ಶಾಂತಿ ಒಪ್ಪಂದವೋ, ನಾಶವೋ?: ಎಚ್ಚರಿಕೆ ಬೆನ್ನಲ್ಲೇ ಇರಾನ್ ಜತೆ ಟ್ರಂಪ್ ಮಾತುಕತೆ
ಸುಮಾರು ಏಳು ತಿಂಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಾರದಿದ್ದರೆ ಇರಾನ್ ಅನ್ನು ಸಂಪೂರ್ಣವಾಗಿ ‘ಧ್ವಂಸ’ಗೊಳಿಸುವುದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎಚ್ಚರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ಬಳಿಕ ಕೆಲವೇ ಗಂಟೆಗಳಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಈ ಬಗ್ಗೆ ಖಚಿತಪಡಿಸಿದ್ದಾರೆ. ಆದರೆ ಸಭೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಲಿಲ್ಲ. ಅದೊಂದು ಉತ್ತಮ ಸಭೆಯಾಗಿತ್ತು ಎಂದಷ್ಟೇ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್, ಇರಾನ್ ಮೇಲಿನ ಸೈನಿಕ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಜಗತ್ತಿನ ಬೇರೆ ದೇಶಗಳ ನಾಯಕರಿರು ತೋದರದ ಧೈರ್ಯವನ್ನು ತಾವು ಪ್ರದರ್ಶಿಸಿರುವುದಾಗಿ ಪ್ರತಿಪಾದಿಸಿದ್ದಾರೆ.
ಜತೆಗೆ, ಯುದ್ಧದ ಬಗ್ಗೆ ತಾವು ಶೀಘ್ರವೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಾಗಿ ಸುಳಿವು ನೀಡಿದ ಅವರು, ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಹಾಗೂ ಬಿಕ್ಕಟ್ಟು ಇತ್ಯರ್ಥಪಡಿಸಿಕೊಳ್ಳಲು ಮಾತುಕತೆಗೆ ಬರುವಂತೆ ಇರಾನ್‌ಗೆ ಕರೆ ನೀಡಿದ್ದಾರೆ.
'ನಾನೀಗ ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇರಾನ್ ತನ್ನನ್ನು ತಾನು ಪುನರ್ನಿರ್ಮಿಸಿಕೊಂಡು, ಮಧ್ಯಪ್ರಾಚ್ಯದಲ್ಲಿ ಅಥವಾ ಇಡೀ ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ದೇಶವಾಗಿ ಬೆಳೆಯಲು ಹಾದಿ ಮಾಡಿಕೊಡುವ ಒಪ್ಪಂದಕ್ಕೆ ಸಹಿ ಹಾಕಬೇಕೇ? ಅಥವಾ ಆ ಇಸ್ಲಾಮಿಕ್ ದೇಶವನ್ನು ತಕ್ಷಣವೇ ಧ್ವಂಸಗೊಳಿಸಿ, ಭವಿಷ್ಯದಲ್ಲಿ ಯಾವುದೇ ದೇಶವನ್ನು ನಾಶಮಾಡಲು ಅವಕಾಶವಿಲ್ಲದಂತೆ ಮಾಡಬೇಕೇ?' ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರ ಹಾಗೂ ಕದನ ವಿರಾಮ ಒಪ್ಪಂದವನ್ನು ಅಮೆರಿಕದ ಮಧ್ಯಂತರ ಚುನಾವಣೆಯವರೆಗೆ ಮುಂದೂಡುವುದು ಇರಾನ್‌ನ ತಂತ್ರವಾಗಿದೆ. ಆದರೆ ಇರಾನ್‌ನ ಈ ಚಾಣಾಕ್ಷ ತಂತ್ರಗಳಿಗೆ ನಾನು ಮಣಿಯುವುದಿಲ್ಲ. ಈ ಭಯೋತ್ಪಾದಕ ಆಡಳಿತವು ದುರ್ಬಲಗೊಂಡು ನಿರಾಶೆಯಲ್ಲಿ ಹೀಗೆ ವರ್ತಿಸುತ್ತಿದೆಯೇ ಹೊರತು, ಧೈರ್ಯದಿಂದಲ್ಲ ಎಂದಿದ್ದಾರೆ. ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಂತೆಯೇ ಇರಾನ್ ನಿಯೋಗದ ಹೆಚ್ಚಿನ ಸದಸ್ಯರು ಸಭೆಯಿಂದ ಹೊರನಡೆದಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಇರಾನ್ ಬಿಕ್ಕಟ್ಟಿನದ್ದೇ ಸದ್ದು:
ಇರಾನ್ ವಿರುದ್ಧದ ಯುದ್ಧವೇ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಕಳೆದ ವರ್ಷದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್, 2025ರ ಜೂನ್‌ನಲ್ಲಿ ಇರಾನ್‌ನ ಮೂರು ಪ್ರಮುಖ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಿರುವುದಾಗಿ ಹೇಳಿಕೊಂಡಿದ್ದರು.
ಇದೀಗ ಯುದ್ಧ ಆರಂಭವಾಗಿ ಏಳು ತಿಂಗಳು ಪೂರೈಸುತ್ತಿರುವ ವೇಳೆಯಲ್ಲಿ ಮತ್ತೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಅವರು, 'ಇರಾನ್‌ನಿಂದ ಎದುರಾಗಿದ್ದ ಪರಮಾಣು ಬೆದರಿಕೆಯನ್ನು ತಡೆಗಟ್ಟಲು ಸೇನಾ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿತ್ತು' ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಸ್ತುತ ಈ ಯುದ್ಧ ಮತ್ತಷ್ಟು ಸಂಕೀರ್ಣವಾಗಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಗಳಲ್ಲಿ ಇರಾನ್‌ನ ನಾಯಕತ್ವವೇ ನಿರ್ನಾಮವಾಗಿದೆ. ಅದರ ವಾಯುಪಡೆ ಹಾಗೂ ನೌಕಾಪಡೆಗೆ ಭಾರಿ ಹಾನಿಯಾಗಿದೆ. ಇದರ ಜೊತೆಗೆ ಅಮೆರಿಕ ವಿಧಿಸಿರುವ ತೈಲ ದಿಗ್ಬಂಧನದಿಂದಾಗಿ ಟೆಹರಾನ್ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ ಎಂದೂ ಟ್ರಂಪ್ ಹೇಳಿದ್ದಾರೆ.
ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ತೀವ್ರವಾಗಿ ಏರಿವೆ. ಆದರೆ ಯುದ್ಧ ಮುಗಿದ ತಕ್ಷಣ ತೈಲ ಬೆಲೆ ಮೊದಲು ಇದ್ದದ್ದಕ್ಕಿಂತ (ಯುದ್ಧ ಆರಂಭವಾಗುವ ಮುನ್ನ) ಕಡಿಮೆಯಾಗಲಿದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ತಮ್ಮ ವಿದೇಶಾಂಗ ನೀತಿಯನ್ನು ಸಮರ್ಥಿಸಿಕೊಂಡ ಅವರು, ಅಪಾಯಗಳನ್ನು ಬೆಳೆಯಲು ಬಿಡುವ ಬದಲು ಅವುಗಳನ್ನು ಆರಂಭದಲ್ಲೇ ಎದುರಿಸುವುದು ನನ್ನ ಶೈಲಿ. ಸಮಸ್ಯೆಗಳನ್ನು ಹಾಗೆಯೇ ಬಿಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.
ಇರಾನ್ ಜತೆ ಮಾತುಕತೆಗೆ ಸಿದ್ಧ
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆಯಲ್ಲೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ನೀಡಿದ ಹೇಳಿಕೆಯ ಬೆನ್ನಲ್ಲೇ ಮಾತುಕತೆ ನಡೆದಿವೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಭೆಯ ವೇಳೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಲು ಟ್ರಂಪ್ ಸಿದ್ಧರಿದ್ದಾರೆ ಎಂದು ರೂಬಿಯೋ ಸುಳಿವು ನೀಡಿದ್ದರು.
ಎನ್‌ಬಿಸಿಯ 'ಟುಡೇ' (NBC's Today) ಕಾರ್ಯಕ್ರಮದಲ್ಲಿ ಮಾತನಾಡಿದ್ದ ರೂಬಿಯೋ, ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಮಾತುಕತೆ ನಡೆಸುವುದು ಅಗತ್ಯ ಎಂದು ಅಧ್ಯಕ್ಷರು ನಂಬುತ್ತಾರೆ. ಹಾಗಾಗಿ ಅವರು ಯಾರೊಂದಿಗಾದರೂ ಸಭೆ ನಡೆಸಲು ಸಿದ್ಧರಿರುತ್ತಾರೆ. ಇದರರ್ಥ ನೀವು ಅವರ ಎಲ್ಲಾ ವಿಚಾರಗಳಿಗೂ ಒಪ್ಪಿಕೊಳ್ಳುತ್ತಾರೆ ಎಂದಲ್ಲ, ಆದರೆ ಮಾತುಕತೆ ನಡೆಸುವುದು ಮುಖ್ಯ ಎಂದು ಹೇಳಿದ್ದರು.
ಒಂದು ವೇಳೆ ಒಪ್ಪಂದಕ್ಕೆ ಬಾರದಿದ್ದರೆ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಮುಂದುವರಿಸುವುದಾಗಿ ಟ್ರಂಪ್ ಎಚ್ಚರಿಸುತ್ತಲೇ ಇದ್ದಾರಾದರೂ, ಈ ಮಾತುಕತೆಗಳು ಸಂಕೀರ್ಣ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಸಣ್ಣದೊಂದು ಆಶಾದಾಯಕ ಬೆಳವಣಿಗೆಯಾಗಿದೆ.