
ಜಕ್ಕರಾಯನ ಕೆರೆ ಮೈದಾನಕ್ಕೀಗ ಅಭಿವೃದ್ಧಿ ಭಾಗ್ಯ: ಹಸಿರು ವನವಾಗಿ ರೂಪಿಸಲು ಪ್ರಯತ್ನ
ಬೆಂಗಳೂರು: ಕೆಲವೇ ತಿಂಗಳ ಹಿಂದೆ ಈ ಮೈದಾನದ ತುಂಬೆಲ್ಲಾ ಗುಜರಿ ವಾಹನಗಳೇ ಕಾಣಿಸುತ್ತಿದ್ದವು. ಜತೆಗೆ, ಹಾವುಗಳ ಓಡಾಟ, ಪುಡಿ ರೌಡಿಗಳ ಹಾವಳಿ, ರಾತ್ರಿ ವೇಳೆ ಮದ್ಯವ್ಯಸನಿಗಳ ಕಾಟ, ಬೆಳೆದು ನಿಂತಿದ್ದ ಗಿಡಗಂಟಿಗಳು... ಇದೀಗ ಆ ಪ್ರದೇಶವನ್ನೇ ‘ಹಸಿರು ವನ’ವನ್ನಾಗಿ ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ.
ಗುಜರಿ ವಾಹನಗಳು ನಿಂತಿದ್ದ ಮೈದಾನದಲ್ಲಿ ನಿಧಾನವಾಗಿ ಹಣ್ಣಿನ ಗಿಡಗಳು, ಕಾಡು ಜಾತಿಯ ಸಸಿಗಳು ಬೆಳೆಯುತ್ತಿವೆ. ಹಸಿರು ನೋಡುಗರ ಕಣ್ಮನ ಸೆಳೆಯುತ್ತಿದೆ. ಪೊಲೀಸ್ ಇಲಾಖೆಯ ಸುಪರ್ದಿಯಲ್ಲಿ ಇರುವ ಶ್ರೀರಾಮಪುರದ ಜಕ್ಕರಾಯನ ಕೆರೆ ಮೈದಾನವು ಬದಲಾವಣೆ ಆಗುತ್ತಿರುವ ಪರಿಯಿದು.
ಅಪಘಾತದಿಂದ ನಜ್ಜುಗುಜ್ಜಾದ, ಸಂಚಾರ ನಿಯಮ ಉಲ್ಲಂಘಿಸಿದ, ಕಳ್ಳರಿಂದ ಜಪ್ತಿ ಮಾಡಿದ ವಾಹನಗಳನ್ನು ಈ ಮೈದಾನಕ್ಕೆ ತಂದು ಸಂಚಾರ ಪೊಲೀಸರು ನಿಲುಗಡೆ ಮಾಡುತ್ತಿದ್ದರು. ಹಲವು ವರ್ಷಗಳಿಂದ ನಿಂತಲ್ಲೇ ನಿಂತಿದ್ದ ಖಾಸಗಿ ಬಸ್, ಕಾರು, ಜೀಪು, ಆಟೊ, ದ್ವಿಚಕ್ರ ವಾಹನಗಳು ತುಕ್ಕು ಹಿಡಿಯುತ್ತಿದ್ದವು. ಮದ್ಯವ್ಯಸನಿಗಳು ರಾತ್ರಿ ವೇಳೆ ಕಾಂಪೌಂಡ್ ಹಾರಿ ಬಂದು, ಗುಜರಿ ವಾಹನಗಳಲ್ಲಿಯೇ ‘ಮದ್ಯದ ಪಾರ್ಟಿ’ ನಡೆಸುತ್ತಿದ್ದರು. ಪಾರ್ಟಿಯಾದ ಮೇಲೆ ಬಾಟಲಿಗಳನ್ನು ಒಡೆದು ಹಾಕಿ ತೆರಳುತ್ತಿದ್ದರು. ದುಷ್ಕೃತ್ಯ ನಡೆಸಲು ಕಳ್ಳರು ಈ ಮೈದಾನಕ್ಕೆ ಬಂದು ಸಂಚು ರೂಪಿಸುತ್ತಿದ್ದರು. ಪೊಲೀಸರಿಗೂ ಅದು ತಲೆನೋವಾಗಿ ಪರಿಣಮಿಸಿತ್ತು.
ಸಾಕಷ್ಟು ಬಾರಿ ಮನವಿ: ಮೈದಾನದಲ್ಲಿದ್ದ 500ಕ್ಕೂ ಹೆಚ್ಚು ಹಳೆಯ ವಾಹನಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಶ್ರೀರಾಮಪುರ ಠಾಣೆಯ ಪೊಲೀಸರು, ಜಿಬಿಎ (ಹಿಂದಿನ ಬಿಬಿಎಂಪಿ) ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಸ್ಪಂದನೆ ಸಿಕ್ಕಿರಲಿಲ್ಲ. ಶಾಸಕರ ಸೂಚನೆ ಮೇರೆಗೆ ಕಾರ್ಯ ಪ್ರವೃತ್ತರಾಗಿದ್ದ ಜಿಬಿಎ ಅಧಿಕಾರಿಗಳು, ಪೊಲೀಸರ ನೆರವು ಪಡೆದು ಗುಜರಿ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಶ್ರೀರಾಮಪುರ ಪೊಲೀಸ್ ಠಾಣೆಯ ಸುಪರ್ದಿಯಲ್ಲಿದ್ದ ಜಾಗವನ್ನು ನಗರ ಸಶಸ್ತ್ರ ಮೀಸಲು ಪಡೆಗೆ(ಸಿಎಆರ್) ಹಸ್ತಾಂತರಿಸಲಾಗಿದೆ. ಸಿಎಆರ್‌ನಿಂದ ಮೈದಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಮೈದಾನವು ಮೆಜೆಸ್ಟಿಕ್, ಗಾಂಧಿ ನಗರಕ್ಕೆ ಹತ್ತಿರವಿದೆ. ಅದೇ ಕಾರಣಕ್ಕೆ ರಾತ್ರಿ ವೇಳೆ ಭಿಕ್ಷುಕರು ಮೈದಾನಕ್ಕೆ ಬಂದು ಹಳೆಯ ವಾಹನಗಳಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಬೆಳಿಗ್ಗೆ ಎದ್ದು ಮತ್ತೆ ಮೆಜೆಸ್ಟಿಕ್‌ನತ್ತ ತೆರಳುತ್ತಿದ್ದರು.
‘ರಾತ್ರಿ ವೇಳೆ ಭಿಕ್ಷುಕರ ಓಡಾಟ ಹೆಚ್ಚಾಗಿ ಇರುತ್ತಿತ್ತು. ಸುತ್ತಮುತ್ತಲ ನಿವಾಸಿಗಳು ರಾತ್ರಿ ವೇಳೆ ಓಡಾಟ ನಡೆಸುವುದಕ್ಕೆ ಭಯ ಪಡುತ್ತಿದ್ದರು. ಮೈದಾನಕ್ಕೆ ಅಭಿವೃದ್ಧಿ ಭಾಗ್ಯ ಸಿಕ್ಕಿದ ಮೇಲೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ’ ಎಂದು ಸ್ಥಳೀಯರು ಹೇಳುತ್ತಾರೆ.
2 ಸಾವಿರಕ್ಕೂ ಹೆಚ್ಚು ಗಿಡಗಳು: ಈ ಮೈದಾನದ ಸುತ್ತಲೂ ಬೇರೆ ಬೇರೆ ಜಾತಿಯ 2 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಪ್ರತಿನಿತ್ಯ ನೀರುಣಿಸಲಾಗುತ್ತಿದೆ. ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಲ್ಲಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ.
ಉತ್ತರ ವಿಭಾಗದ 18 ಪೊಲೀಸ್ ಠಾಣೆಯ ಪೊಲೀಸರಿಗೆ ವಿಶೇಷ ಸಂದರ್ಭಗಳಲ್ಲಿ ಕವಾಯತು ನಡೆಸಲು ಮೈದಾನದ ಕೊರತೆ ಇದೆ. ಈ ಮೈದಾನದಲ್ಲಿ ಪರೇಡ್‌ಗೆ ಅವಕಾಶ ಲಭಿಸಿದರೆ ಬಳಸಿಕೊಳ್ಳುತ್ತೇವೆ. ಒಂದು ಬದಿಯಲ್ಲಿ ವೇದಿಕೆಯನ್ನೂ ನಿರ್ಮಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಭಸ್ಮವಾಗಿದ್ದವು 148 ಹಳೆಯ ವಾಹನಗಳು... 2025ರ ಜನವರಿ 21ರಂದು ಮೈದಾನದಲ್ಲಿ ಬೆಂಕಿ ಅವಘಡ ಸಂಭವಿಸಿ 131 ದ್ವಿಚಕ್ರ ವಾಹನಗಳು 14 ನಾಲ್ಕು ಚಕ್ರದ ವಾಹನಗಳು ಹಾಗೂ ಮೂರು ಆಟೊ ಭಸ್ಮಗೊಂಡಿದ್ದವು. ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ಹಾಗೂ ತುರ್ತುಸೇವಾ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಅಕ್ಕಪಕ್ಕದ ಬಡಾವಣೆಗೆ ಬೆಂಕಿ ವ್ಯಾಪಿಸದಂತೆಯೂ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದರು. ಮೈದಾನದ ಪಕ್ಕದಲ್ಲಿ ಹಲವು ಮನೆಗಳಿವೆ. ಒಂದು ಬದಿಯಲ್ಲಿ ಮೆಟ್ರೊ ಹಸಿರು ಮಾರ್ಗ ಇನ್ನೊಂದು ಬದಿಯಲ್ಲಿ ರೈಲ್ವೆ ಹಳಿಯಿದೆ. ಗಿಡಗಂಟಿಗಳನ್ನು ತೆರವುಗೊಳಿಸಿದ ಮೇಲೆ ಮೈದಾನವು ಅಂದವಾಗಿ ಕಾಣಿಸುತ್ತಿದೆ.
ಕಾವಲಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆ: ಜೆಡಿಎಸ್ ಪ್ರಧಾನ ಕಚೇರಿ ಕಡೆಯಿಂದ ಪ್ರವೇಶ ದ್ವಾರ ಇದೆ. ಪಕ್ಕದಲ್ಲೇ ಹನುಮಂತನಗರ ಕೊಳೆಗೇರಿ ಪ್ರದೇಶವಿದ್ದು ಕಿಡಿಗೇಡಿಗಳು ಪ್ರವೇಶಿಸದಂತೆ ಗೇಟ್‌ಗೆ ಬೀಗ ಹಾಕಲಾಗಿದೆ. ಕಾವಲಿಗೆ ಸಿಎಆರ್ ಸಿಬ್ಬಂದಿ ನಿಯೋಜಿಸಲಾಗಿದೆ. ಸ್ವಚ್ಛತೆ ಹಾಗೂ ಕಳೆಗಿಡಗಳ ತೆರವು ಕಾಯಕಕ್ಕೆ ಕಾರ್ಮಿಕರನ್ನು ನೇಮಿಸಲಾಗಿದೆ. ಸದ್ಯ ಮೈದಾನಕ್ಕೆ ಪುಂಡರ ಕಾಟ ತಪ್ಪಿದೆ.
ಈ ಪ್ರದೇಶದಲ್ಲಿ ಕೆರೆ ಇತ್ತು. ಕೆರೆಯನ್ನು ಮುಚ್ಚಿದ ಬಳಿಕ ಕ್ರೀಡಾ ಚಟುವಟಿಕೆಗಳಿಗೆ ಮೈದಾನ ಬಳಕೆ ಆಗುತ್ತಿತ್ತು. ಶೇಷಾದ್ರಿಪುರ ಶ್ರೀರಾಮಪುರ ಹನುಮಂತನಗರದ ನಿವಾಸಿಗಳು ವಾಯು ವಿಹಾರ ನಡೆಸುತ್ತಿದ್ದರು. ಆದರೆ ಹಳೆಯ ವಾಹನಗಳ ಡಂಪಿಂಗ್ ಯಾರ್ಡ್ ಆದ ಮೇಲೆ ಯಾರೂ ಇತ್ತ ಸುಳಿಯುತ್ತಿರಲಿಲ್ಲ. ಈ ಮೈದಾನವನ್ನು ಪೊಲೀಸ್ ಪರೇಡ್ ಕ್ರೀಡಾ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವಂತೆ 2021ರಲ್ಲಿಯೇ ಮನವಿ ಮಾಡಿದ್ದೆವು. ಈಗ ಸ್ಪಂದನೆ ಸಿಕ್ಕಿದೆ ಎಂದು ಸ್ಥಳೀಯರಾದ ನವೀನ್ ಹೇಳಿದರು.
ಡಿಸಿಪಿ ಜತೆಗೆ ಶಾಸಕ ಚರ್ಚೆ
ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಇತ್ತೀಚೆಗೆ ಮೈದಾನಕ್ಕೆ ಭೇಟಿ ಉತ್ತರ ವಿಭಾಗದ ಡಿಸಿಪಿ ನೇಮೇಗೌಡ ಜತೆಗೆ ಮೈದಾನ ಬಳಕೆಯ ಸಂಬಂಧ ಚರ್ಚಿಸಿದರು. ಅಕ್ಕಪಕ್ಕದ ಬಡಾವಣೆಯ ಮಕ್ಕಳಿಗೆ ಈ ಮೈದಾನದಲ್ಲಿ ಆಟವಾಡಲು ಅವಕಾಶ ಕಲ್ಪಿಸಬೇಕು. ಅಗತ್ಯವಿದ್ದಾಗ ಪೊಲೀಸರು ಸಹ ಮೈದಾನವನ್ನು ಪರೇಡ್‌ಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸ್ಥಳೀಯರು ಇದೇ ವೇಳೆ ಮನವಿ ಮಾಡಿದ್ದರು. ಗೃಹ ಸಚಿವ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.