ಯಾದಗಿರಿ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆಯ ಆಗರ: ಕ್ರೀಡಾಪಟುಗಳ ಸಂಕಟ

ಯಾದಗಿರಿ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆಯ ಆಗರ: ಕ್ರೀಡಾಪಟುಗಳ ಸಂಕಟ

ಯಾದಗಿರಿ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆಯ ಆಗರ: ಕ್ರೀಡಾಪಟುಗಳ ಸಂಕಟ

ಯಾದಗಿರಿ: ಪ್ರವೇಶದ್ವಾರದಲ್ಲಿ ಸ್ವಾಗತಿಸುವ ಕಿತ್ತು ಹೋದ ಡಾಂಬರ್ ರಸ್ತೆ, ದಟ್ಟವಾಗಿ ಬೆಳೆದಿರುವ ಹುಲ್ಲು– ಮುಳ್ಳುಕಂಟಿಗಳು, ಅಸ್ಥಿಪಂಜರದಂತೆ ಇರುವ ವೀಕ್ಷಕರ ಗ್ಯಾಲರಿ, ಬಿರುಕು ಬಿಟ್ಟ ಸಹಾಯಕ ನಿರ್ದೇಶಕರ ಕಚೇರಿ (ಹಳೇ) ಕಟ್ಟಡದ ಗೋಡೆಗಳು, ಕಲ್ಲು ಮಿಶ್ರಿತ ಮೈದಾನ, ಕತ್ತಲಾದರೆ ಬೆಳಕು ನೀಡದ ವಿದ್ಯುತ್‌ ದೀಪಗಳು... ಇದು ಚಿತ್ತಾಪುರ ರಸ್ತೆಯಲ್ಲಿ ಇರುವ ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆಯ ಚಿತ್ರಣ.

ಕಲಬುರಗಿ ಜಿಲ್ಲೆಯಿಂದ ವಿಭಜನೆಯಾಗಿ ಒಂದೂವರೆ ದಶಕ ಕಳೆದು, ಕೋಟ್ಯಂತರ ರೂಪಾಯಿ ಅನುದಾನ ಹರಿದು ಬಂದರೂ ಯಾದಗಿರಿ ಜಿಲ್ಲಾ ಕ್ರೀಡಾಂಗಣದ ಚಹರೆ ಬದಲಾಗಲೇ ಇಲ್ಲ. ಕನಿಷ್ಠ ಮೂಲಸೌಕರ್ಯಗಳೂ ಇಲ್ಲವಾಗಿವೆ. ಬಾಲಕರ ಕ್ರೀಡಾ ವಸತಿ ನಿಲಯದ 38 ವಿದ್ಯಾರ್ಥಿಗಳು ಟೇಬಲ್ ಟೆನಿಸ್ ಕಟ್ಟಡದ ಹಾಲ್‌ನಲ್ಲಿ ವಾಸ ಇರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

40.39 ಎಕರೆ ವಿಸ್ತೀರ್ಣದ ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಕ್ರೀಡಾಪಟುಗಳು, ಸ್ಥಳೀಯರು, ಸಂಘ–ಸಂಸ್ಥೆಗಳು ಸಮಸ್ಯೆಗಳ ಪಟ್ಟಿ ಹಿಡಿದು ಹೋರಾಟ ಮಾಡುತ್ತಿದ್ದರೂ ಸ್ಪಂದನೆ ಸಿಗುತ್ತಿಲ್ಲ. ಬದಲಾಗಿ ವಾಹನ ಚಾಲನಾ ಪರೀಕ್ಷೆ ತರಬೇತಿ, ತಡರಾತ್ರಿವರೆಗೆ ಔತಣಕೂಟ (ಈಜುಕೊಳ), ರಸಮಂಜರಿಯಂತಹ ಕಾರ್ಯಕ್ರಮಗಳಿಗೆ ಬಳಕೆಯಾಗಿದ್ದರ ನಿದರ್ಶನವೂ ಇದೆ. ಹೀಗಾಗಿ, ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಹೈರಾಣಾಗಿರುವ ಕ್ರೀಡಾಪಟುಗಳು ಅಭಿವೃದ್ಧಿಯ ಆಸೆಯನ್ನೇ ಕೈಬಿಟ್ಟಿದ್ದಾರೆ.

2013ರಲ್ಲಿ ನಿರ್ಮಾಣವಾದ ಜಿಲ್ಲಾ ಕ್ರೀಡಾಂಗಣದ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡದಲ್ಲಿ ಈಗ ವಿವಿಧೋದ್ದೇಶ ವ್ಯಾಯಾಮ ಶಾಲೆ (ಜಿಮ್‌) ನಡೆಸಲಾಗುತ್ತಿದೆ. ಜಿಮ್ ಪ್ರವೇಶದ್ವಾರ ಬದಿಯ ಗೋಡೆಯಲ್ಲಿ ಬಿರುಕು ಬಿಟ್ಟು, ಸಿಮೆಂಟ್‌ನ ತೇಪೆ ಹಚ್ಚಲಾಗಿದೆ. ಜಿಮ್ ಪಕ್ಕದ ಕೋಣೆಯ ಗೋಡೆಗಳ ತುಂಬೆಲ್ಲ ಬಿರುಕುಗಳೇ ಆವರಿಸಿದ್ದು, ಕೆಲವೆಡೆ ಬಿರುಕಿನ ಅಂತರ 3–4 ಇಂಚುಗಳಷ್ಟಿದೆ. ಯಾವುದೇ ಕ್ಷಣದಲ್ಲಿ ಗೋಡೆ ಕುಸಿದು ಬಿದ್ದು ಅಪಾಯಕ್ಕೆ ಆಹ್ವಾನಿಸುವಂತೆ ಇದೆ.

2020ರಲ್ಲಿ ಕೆಕೆಆರ್‌ಡಿಬಿಯ ₹ 2 ಕೋಟಿ ಅನುದಾನದಲ್ಲಿ ಕ್ರೀಡಾಂಗಣದಲ್ಲಿ ರಸ್ತೆ ಹಾಗೂ ಒಳ ಚರಂಡಿ ಮಾಡಲಾಗಿತ್ತು. ರಸ್ತೆಯಲ್ಲಿ ಕಿತ್ತು ಹೋಗಿ, ಕಾಂಕ್ರೀಟ್‌ಗಳು ತೇಲಿವೆ. ಚರಂಡಿಗಳಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ಬಿದ್ದ ಮಳೆ ನೀರು ಹರಿದು ಹೋಗುತ್ತಿಲ್ಲ. ರಸ್ತೆ ಬದಿಯ ಕಬ್ಬಿಣದ ಕಂಬಗಳು ತುಕ್ಕು ಹಿಡಿದು, ವಿದ್ಯುತ್ ದೀಪಗಳು ಇಲ್ಲದೆ ನಿಂತಿವೆ.

ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುವ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ, ಜಿಲ್ಲೆಯ ಪ್ರತಿಭೆಗಳು ಹೊರ ಜಿಲ್ಲೆಗಳತ್ತ ಮುಖ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ರಾಜ್ಯೋತ್ಸವದಂತಹ ಸಂದರ್ಭದಲ್ಲಿ ಮಾತ್ರ ಕಸ ಕಡ್ಡಿ ತೆಗೆದು, ಮುಂಭಾಗದ ಹುಲ್ಲು ಕತ್ತರಿಸಿ ಸ್ವಚ್ಛ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಕ್ರೀಡಾಂಗಣ ಅನಾಥ ಮಗುವಿನಂತೆ ಇರುತ್ತದೆ ಎನ್ನುತ್ತಾರೆ ಕ್ರೀಡಾಪಟುಗಳು.

‘ಅನುದಾನಕ್ಕೆ ಪ್ರಸ್ತಾವ ಸಲ್ಲಿಕೆ’

‘ಕ್ರೀಡಾಂಗಣದ ಮೂಲಸೌಕರ್ಯ, ಅಂಕಣಗಳ ನಿರ್ಮಾಣ ಕೋರಿ ಪ್ರತಿ ವರ್ಷ ಸುಮಾರು ₹ 5 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸುತ್ತಿದ್ದೇವೆ. ಈ ವರ್ಷ ಸುಮಾರು ₹2.85 ಕೋಟಿ ಅನುದಾನ ಬರಬಹುದು’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನುದಾನ ಬಂದರೆ ಕಟ್ಟಡಗಳ ದುರಸ್ತಿ, ಬೀದಿ ಬದಿ ದೀಪ, ಗೋಡೆಗಳ ಪ್ಲಾಸ್ಟರ್‌ನಂತಹ ಕಾರ್ಯಗಳಿಗೆ ಬಳಸಲಾಗುವುದು. ಈಗಿರುವ ಪುರುಷರ ಜಿಮ್‌ ಬದಿಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಜಿಮ್‌ ವ್ಯವಸ್ಥೆ ಮಾಡಿ, ಬೇರೆಡೆ ಪ್ರವೇಶದ್ವಾರ ಮಾಡಲಾಗುವುದು’ ಎಂದರು.

ಕ್ರೀಡಾಂಗಣ ಹುಲ್ಲುಗಾವಲು

ಇಡೀ ಮೈದಾನದ ತುಂಬೆಲ್ಲ ಗರಿಕೆ ಹುಲ್ಲು ದಟ್ಟವಾಗಿ, ಅಲ್ಲಲ್ಲಿ ಗಿಡಗಂಟ್ಟಿಗಳು ಬೆಳೆದಿದ್ದು, ಜಾನುವಾರು ಮೇಯಿಸುವ ಹುಲ್ಲುಗಾವಲಿನಂತೆ ಆಗಿದೆ. ನಿತ್ಯ ಹತ್ತಾರು ಎತ್ತು, ದನಗಳು ಮೇಯುವುದು ಇಲ್ಲಿ ಸಾಮಾನ್ಯವಾಗಿದೆ.

ಈಜುಕೊಳ, ಟೇಬಲ್ ಟೆನಿಸ್ ಕಟ್ಟಡ, ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ, ಕ್ರೀಡಾ ಸಾಮಗ್ರಿಗಳ ದಾಸ್ತಾನು ಕೋಣೆಗಳ ಹಿಂಬದಿಯಲ್ಲಿ ದಟ್ಟ ಹುಲ್ಲು, ಗಿಡಗಂಟಿಗಳು ಬೆಳೆದು ವಿಷಜಂತುಗಳ ತಾಣವಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-30-1020163553

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ