲಿ ಇಲ್ಲ.
ಹಾಗಿದ್ದರೆ ಜಿಲ್ಲೆಯಲ್ಲಿ ಮಳೆ ಕೊರತೆಯ ಪ್ರಮಾಣವನ್ನೂ ತಿಳಿದುಕೊಳ್ಳಬೇಕು. ಮುಂಗಾರು ಮಳೆ ಭರ್ಜರಿಯಾಗಿ ಸುರಿಯಬೇಕಿದ್ದ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 8.82 ಸೆಂ.ಮೀ.ಮಳೆ ಸುರಿಯಬೇಕಿತ್ತು, ಆದರೆ ಸುರಿದುದು ಕೇವಲ 3.45 ಸೆಂ.ಮೀ. ಈ ಮೂಲಕ ಆ ತಿಂಗಳಲ್ಲಿ ಶೇ –61ರಷ್ಟು ಮಳೆ ಕೊರತೆ ಎದುರಾಗಿತ್ತು. ಜಿಲ್ಲೆಯಲ್ಲಿ ಬಿತ್ತನೆಗೆ ತೀವ್ರ ಹಿನ್ನಡೆ ಆಗಿದ್ದೇ ಇದೇ ಕಾರಣಕ್ಕೆ. ಒಂದೆರಡು ಸಣ್ಣ ಮಳೆಯ ಕಾರಣಕ್ಕೆ ಬಿತ್ತಿದ ಬೀಜಗಳು ಮೊಳಕೆಯೊಡೆದು ಗಿಡಗಳಾಗಿ ಬೆಳೆಯುವ ಹಂತದಲ್ಲಿ ಮಳೆ ಸುರಿಯಲೇ ಇಲ್ಲ. ಹೀಗಾಗಿ ಕಾಳು ಕಟ್ಟುವ ಸ್ಥಿತಿ ಮಾಯವಾಯಿತು. ಬಹುತೇಕ ಕಡೆ ಹೀಗೆ ‘ಹಸಿರು ಬರ’ದ ದರ್ಶನ ಆಗಿದೆ.
ಆಗಸ್ಟ್ ತಿಂಗಳಲ್ಲೂ ಉತ್ತಮ ಮಳೆ ಸುರಿಯಬೇಕು. ವಾಡಿಕೆಯಂತೆ 8.22 ಸೆಂ.ಮೀ.ಮಳೆ ಸುರಿಯಬೇಕಿದ್ದರೆ, ಸುರಿುದು 4.86 ಸೆಂ.ಮೀ.ಮಳೆ ಮಾತ್ರ. ಈ ಮೂಲಕ ಶೇ –41ರಷ್ಟು ಮಳೆ ಕೊರತೆ ಎದುರಾಗಿದೆ. ನೈರುತ್ಯ ಮುಂಗಾರಿಗೆ ಮೊದಲ ಮೂರು ತಿಂಗಳ ಅವಧಿಯಲ್ಲಿ ಅಂದರೆ ಜೂನ್‌ನಿಂದ ಆಗಸ್ಟ್ 27ವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 25.17 ಸೆಂ.ಮೀ.ಮಳೆ ಸುರಿಯಬೇಕಿತ್ತು, ಆದರೆ ಸುರಿದುದು 11.45 ಸೆಂ.ಮೀ. ಮಳೆ. ಈ ಮೂಲಕ ಶೇ –54ರಷ್ಟು ಮಳೆ ಕೊರತೆ ಎದುರಾಗಿದೆ. ಜನವರಿಯಿಂದ ಆಗಸ್ಟ್‌ತನಕ ಜಿಲ್ಲೆಯಲ್ಲಿ ವಾಡಿಕೆಯಂತೆ 35.03 ಸೆಂ.ಮೀ.ಮಳೆ ಸುರಿಯಬೇಕಿತ್ತು. ಆದರೆ ಸುರಿದುದು 22.38 ಸೆಂ.ಮೀ.ಮಳೆ ಮಾತ್ರ. ಈ ಮೂಲಕ ಶೇ–36ರಷ್ಟು ಮಳೆ ಕೊರತೆಯನ್ನು ಜಿಲ್ಲೆ ಅನುಭವಿಸಿದೆ.