
ಕಬ್ಬು ಒಣಗುತ್ತಿದೆ, ಕಟಾವಿಗೆ ಅನುಮತಿ ಕೊಡಿ: ರಾಣೆಬೆನ್ನೂರು ರೈತರ ಗೋಳು
ಹಾವೇರಿ/ ರಾಣೆಬೆನ್ನೂರು: ‘ನೀರಾವರಿ ಮೂಲಕ ಬೆಳೆದ ಕಬ್ಬು ಕಟಾವು ಹಂತಕ್ಕೆ ಬಂದಿದೆ. ಹೆಸ್ಕಾಂನವರು ಈಗ ವಿದ್ಯುತ್ ಸರಿಯಾಗಿ ಕೊಡುತ್ತಿಲ್ಲ. ಬೆಳೆಗೆ ನೀರು ಹರಿಸಲು ಆಗುತ್ತಿಲ್ಲ. ಇದರಿಂದ, ಕಬ್ಬು ಕ್ರಮೇಣ ಒಣಗುತ್ತಿದೆ. ಬೆಳೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೇವೆ’....
ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ ಹಲವು ರೈತರ ಗೋಳು ಇದು. ಒಣಗುತ್ತಿರುವ ಕಬ್ಬಿನ ಬೆಳೆಯಿರುವ ಹೊಲದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ರೈತರು, ‘ಕಬ್ಬು ಕಟಾವು ಮಾಡಲು ಜಿಲ್ಲಾಡಳಿತ ತ್ವರಿತವಾಗಿ ಅನುಮತಿ ನೀಡಬೇಕು. ನಮ್ಮನ್ನು ಉಳಿಸಬೇಕು’ ಎಂದು ಆಗ್ರಹಿಸಿದರು.
‘ಕಬ್ಬಿಗೆ ಟನ್‌ಗೆ ₹ 5,500 ದರ ನಿಗದಿಪಡಿಸುವವರೆಗೂ ಕಾರ್ಖಾನೆ ಆರಂಭಿಸಬಾರದು’ ಎಂದು ರೈತ ಸಂಘಟನೆಗಳ ಕೆಲ ಮುಖಂಡರು ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆಯೇ ಹಲಗೇರಿ ರೈತರು, ಕಬ್ಬು ಕಟಾವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿದೆ.
ಹಲಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ನೀರಾವರಿ ಆಶ್ರಿತದಲ್ಲಿ ಕಬ್ಬ ಬೆಳೆಯಲಾಗಿದೆ. ಈಗ, ಸಮರ್ಪಕವಾಗಿ ವಿದ್ಯುತ್ ಇಲ್ಲದಿದ್ದರಿಂದ ಕೊಳವೆ ಬಾವಿಗಳನ್ನು ಆರಂಭಿಸಲು ಆಗುತ್ತಿಲ್ಲ. ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಬ್ಬು ಒಣಗುತ್ತಿದ್ದು, ಕಬ್ಬು ಕಟಾವು ಮಾಡಲು ಅನುಮತಿ ನೀಡಲೇ ಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯಾದ್ಯಂತ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಕಟಾವು ಹಂತಕ್ಕೆ ಬಂದಿದೆ. ನೀರು ಇಲ್ಲದಿದ್ದರಿಂದ, ಕಬ್ಬು ಬೆಳೆಯ ಸ್ಥಿತಿ ಶೋಚನೀಯವಾಗಿದೆ. ಇದೇ ಕಾರಣಕ್ಕೆ ಹಲವು ರೈತರು, ತಮ್ಮ ಕಬ್ಬು ಕಟಾವು ಮಾಡಿಸುವಂತೆ ಕಾರ್ಖಾನೆಯವರನ್ನು ಕೋರುತ್ತಿದ್ದಾರೆ.
ಆದರೆ, ಅಕ್ಟೋಬರ್ 15ರ ನಂತರವೇ ಕಾರ್ಖಾನೆ ಆರಂಭಿಸುವಂತೆ ಸರ್ಕಾರ ಹೇಳಿದೆ. ರೈತ ಸಂಘಟನೆಗಳ ಕೆಲ ಮುಖಂಡರು, ‘ಬೇಗನೇ ಕಾರ್ಖಾನೆ ಆರಂಭಿಸಿದರೆ, ಸಕ್ಕರೆ ಇಳುವರಿ ಕಡಿಮೆಯಾಗುತ್ತದೆ. ಹೀಗಾಗಿ, ನವೆಂಬರ್ ನಂತರ ಕಬ್ಬು ಕಟಾವು ಮಾಡಬೇಕು’ ಎಂದು ಒತ್ತಾಯಿಸುತ್ತಿದ್ದಾರೆ. ಇದರ ನಡುವೆಯೇ ಹಲವು ರೈತರು, ಒಣಗುತ್ತಿರುವ ಕಬ್ಬಿನ ಎದುರು ಕಣ್ಣೀರು ಹಾಕುತ್ತಿದ್ದಾರೆ.
‘ಹಲಗೇರಿ ಗ್ರಾಮ ವ್ಯಾಪ್ತಿಯಲ್ಲಿ 40 ಎಕರೆಯಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಕಬ್ಬು ಕಟಾವಿಗೆ ಬಂದಿದ್ದು, ನಿಧಾನವಾಗಿ ಒಣಗುತ್ತಿದೆ. ಜಿಲ್ಲಾಡಳಿತವು ಕಬ್ಬು ಕಟಾವು ಮಾಡಲು ಅನುಮತಿ ಕೊಡಬೇಕು. ಸಕ್ಕರೆ ಕಾರ್ಖಾನೆಗಳನ್ನು ತ್ವರಿತವಾಗಿ ಆರಂಭಿಸಬೇಕು’ ಎಂದು ರೈತ ಸೋಮನಗೌಡ ಮಾಳಗಿ ಆಗ್ರಹಿಸಿದರು.
‘ಕೊಳವೆಬಾವಿ ಮೂಲಕ ನೀರಾವರಿ ಆಶ್ರಯದಲ್ಲಿ ಕಬ್ಬು ಬೆಳೆದಿದ್ದೇವೆ. ಮಳೆಯಿಲ್ಲದೇ, ಕಬ್ಬಿನ ಬೆಳೆ ಒಣಗುತ್ತಿದೆ. ವಿದ್ಯುತ್ ಸಹ ಸರಿಯಾಗಿ ನೀಡುತ್ತಿಲ್ಲ. ಅಂತರ್ಜಲ ಮಟ್ಟವೂ ಕಡಿಮೆಯಾಗಿದೆ. ಬಿಸಿಲಿನ ತಾಪಕ್ಕೆ ಕಬ್ಬಿನ ಬೆಳೆ ಮತ್ತಷ್ಟು ಒಣಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರು ಗಮನ ಹರಿಸಬೇಕು. ಕಬ್ಬು ಬೆಳೆದಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು’ ಎಂದು ರೈತ ಬಸನಗೌಡ ಪಾಟೀಲ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಶಿವಾನಂದ ಕನ್ನಪ್ಪನವರ, ಬಸವರಾಜ ಕಾಟೇನಹಳ್ಳಿ, ಹನುಮಂತಪ್ಪ ಮಡಿವಾಳರ, ಈರಣ್ಣ ಚೌರಡ್ಡಿ, ಸಂಜೀವ ಕನವಳ್ಳಿ, ನಿಂಗಪ್ಪ ಪೂಜಾರ, ಸಿದ್ದನಗೌಡ ಕಡೂರು, ರಾಜು ಕರಬಸಳ್ಳನವರ, ಶಿವಯೋಗಿಗಚ್ಚಿನಮನಿ, ಶೇಖಪ್ಪ ಬಾರ್ಕಿ, ಸಿದ್ದಲಿಂಗನಗೌಡ ಪಾಟೀಲ, ಜಗದೀಶ ಕನ್ನಪ್ಳವರ, ಶಂಕ್ರಪ್ಪ ಬ್ಯಾಡಗಿ, ರಮೇಶ ಮೂಲಿಮನಿ ಹಾಗೂ ಇತರರು ಇದ್ದರು.
‘ಭೀಕರ ಬರಗಾಲದಲ್ಲಿ ಕಬ್ಬು ಕಣ್ಣೆದುರೇ ಒಣಗುತ್ತಿದೆ. ಅದನ್ನು ಕಟಾವು ಮಾಡಲು ಅನುಮತಿ ಇಲ್ಲದಿದ್ದರಿಂದ, ರೈತರಿಗೆ ಅನ್ಯಾಯವಾಗುತ್ತದೆ’ ಎಂದು ರೈತ ಮುದುಕನಗೌಡ ಕಲ್ಲಪ್ಪಗೌಡ್ರ ದೂರಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಕಬ್ಬಿನ ಬೆಳೆ ಒಣಗಿದರೆ, ತೂಕ ಬರುವುದಿಲ್ಲ. ಆದ್ದರಿಂದ, ಜಿಲ್ಲಾಡಳಿತವು ತ್ವರಿತವಾಗಿ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡಿ ಕಬ್ಬು ಕಟಾವು ಮಾಡಲು ಅನುಕೂಲ ಮಾಡಿಕೊಡಬೇಕು. ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸಲು ಬೇಗನೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.