
ಸಚಿವ ರಾಯರಡ್ಡಿ ವಜಾ ಆಗಲೇಬೇಕು: ಅಶೋಕ
ಹೊಸಪೇಟೆ (ವಿಜಯನಗರ): ತಾಯಿಯಂತಿರುವ ಹಿಂದೂ ಧರ್ಮಕ್ಕೆ ದ್ರೋಹ ಬಗೆಯುತ್ತಿರುವ ಸಚಿವ ಬಸವರಾಜ ರಾಯರಡ್ಡಿ ಅವರನ್ನು ತಕ್ಷಣ ಕಾಂಗ್ರೆಸ್ ವಜಾ ಮಾಡಬೇಕು ಅಥವಾ ತಾನು ಹಿಂದೂ ವಿರೋಧಿ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬಿಜೆಪಿ ಪಾದಯಾತ್ರೆಗೆ ತೆರಳುವ ಸಂದರ್ಭದಲ್ಲಿ ಇಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ವಿರೋಧಿಗಳು ದೇಶದಲ್ಲಿ, ರಾಜ್ಯದಲ್ಲಿ ಉಳಿಯಲು ಸಾಧ್ಯವಿಲ್ಲ. ಸರ್ಕಾರ ತಕ್ಷಣ ಅವರ ರಾಜೀನಾಮೆ ಪಡೆಯಬೇಕು ಇಲ್ಲವೇ ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್‌ಸಿ ಹಗರಣ: ಕೆಪಿಎಸ್‌ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಯ ಬಂಧನವಾದರೆ ಸಾಲದು. ಮೂಲದಲ್ಲಿ ಇರುವವರನ್ನೇ ಹುಡುಕಿ ಬಂಧಿಸುವ ಅಗತ್ಯ ಇದೆ. ಈಗಾಗಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೇಳಿಬರುತ್ತಿದೆ. ನಾಗೇಂದ್ರ ರೂಪದಲ್ಲಿ ಮೊದಲ ವಿಕೆಟ್ ಬಿದ್ದಾಗಿದೆ, ಕೆಪಿಎಸ್‌ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಒಬ್ಬ ಸಚಿವನ ತಲೆ ದಂಡ ಸಹಿತ ಕೆಲವೇ ದಿನಗಳಲ್ಲಿ ಮೂರ್ನಾಲ್ಕು ವಿಕೆಟ್ ಬೀಳುವ ಲಕ್ಷಣ ಕಾಣಿಸುತ್ತಿದೆ ಎಂದು ಅಶೋಕ ಹೇಳಿದರು.