ಹಳ್ಳಿ ಅಭ್ಯುದಯಕ್ಕೆ ಸಮಾನತೆಯೇ ಮಾರ್ಗ: ರವೀಂದ್ರ ಭಟ್ಟ ಅಭಿಪ್ರಾಯ

ಹಳ್ಳಿ ಅಭ್ಯುದಯಕ್ಕೆ ಸಮಾನತೆಯೇ ಮಾರ್ಗ: ರವೀಂದ್ರ ಭಟ್ಟ ಅಭಿಪ್ರಾಯ

ಹಳ್ಳಿ ಅಭ್ಯುದಯಕ್ಕೆ ಸಮಾನತೆಯೇ ಮಾರ್ಗ: ರವೀಂದ್ರ ಭಟ್ಟ ಅಭಿಪ್ರಾಯ

ಧಾರವಾಡ: ‘ಎಲ್ಲರೂ ಸಮಾನರು ಎಂಬ ರೀತಿಯಲ್ಲಿ ಬದುಕುವುದು ಬಹಳ ಮುಖ್ಯ. ಸಮಾನತೆಯಿಂದ ಹಳ್ಳಿಗಳ ಅಭ್ಯುದಯ ಸಾಧ್ಯ’ ಎಂದು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.

ಬಹುರೂಪಿ ಪ್ರಕಾಶನ ವತಿಯಿಂದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಭಾನುವಾರ ನಡೆದ ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕೃತಿ (ಮೂರನೇ ಮುದ್ರಣ) ಬಿಡುಗಡೆ, ಕೃತಿಕಾರ ಡಾ.ಪ್ರಕಾಶ್‌ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ನಾವೆಲ್ಲರೂ ಮೂಲತಃ ಹಳ್ಳಿಯವರು. ನಮ್ಮ ಆಲೋಚನೆಗಳಲ್ಲ ನಗರ ಪ್ರಭಾವಿತವಾದವು. ಏಕೆಂದರೆ ಶಾಲಾ– ಕಾಲೇಜುಗಳು ಹಳ್ಳಿಯ ಜೀವನ ಕಲಿಸಲ್ಲ, ಅವು ಪೇಟೆ ಜೀವನ ಕಲಿಸುತ್ತವೆ. ಎಲ್ಲ ನಾಗರಿಕತೆಗಳಲ್ಲಿರುವುದು ನಗರದ ಕತೆಗಳೇ ಹೊರತು ಹಳ್ಳಿಗಳ ಕತೆಗಳಲ್ಲ’ ಎಂದರು.

‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕೃತಿಯು ಹಳ್ಳಿಗಳ ತಿಳಿವಳಿಕೆ ಹೇಳುತ್ತದೆ. ಹಳ್ಳಿಯಲ್ಲೇ ಬದುಕುವಂಥ ಸವಲತ್ತುಗಳು ಹಳ್ಳಿಯಲ್ಲೇ ಸಿಕ್ಕಿದ್ದರೆ ಬಹಳಷ್ಟು ಮಂದಿ ಹಳ್ಳಿಯಲ್ಲೇ ಉಳಿಯುತ್ತಿದ್ದರು. ಅದಕ್ಕೆ ನಿದರ್ಶನಗಳು ಈ ಕೃತಿಯಲ್ಲಿ ಇವೆ’ ಎಂದು ಹೇಳಿದರು.

‘ಭೂಮಿಯಲ್ಲಿ ಹಾಕಿದ ಒಂದು ಬೀಜ ಸಾವಿರ ಫಲಗಳನ್ನು ಕೊಡುತ್ತದೆ, ಭೂಮಿ ಮಾಡುವ ದೊಡ್ಡ ಪವಾಡಕ್ಕಿಂತ ಮತ್ತೊಂದು ಪವಾಡ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಲೇಖಕಿ ಶಾರದಾ ಗೋಪಾಲ ಮಾತನಾಡಿ, ‘ಹಳ್ಳಿಯ ಜನರನ್ನು ಅಭಿವೃದ್ಧಿಯ ಚಿಂತಕರಾಗಿ ಕಾಣುವ ಕೃತಿ ಇದು. ಪರಿವರ್ತನೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹಳ್ಳಿಯ ಪ್ರತಿಯೊಬ್ಬರಿಗೂ ಕೆಲಸ ಸಿಗಬೇಕು. ಜೀವನ ಮಟ್ಟ ಸುಧಾರಿಸಬೇಕು’ ಎಂದರು.

ವಾರ್ತಾ ಇಲಾಖೆ ನಿವೃತ್ತ ಉಪನಿರ್ದೇಶಕ ಅಬ್ಬೂರು ಪ್ರಕಾಶ್‌ ಮಾತನಾಡಿ, ‘ಹಳ್ಳಿಗಳ ಚಿತ್ರಣದ ವಸ್ತುನಿಷ್ಠ ಕೃತಿ ಇದು. ತೌಲನಿಕ ಅಧ್ಯಯನಕ್ಕೆ ಆಕರವಾಗುವ ಪುಸ್ತಕ ಇದು’ ಎಂದು ಹೇಳಿದರು.

ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆ ಮಾತನಾಡಿ, ‘ಹಳ್ಳಿಯಲ್ಲಿ ಒಳ್ಳೆಯ ಗಾಳಿ, ನೀರು ಎಲ್ಲವೂ ಇದೆ. ಮನುಷ್ಯರ ನಡೆವಳಿಕೆಗಳಲ್ಲಿ ಬದಲಾವಣೆ ತಂದರೆ ಅಭಿವೃದ್ಧಿ ಸಾಧಿಸಬಹುದು’ ಎಂದರು.

ಕೃತಿಕಾರ ಡಾ.ಪ್ರಕಾಶ್‌ ಭಟ್‌ ಮತ್ತು ಪತ್ನಿ ಸುನಂದಾ ಅವರನ್ನು ಅಭಿನಂದಿಸಲಾಯಿತು. ಹಿಮಾಂಶು ಪ್ರಕಾಶ್‌ ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಿದರು. ಮಳೆಮಲ್ಲೇಶ್‌ ಹೂಗಾರ ಅವರು ತಬಲಾ ಹಾಗೂ ವಿನೋದ ಪಾಟೀಲ್‌ ಅವರು ಹಾರ್ಮೋನಿಯಂ ಸಾಥ್‌ ಸಂಗತ್‌ ನೀಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ