
ನೀರಾವರಿ ವಿಚಾರದಲ್ಲಿ ನಮ್ಮ ಸರ್ಕಾರದ ಬದ್ಧತೆ ಪ್ರಶ್ನಾತೀತ: ಸಚಿವ ಚಲುವರಾಯಸ್ವಾಮಿ
ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅತ್ಯಂತ ಪ್ರಮುಖ ಘಟ್ಟವಾದ, ತುಂಗಾ ನದಿಯಿಂದ ಭದ್ರಾ ಅಣೆಕಟ್ಟೆಗೆ 17 ಟಿಎಂಸಿ ಅಡಿ ನೀರು ಪೂರೈಕೆ ಮಾಡುವ ಕಾಮಗಾರಿಯನ್ನು ನವಂಬರ್ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಪ್ರಾಯೋಗಿಕವಾಗಿ ನೀರು ಹರಿಯುತ್ತಿರುವ ತಾಲ್ಲೂಕಿನ ಆದಿರಾಳು, ಕೋವೇರಹಟ್ಟಿ ಮೊದಲಾದ ಕಡೆ ಭಾನುವಾರ ಕೆರೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
‘ರಾಜ್ಯದಲ್ಲಿ ಚಿತ್ರದುರ್ಗ ಅತಿ ಹೆಚ್ಚು ಬರಪೀಡಿತ ಪ್ರದೇಶ ಎಂಬುದು ಸತ್ಯ. ತುಂಗಾದಿಂದ ಭದ್ರಾಕ್ಕೆ ನೀರು ಹರಿಸುವ ಕಾಮಗಾರಿಗೆ ಅಡ್ಡಿಯಾಗಿದ್ದ ಅರಣ್ಯ ಇಲಾಖೆ ಅನುಮತಿ ದೊರೆತಿದೆ. ಗುತ್ತಿಗೆದಾರರ ಬಾಕಿ ಪಾವತಿಸಿದ್ದು, ಮುಖ್ಯಮಂತ್ರಿ ನೇತೃತ್ವದಲ್ಲಿ ಎಲ್ಲ ಸಮಸ್ಯೆ ಬಗೆಹರಿದಿರುವ ಕಾರಣ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ. ತುಂಗಾದಿಂದ 17 ಟಿಎಂಸಿ ಅಡಿ ನೀರು ಬಂದರೆ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ ಜಿಲ್ಲೆಗಳಿಗೆ ನೀರು ಹರಿಸಲು ತೊಂದರೆ ಆಗದು. ಕೆಲವೇ ವರ್ಷಗಳಲ್ಲಿ ಬಯಲುಸೀಮೆ ಹಸಿರುಸೀಮೆಯಾಗಲಿದೆ. ನೀರಾವರಿ ವಿಚಾರದಲ್ಲಿ ನಮ್ಮ ಸರ್ಕಾರದ ಬದ್ಧತೆ ಪ್ರಶ್ನಾತೀತ’ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಎಸ್.ನಿಜಲಿಂಗಪ್ಪನವರ ಕನಸು. ಹಲವರ ಹೋರಾಟದ ಫಲವಾಗಿ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಅಂತಿಮಘಟ್ಟದಲ್ಲಿದೆ. ನಮ್ಮ ಅವಧಿಯಲ್ಲಿಯೇ ಮೇಕೆದಾಟು, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಭದ್ರಾದಿಂದ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಿಗೆ, ಎತ್ತಿನಹೊಳೆಯಿಂದ ಕೋಲಾರಕ್ಕೆ ನೀರು ಕೊಡುತ್ತೇವೆ. ನೀರು ಎಲ್ಲರಿಗೂ ಬೇಕು. ರೈತರು ತಾಳ್ಮೆಯಿಂದ ಇರಬೇಕು. ನಾಲೆ ಒಡೆಯುವುದು, ಅಕ್ರಮವಾಗಿ ಪಂಪ್ ಅಳವಡಿಸಿ ನೀರೆತ್ತುವುದನ್ನು ಮಾಡಬಾರದು. ಪೊಲೀಸ್ ಕ್ರಮಕ್ಕೆ ನಾವು ಮುಂದಾಗಲು ಅವಕಾಶ ಕೊಡಬಾರದು’ ಎಂದು ಎಚ್ಚರಿಸಿದರು.
ವಿಶ್ವೇಶ್ವರಯ್ಯ ಜಲನಿಗಮದ ಎಂ.ಡಿ ರವೀಂದ್ರ, ಮುಖ್ಯ ಎಂಜಿನಿಯರ್ ರವಿಶಂಕರ್, ಜಿಲ್ಲಾಧಿಕಾರಿ ರಮ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್, ಮುಖಂಡರಾದ ಸುಹಾಸ್ ಸುಧಾಕರ್, ಬೇತೂರು ಪಾಳ್ಯ ರಾಜು, ಕಂದಿಕೆರೆ ಸುರೇಶ್ ಬಾಬು, ಟಿ.ಕೃಷ್ಣಮೂರ್ತಿ, ಟಿ.ಚಂದ್ರಶೇಖರ್, ಈರಲಿಂಗೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ಮಾಳಿಗೆ ಮಂಜುನಾಥ್, ವಿಠಲ ಪಾಂಡುರಂಗ, ಕಲ್ಲಹಟ್ಟಿ ಹರೀಶ್, ಎಂ.ಡಿ. ಕೋಟೆ ಚಂದ್ರಣ್ಣ, ಗಿಡ್ಡೋಬನಹಳ್ಳಿ ಅಶೋಕ್, ಮುಕುಂದ ಹಾಜರಿದ್ದರು.
Quote - ವಿರೋಧದ ನಡುವೆಯೂ ಭದ್ರಾದಿಂದ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ 3 ಟಿಎಂಸಿ ಅಡಿ ನೀರನ್ನು ಪ್ರಾಯೋಗಿಕವಾಗಿ ಹರಿಸಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ನಮಗೆ 6 ಟಿಎಂಸಿ ಅಡಿ ಹರಿಸುವ ಉದ್ದೇಶವಿತ್ತು ಚಲುವರಾಯಸ್ವಾಮಿ ಜಲಸಂಪನ್ಮೂಲ ಸಚಿವ
Cut-off box - ‘13 ದಿನದಲ್ಲಿ ಹರಿದಿದ್ದು 0.6 ಟಿಎಂಸಿ ಅಡಿ ನೀರು’ ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಭದ್ರಾ ನೀರನ್ನು ಹರಿಸಲು ಆರಂಭಿಸಿ 13 ದಿನಗಳಾಗಿದ್ದು ಕೇವಲ 0.6 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಇನ್ನೂ 2.4 ಟಿಎಂಸಿ ಅಡಿ ನೀರು ಬರಬೇಕಿದೆ. ರೈತರು ಆತಂಕ ಪಡುವುದು ಬೇಡ. ಹಿರಿಯೂರು ತಾಲ್ಲೂಕಿನ 32 ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು. ‘ಭದ್ರಾ ಮೇಲ್ದಂಡೆ ಕಾಮಗಾರಿಗೆ ಇನ್ನೂ ₹4600 ಕೋಟಿ ಹಣ ಬೇಕಿದೆ. ₹21500 ಕೋಟಿ ಅಂದಾಜು ವೆಚ್ಚದ ಕಾಮಗಾರಿಯಲ್ಲಿ ₹12500 ಕೋಟಿ ಮೊತ್ತದ ಕಾಮಗಾರಿ ಆಗಿದೆ. ಬರಗಾಲದಲ್ಲಿ ಭದ್ರೆಯ ನೀರು ಹರಿದು ಬರುತ್ತದೆ ಎಂದು ಯಾರೂ ಕನಸು ಕಂಡಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರ ಇಚ್ಛಾಶಕ್ತಿಯ ಕಾರಣಕ್ಕೆ ಬಯಲುಸೀಮೆಗೆ ಭದ್ರೆ ಹರಿದು ಬಂದಿದ್ದಾಳೆ. ರೈತರು ತಾಳ್ಮೆ ಕಳೆದುಕೊಂಡು ನಾಲೆ ಒಡೆಯುವಂತಹ ಕೆಲಸಕ್ಕೆ ಮುಂದಾಗಿರುವುದು ಬೇಸರ ತಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Cut-off box - ‘ಹಿರಿಯೂರಿಗೆ ₹500 ಕೋಟಿ’ ‘ಹಿರಿಯೂರು ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ₹500 ಕೋಟಿ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಸೆ.24 ರಂದು ಗಂಗಾಪೂಜೆ ಸಲ್ಲಿಸಲು ಜಿಲ್ಲೆಗೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ ಅಂತ್ಯದ ಒಳಗೆ ಹಿರಿಯೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ಏರ್ಪಡಿಸಿ ದಿವಂಗತ ಸುಧಾಕರ್ ಮಾಡಲು ಉದ್ದೇಶಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವ ಬಗ್ಗೆ ಘೋಷಣೆ ಮಾಡಲಿದ್ದಾರೆ’ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.