ರಾಮನಗರ: ಕಾಯಕಲ್ಪದ ನಿರೀಕ್ಷೆಯಲ್ಲಿ ಹಳೆ ಜಿಲ್ಲಾಸ್ಪತ್ರೆಯ ಕಟ್ಟಡ

ರಾಮನಗರ: ಕಾಯಕಲ್ಪದ ನಿರೀಕ್ಷೆಯಲ್ಲಿ ಹಳೆ ಜಿಲ್ಲಾಸ್ಪತ್ರೆಯ ಕಟ್ಟಡ

ರಾಮನಗರ: ಕಾಯಕಲ್ಪದ ನಿರೀಕ್ಷೆಯಲ್ಲಿ ಹಳೆ ಜಿಲ್ಲಾಸ್ಪತ್ರೆಯ ಕಟ್ಟಡ

ರಾಮನಗರ: ಜಿಲ್ಲೆಯ ಜನರ ಆರೋಗ್ಯವನ್ನು ಮೂರು ದಶಕಗಳಿಂದ ಸಂಜೀವಿನಿಯಂತೆ ಕಾಪಾಡಿಕೊಂಡು ಬಂದಿದ್ದ ನಗರದ ರೈಲು ನಿಲ್ದಾಣದ ಬಳಿ ಇರುವ ಜಿಲ್ಲಾಸ್ಪತ್ರೆಯ ಹಳೆ ಕಟ್ಟಡವು ಕಳೆದ ಮೂರೂವರೆ ವರ್ಷಗಳಿಂದ ಬಳಕೆಗೆ ಬಾರದೆ ನನೆಗುದಿಗೆ ಬಿದ್ದಿದೆ. ಜಿಲ್ಲಾಸ್ಪತ್ರೆಯು ಬಿ.ಎಂ. ರಸ್ತೆಯಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಹಳೆ ಕಟ್ಟಡವು ಶಿಥಿಲಾವಸ್ಥೆ ತಲುಪಿದೆ.

ಹಿಂದೆ ತಾಲ್ಲೂಕು ಕೇಂದ್ರವಾಗಿದ್ದ ರಾಮನಗರದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ 1981ರಲ್ಲಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ಭೂಮಿಪೂಜೆ ನೆರವೇರಿಸಿದ್ದರು. ಆಗಿನ ರಾಮನಗರದ ಶಾಸಕ ಹಾಗೂ ಆನಂತರ ಆರೋಗ್ಯ ಸಚಿವರಾಗಿದ್ದ ಎ.ಕೆ. ಅಬ್ದುಲ್ ಸಮದ್ ಅವರು ಆಸ್ಪತ್ರೆ ಸ್ಥಾಪನೆಗೆ ಕಾರಣರಾಗಿದ್ದರು.

ಆ ಕಾಲದಲ್ಲಿ ಸುಮಾರು ₹37.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಬರೋಬ್ಬರಿ 11 ವರ್ಷಗಳ ಬಳಿಕ ಪೂರ್ಣಗೊಂಡಿತು. 1993ರಲ್ಲಿ ಅಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೋಯಿಲಿ ಅವರು ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದರು. ಆಗ ಸಿ.ಎಂ. ಲಿಂಗಪ್ಪ ಅವರು ಶಾಸಕರಾಗಿದ್ದರು.

ಹಿಂದಿನ ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಕುಡಿಯೊಡೆದು ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ಬಳಿಕ, ತಾಲ್ಲೂಕು ಆಸ್ಪತ್ರೆಯಾಗಿದ್ದ ಈ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಪಟ್ಟಣದ ಒಳಭಾಗದಲ್ಲಿದ್ದ ಜಿಲ್ಲಾಸ್ಪತ್ರೆಗೆ ಪರ್ಯಾಯವಾಗಿ ಬೇರೆಡೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು–ಮೈಸೂರು ಹೆದ್ದಾರಿಯ ಕಂದಾಯ ಭವನದ ಪಕ್ಕ ಜಾಗ ನಿಗದಿಪಡಿಸಲಾಯಿತು.

ಅಂದುಕೊಂಡಂತೆ ಆ ಜಾಗದಲ್ಲಿ ಜಿಲ್ಲಾಸ್ಪತ್ರೆಗಾಗಿ ಹೆದ್ದಾರಿ ಪಕ್ಕವೇ ಸುಸಜ್ಜಿತವಾದ ಕಟ್ಟಡ ತಲೆ ಎತ್ತಿ 2023ರಲ್ಲಿ ಲೋಕಾರ್ಪಣೆಗೊಂಡಿತು. ಹೊಸ ಕಟ್ಟಡಕ್ಕೆ ಜಿಲ್ಲಾಸ್ಪತ್ರೆಯು ಸ್ಥಳಾಂತರಗೊಂಡ ಬಳಿಕ ಹಳೆ ಕಟ್ಟಡವನ್ನು ಆರೋಗ್ಯ ಇಲಾಖೆ ಮರೆಯಿತು. ಇದರಿಂದಾಗಿ ಹಳೆ ಕಟ್ಟಡವು ಶಿಥಿಲಾವಸ್ಥೆ ತಲುಪಿ ಪಾಳು ಬಿದ್ದಿದೆ.

‘ನಗರ ಮತ್ತು ಜಿಲ್ಲೆಯ ಜನರ ಆರೋಗ್ಯವನ್ನು ಕಾಪಾಡಿದ, ಸಾವಿರಾರು ಮಕ್ಕಳಿಗೆ ಜನ್ಮತಾಣವಾದ ಆಸ್ಪತ್ರೆಯ ರಸ್ತೆಯಲ್ಲಿ ಸಾಗುವಾಗ, ಶೋಚನೀಯ ಸ್ಥಿತಿಯಲ್ಲಿರುವ ಕಟ್ಟಡವನ್ನು ನೋಡಿದ ಎಂತಹವರಿಗೇ ಆದರೂ ಒಂದು ಕ್ಷಣ ಬೇಸರ ಎನಿಸದಿರದು. ಆರೋಗ್ಯ ಇಲಾಖೆಯವರು ಈ ಕಟ್ಟಡವನ್ನು ಚನ್ನಾಗಿ ನಿರ್ವಹಣೆ ಮಾಡಿ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ನಿಸಾರ್ ಅಹಮದ್ ಒತ್ತಾಯಿಸಿದರು.

ಕಟ್ಟಡ ಪರಿಶೀಲಿಸಿದ ಶಾಸಕ

ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಇತ್ತೀಚೆಗೆ ಅಧಿಕಾರಿಗಳೊಂದಿಗೆ ಹಳೆ ಆಸ್ಪತ್ರೆ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐದು ವರ್ಷಗಳಿಂದ ಯಾವುದೇ ಉಪಯೋಗಕ್ಕೆ ಬಾರದ ಇಷ್ಟು ದೊಡ್ಡ ಕಟ್ಟಡದಲ್ಲಿ ಏನಾದರೂ ಚಟುವಟಿಕೆ ನಡೆಸುವ ಮೂಲಕ ಜನಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆ ಕುರಿತು ಪ್ರಸ್ತಾವ ಸಿದ್ದಗೊಂಡು ಅನುಮೋದನೆ ಪಡೆದು ಕಾರ್ಯಗತವಾಗುವುದು ಯಾವಾಗ ಎಂದು ಕಾದು ನೋಡಬೇಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-14-506935717

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ