ಹಾವೇರಿ|ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: 30 ಆಕಾಂಕ್ಷಿಗಳಿಂದ ಅರ್ಜಿ

ಹಾವೇರಿ|ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: 30 ಆಕಾಂಕ್ಷಿಗಳಿಂದ ಅರ್ಜಿ

ಹಾವೇರಿ|ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: 30 ಆಕಾಂಕ್ಷಿಗಳಿಂದ ಅರ್ಜಿ

ಹಾವೇರಿ: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು, ಪಕ್ಷದ ಮುಖಂಡರದಲ್ಲಿ ಪೈಪೋಟಿ ಶುರುವಾಗಿದೆ. ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಕೆ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಹೊಸ ಅಧ್ಯಕ್ಷರನ್ನು ನೇಮಿಸಲು ಕೈ ಹೈಕಮಾಂಡ್ ಪ್ರಕ್ರಿಯೆ ಆರಂಭಿಸಿದೆ.

ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಂಜೀವಕುಮಾರ ನೀರಲಗಿ ಅವರು ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸುವ ಜವಾಬ್ದಾರಿ ಸಂಘಟನ್ ಸೃಜನ್ ಅಭಿಯಾನದ ಉಸ್ತುವಾರಿ ಶೇಖ್ ಮಸ್ತಾನ್ ವಲಿ ಅವರಿಗೆ ವಹಿಸಲಾಗಿದೆ. ಅವರ ನೇತೃತ್ವದ ತಂಡ, ಜಿಲ್ಲೆಯಾದ್ಯಂತ ಸಂಚರಿಸಿ ಅರ್ಜಿ ಸ್ವೀಕರಿಸುತ್ತಿದೆ.

ನಗರಕ್ಕೆ ಜುಲೈ 25ರಂದು ಬಂದಿರುವ ಶೇಖ್ ಮಸ್ತಾನ್ ವಲಿ ಅವರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಸಿದರು. ಪಕ್ಷದ ಅಧ್ಯಕ್ಷರು ಹಾಗೂ ಇತರೆ ಸ್ಥಾನಗಳಿಗೆ ಅರ್ಹರನ್ನು ಹೇಗೆ ನೇಮಿಸಲಾಗುತ್ತಿದೆ? ಎಂಬುದನ್ನು ವಿವರಿಸಿದರು.

‘ಜಿಲ್ಲಾ ಘಟಕ, ತಾಲ್ಲೂಕು ಘಟಕ, ಬೂತ್ ಮಟ್ಟದ ಘಟಕಗಳಿಗೆ ಅಧ್ಯಕ್ಷ–ಇತರೆ ಸ್ಥಾನ ಭರ್ತಿ ಮಾಡಲು, ಕಾರ್ಯಕರ್ತರ ಅಭಿಪ್ರಾಯಕ್ಕೆ ಒತ್ತು ನೀಡಲಾಗಿದೆ’ ಎಂದು ಅವರು ಹೇಳಿದರು. ಅದೇ ರೀತಿಯಲ್ಲಿಯೇ ಶೇಖ್ ಮಸ್ತಾನ್ ವಲಿ ಅವರು, ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿ ಶಾಸಕ ಮುಕ್ತ ಜಿಲ್ಲೆ ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಸದ್ಯ ಕಾಂಗ್ರೆಸ್ ಪಕ್ಷವು ಪ್ರಭಾವ ಹೊಂದಿದೆ. ಇದೇ ಕಾರಣಕ್ಕೆ ಪಕ್ಷದ ಅಧ್ಯಕ್ಷರಾಗಲು ಹಲವರು ಪ್ರಯತ್ನಿಸುತ್ತಿದ್ದಾರೆ.

ಹಾಲಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಜಿಲ್ಲೆಯ ಸುಮಾರು 30 ಮಂದಿ ಈಗಾಗಲೇ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ, ಕೆಲ ಅಭ್ಯರ್ಥಿಗಳಿಗೆ ಶಾಸಕರು ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ಕ್ಷೇತ್ರದ ಮುಖಂಡರನ್ನು ಅಧ್ಯಕ್ಷರನ್ನಾಗಿ ಮಾಡಲು ಕಸರತ್ತು ನಡೆಸಿದ್ದಾರೆ.

‘ಪಕ್ಷವನ್ನು ಕೆಳಮಟ್ಟದಿಂದ ಬಲಿಷ್ಠಗೊಳಿಸಬೇಕಿದೆ. ಎಲ್ಲ ಸಮುದಾಯಗಳ ಜನರಿಗೆ ಸಮಾನ ಅವಕಾಶಗಳನ್ನು ನೀಡಬೇಕಿದೆ. ಹೀಗಾಗಿ, ಅರ್ಜಿ ಸಲ್ಲಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

‘ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಮುಖಂಡರು, ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ವೈಯಕ್ತಿಕ ಮಾಹಿತಿ, ಸಂವಹನ ಸಾಮರ್ಥ್ಯ, ಶೈಕ್ಷಣಿಕ ಅರ್ಹತೆ, ಜನರ ಜೊತೆಗಿನ ಒಡನಾಟ, ಪಕ್ಷ ಸಂಘಟನೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈ ಅಂಶಗಳೇ ಆಯ್ಕೆಗೆ ಮಾನದಂಡಗಳಾಗಿವೆ’ ಎಂದರು.

‘ಪಕ್ಷದ ಸಂಘಟನೆ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಹೈಕಮಾಂಡ್ ವರಿಷ್ಠರು ವಿಡಿಯೊ ಕಾನ್ಫ್‌ರೆನ್ಸ್ ಮೂಲಕ ಅಭ್ಯರ್ಥಿಗಳಿಂದ ಮಾಹಿತಿ ಪಡೆದಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯ ಹಾವಭಾವ, ನಡವಳಿಕೆ, ಕೌಶಲಗಳನ್ನು ಗಮನಿಸಿದ್ದಾರೆ’ ಎಂದು ತಿಳಿಸಿದರು.

‘ಈ ಬಾರಿ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಬೇಕು’ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಕೆಲ ಮುಖಂಡರಿಗೆ ಪಕ್ಷದ ಹೈಕಮಾಂಡ್ ವರಿಷ್ಠರೇ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ಜಿಲ್ಲಾ, ತಾಲ್ಲೂಕು, ಬೂತ್‌ ಮಟ್ಟದ ಘಟಕಗಳ ಅಧ್ಯಕ್ಷರು–ಪದಾಧಿಕಾರಿಗಳ ನೇಮಕದಲ್ಲಿ ಈ ಬಾರಿ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್‌ ಸೂಚನೆ ನೀಡಿರುವ ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ, ಮಹಿಳೆಯರನ್ನೂ ಅಧ್ಯಕ್ಷರನ್ನಾಗಿ ಮಾಡುವಂತೆಯೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೀಸಲಾತಿಗೆ ಅನ್ವಯವಾಗುವಂತೆ ಮುಖಂಡರಿಂದ ಅರ್ಜಿಗಳನ್ನು ಸಂಗ್ರಹ ನಡೆದಿದೆ’ ಎಂಬ ಮಾತು ಕೇಳಿಬರುತ್ತಿದೆ.

‘ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲಾಗಿದೆ. ಜೊತೆಗೆ, ಎಲ್ಲರನ್ನೂ ಒಂದು ಕಡೆ ಕರೆದು ಚರ್ಚಿಸಲಾಗಿದೆ. ಇದಾದ ನಂತರ, ದೆಹಲಿಯಿಂದಲೂ ಅಭ್ಯರ್ಥಿಗಳ ಸಂದರ್ಶನ ನಡೆದಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-22-492532432

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ