
ದಾವಣಗೆರೆ ರಸ್ತೆಗಳು ಅಧ್ವಾನ: ಜನ ಹೈರಾಣ
ದಾವಣಗೆರೆ: ‘ಜಲಸಿರಿ’ ಯೋಜನೆಯ ಪೈಪ್‌ಲೈನ್ ಅಳವಡಿಸಲು ಅಗೆದ ರಸ್ತೆಗಳ ದುರಸ್ತಿಗೆ ಗುತ್ತಿಗೆ ಪಡೆದ ಕಂಪನಿ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಇದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಅಧ್ವಾನಗೊಂಡಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.
ಜಲಸಿರಿ ಯೋಜನೆಯಡಿ ಪೈಪ್‌ಲೈನ್ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಮುಖ್ಯ ಕೊಳವೆಮಾರ್ಗ (ರಿಂಗ್ ಮೇನ್) ಹಾಗೂ ಬಡಾವಣೆ, ಬೀದಿ, ಮನೆಗಳಿಗೆ ಸಂಪರ್ಕ ಕಲ್ಪಿಸಿದ ಉಪ ಪೈಪ್‌ಲೈನ್‌ಗಳ ಕಾಮಗಾರಿಯೂ ಮುಗಿದಿದೆ. ಆದರೆ, ಇದಕ್ಕೆ ಅಗೆದ ರಸ್ತೆಗಳನ್ನು ಮುಚ್ಚುವುದು ಬಾಕಿ ಇದೆ. ಪೈಪ್‌ಲೈನ್ ಅಳವಡಿಸಿದ ಬಳಿಕ ರಸ್ತೆಗಳನ್ನು ಸುಸ್ಥಿತಿಗೆ ತರಬೇಕೆಂಬ ನಿಯಮ ಬಹುತೇಕ ಭಾಗಗಳಲ್ಲಿ ಪಾಲನೆಯಾಗಿಲ್ಲ.
ಯೋಜನೆಯಡಿ ಜಲಮೂಲಗಳಿಂದ ಶುದ್ಧೀಕರಣ ಘಟಕಕ್ಕೆ 70 ಕಿ.ಮೀ. ಬೃಹತ್ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. 5 ಅಡಿ ವ್ಯಾಸದ ಈ ಪೈಪ್‌ಗಳನ್ನು 10 ಅಡಿ ಆಳದಲ್ಲಿ ಹಾಕಲಾಗಿದೆ. 45 ವಾರ್ಡ್ ವ್ಯಾಪ್ತಿಯ ಬಡಾವಣೆಗಳಿಗೆ ನೀರು ವಿತರಣೆ ಮಾಡಲು 1,340 ಕಿ.ಮೀ. ಉದ್ದದ ಪೈಪ್‌ಲೈನ್ ಅಳವಡಿಸಲಾಗಿದೆ. ಗುತ್ತಿಗೆ ಪಡೆದ ‘ಸುಯೇಜ್ ಪ್ರಾಜೆಕ್ಟರ್ ಪ್ರೈವೇಟ್ ಲಿಮಿಟೆಡ್’ ಕಂಪನಿ ಕಾಮಗಾರಿ ಪೂರ್ಣಗೊಳಿಸಿದೆ. ಆದರೆ, ಬಹುತೇಕ ಭಾಗಗಳಲ್ಲಿ ರಸ್ತೆ ದುರಸ್ತಿ ಮಾಡುವುದನ್ನು ಮರೆತಿದೆ.
ಪಿ.ಬಿ. ರಸ್ತೆಯಿಂದ ಬಂಬೂಬಜಾರ್‌ನತ್ತ ಸಾಗುವ ಮಾರ್ಗದಲ್ಲಿ ಜಲಸಿರಿ ಪೈಪ್‌ಲೈನ್ ಅಳವಡಿಸಿ ಎರಡೂವರೆ ವರ್ಷ ಕಳೆದಿದೆ. ನೀರು ಹರಿಸುವ ಪ್ರಯೋಗ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಮಾಡುವುದಾಗಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಭಾರಿ ವಾಹನಗಳು, ಬಸ್, ಆಟೊಗಳು ಗುಂಡಿ ಬಿದ್ದ ರಸ್ತೆಯಲ್ಲೇ ಸಂಚರಿಸುತ್ತಿವೆ. ಆಟೊ ಗ್ಯಾಸ್ ಸಮೀಪದ ಬಸ್ ತಂಗುದಾಣದಲ್ಲಿ ಪ್ರಯಾಣಿಕರು ಗುಂಡಿಗಳನ್ನು ದಾಟಲು ಹರಸಾಹಸಪಡಬೇಕಿದೆ.
‘40 ಅಡಿ ವಿಸ್ತೀರ್ಣದ ಕಾಂಕ್ರಿಟ್ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದೆ. ಈರುಳ್ಳಿ ಮಾರುಕಟ್ಟೆ, ಎಪಿಎಂಸಿ ಇರುವುದರಿಂದ ನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿವೆ. ದುರಸ್ತಿ ಮಾಡಿಕೊಡುವಂತೆ ಪಾಲಿಕೆಗೆ ಅಲವತ್ತುಕೊಂಡರೂ ಸ್ಪಂದಿಸಿಲ್ಲ. ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೈಯಿಂದ ಹಣ ಖರ್ಚು ಮಾಡಿ ಮಣ್ಣು ಹಾಕಿಸಿದ್ದೇನೆ’ ಎಂದು ಈರುಳ್ಳಿ ಮಾರುಕಟ್ಟೆಯ ವೇಬ್ರಿಜ್ ಉಸ್ತುವಾರಿ ಕೆ.ಧರಣೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
‘ಪೈಪ್‌ಲೈನ್‌ಗಾಗಿ ಅಗೆದು ಮಣ್ಣು ತುಂಬಿದ ರಸ್ತೆ ಕುಸಿದಿದೆ. ಸರಕು ತುಂಬಿದ ಲಾರಿ ಗುಂಡಿಗೆ ಬಿದ್ದರೆ ಟೈರಿಗೆ ಧಕ್ಕೆ ಉಂಟಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸಲು ಆಲೋಚನೆ ಮಾಡುವ ಸ್ಥಿತಿ ಇದೆ. ಈ ಕಾರಣಕ್ಕೆ ಈರುಳ್ಳಿ ಮಾರುಕಟ್ಟೆ ಬದಲಿಗೆ ಬೇರೆ ಬಾಡಿಗೆಗೆ ಒತ್ತು ನೀಡುತ್ತೇನೆ’ ಎಂದು ಲಾರಿ ಚಾಲಕ ಗಜೇಂದ್ರ ಅಳಲು ತೋಡಿಕೊಂಡರು.
ಹಳೇ ಬಡಾವಣೆ ರಸ್ತೆಗಳೆಲ್ಲ ಹಾಳು: ದಾವಣಗೆರೆಯ ಹಳೇ ಭಾಗದ ಬಡಾವಣೆಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಯೋಜನಾಬದ್ಧವಾಗಿ ನಿರ್ಮಾಣವಾಗದ ಈ ಬಡಾವಣೆಗಳಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಸರಿಯಾಗಿ ಮಾಡಿಲ್ಲ. ಇದರಿಂದ ಬಹುತೇಕ ಕಡೆಗಳಲ್ಲಿ ಸಂಚಾರಕ್ಕೆ ತೊಂದರೆ ಆಗಿದೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ.
ಶಿವನಗರ, ಬಾಷಾ ನಗರ, ಮಂಡಕ್ಕಿ ಬಟ್ಟಿ ಬಡಾವಣೆ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಬಿಸ್ಮಿಲ್ಲಾ ಲೇಔಟ್ ಸೇರಿ ಹಲವೆಡೆ ರಸ್ತೆಗಳು ತೀವ್ರವಾಗಿ ಹಾಳಾಗಿವೆ. ಚಿಕ್ಕ ಗಲ್ಲಿಗಳನ್ನು ಅಗೆದು ಪೈಪ್‌ಲೈನ್ ಅಳವಡಿಸಲಾಗಿದೆ. ಆ ಬಳಿಕ ಸರಿಯಾಗಿ ದುರಸ್ತಿ ಮಾಡಿಲ್ಲ. ಅಲ್ಲಲ್ಲಿ ಜಲ್ಲಿಕಲ್ಲು, ಮಣ್ಣು ಹಾಕಿ ಮುಚ್ಚಲಾಗಿದೆ. ಸಣ್ಣ ಮಳೆಗೂ ಇಡೀ ಓಣಿಯಲ್ಲಿ ನೀರು ನಿಲ್ಲುತ್ತಿದೆ. ಈ ಸ್ಥಿತಿ ಬದಲಾಗುವುದು ಯಾವಾಗ ಎಂಬುದು ನಿವಾಸಿಗಳ ಪ್ರಶ್ನೆ.
ಸಹಾಯವಾಣಿಗೆ ನೂರಾರು ದೂರು
ಜಲಸಿರಿ ಯೋಜನೆಯ ಅಹವಾಲು ಆಲಿಸಲು ಸಹಾಯವಾಣಿ ತೆರೆಯಲಾಗಿದೆ. ಇದಕ್ಕೆ ನಿತ್ಯ ನೂರಾರು ದೂರುಗಳು ಬರುತ್ತಿವೆ.
ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 9036544419ಗೆ ಕರೆ ಮಾಡಿದರೆ ಸಿಬ್ಬಂದಿ ಪ್ರತಿಕ್ರಿಯೆ ನೀಡುತ್ತಾರೆ. ಸಮಸ್ಯೆ ಹೇಳಿಕೊಳ್ಳಲು, ಅನುಮಾನ ನಿವಾರಿಸಿಕೊಳ್ಳಲು ಹಾಗೂ ದೂರು ನೀಡಲು ಅವಕಾಶವಿದೆ.
ಹದಡಿ ರಸ್ತೆಯ ಐಟಿಐ ಕಾಲೇಜು ಸಮೀಪದ ಪಾಲಿಕೆ ಕಟ್ಟಡ, ಮಹಾನಗರ ಪಾಲಿಕೆಯ ಕಚೇರಿ ಹಾಗೂ ವಲಯ ಕಚೇರಿ 1ರಲ್ಲಿ ಸಹಾಯವಾಣಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ರಸ್ತೆ ಅಗೆದರೂ ದುರಸ್ತಿ ಮಾಡಿಲ್ಲ, ಮನೆ ಸಮೀಪದ ಗುಂಡಿ ಮುಚ್ಚಿಲ್ಲ, ಬೀದಿಗೆ ನೀರು ಬಿಟ್ಟಿದ್ದರೂ ಮನೆಯ ನಳದಲ್ಲಿ ಬರುತ್ತಿಲ್ಲ. ನೀರಿನ ಬಣ್ಣ ಬದಲಾಗಿದೆ, ನೀರಿನ ಶುಲ್ಕ ವಿಪರೀತ ಹೆಚ್ಚಾಗಿದೆ. ಹೀಗೆ ಹಲವು ದೂರುಗಳು ಸಹಾಯವಾಣಿಗೆ ಬರುತ್ತಿವೆ. ರಸ್ತೆ ದುರಸ್ತಿಗೆ ಸಂಬಂಧಿಸಿದ ದೂರುಗಳಿಗೆ ಪರಿಹಾರ ಸಿಕ್ಕಿದ್ದು ವಿರಳ ಎಂಬುದು ಸಾರ್ವಜನಿಕರ ಆಕ್ಷೇಪ.
ಪೊಲೀಸರ ಸೂಚನೆಯೂ ಉಪೇಕ್ಷೆ
ಜಲಸಿರಿ ಕಾಮಗಾರಿಯ ಅಧ್ವಾನದಿಂದ ಉಂಟಾಗುತ್ತಿದ್ದ ಅಪಘಾತಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೊಲೀಸ್ ಇಲಾಖೆ, ರಸ್ತೆ ಅಗೆಯುವ ಮುನ್ನ ಮಾಹಿತಿ ನೀಡುವಂತೆ ಸೂಚನೆ ನೀಡಿತ್ತು. ಗುತ್ತಿಗೆ ಕಂಪನಿ, ಮಹಾನಗರ ಪಾಲಿಕೆ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಸಾರ್ವಜನಿಕರಿಗೆ ಮುನ್ಸೂಚನೆ ನೀಡದೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದು ಇನ್ನೂ ತಪ್ಪಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಉಮಾ ಪ್ರಶಾಂತ್ ಅವರು ಜಿಲ್ಲಾ ರಸ್ತೆ ಸುರಕ್ಷತಾ ಸಭೆಯಲ್ಲಿ ಹಲವು ಬಾರಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿದರೆ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲು ಅನುಕೂಲವಾಗಲಿದೆ ಎಂಬುದಾಗಿ ಮನವಿ ಮಾಡಿಕೊಂಡಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಮಾಡುವಂತೆಯೂ ತಾಕೀತು ಮಾಡಿದ್ದರು. ಈ ಸೂಚನೆಗಳು ಪಾಲನೆ ಆಗಿದ್ದು ವಿರಳ.
ಹದಗೆಟ್ಟ ರಸ್ತೆ ದುರಸ್ತಿಪಡಿಸುವಂತೆ ಹಲವು ಬಾರಿ ಪಾಲಿಕೆಗೆ ದೂರು ನೀಡಿದೆ. ಯಾರೊಬ್ಬರೂ ಸರಿಯಾಗಿ ಸ್ಪಂದಿಸಲಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಲಾರಿಗಳಿಗೆ ತೊಂದರೆ ಆಗುತ್ತಿದೆ ಕೆ.ಧರಣೇಂದ್ರಪ್ಪ, ಈರುಳ್ಳಿ ಮಾರುಕಟ್ಟೆ