
ಅಲ್ಪಸಂಖ್ಯಾತ ಮತದಾರರ ಕೈಬಿಡಲು ಸಂಚು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಎಸ್ಐಆರ್ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲು ಸಂಚು ನಡೆಯುತ್ತಿದೆ. ಯುವ ಸಮುದಾಯ ಜಾಗೃತರಾಗಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಕರ್ನಾಟಕ ಪರ್ವ–2026’ ಎಂಬ ಅಲ್ಪಸಂಖ್ಯಾತ ಸಮುದಾಯದ ಕುಶಲಕರ್ಮಿಗಳು ತಯಾರಿಸಿರುವ ವಿಶಿಷ್ಟ ಕರಕುಶಲ ಮತ್ತು ಸಾಂಪ್ರದಾಯಿಕ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಸಂಚಿನ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ನೀವು ನಿಮ್ಮ ಮತದಾನದ ಹಕ್ಕು ರಕ್ಷಿಸಿಕೊಳ್ಳಿ. ಮತದಾನದ ಹಕ್ಕು ಬದುಕಿನ ಹಕ್ಕಾಗಿದೆ‘ ಎಂದು ತಿಳಿಸಿದರು.
‘ಅಲ್ಪಸಂಖ್ಯಾತರ ಸ್ವಾವಲಂಬಿಕರಣವು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಭಾಗ. ನಾನು ಅಧಿಕಾರ ವಹಿಸಿಕೊಂಡು 115 ದಿನಗಳಾಗಿವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಲಾಗಿದ್ದು, ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದರು.
‘ಈ ಬಾರಿಯ ಮೈಸೂರು ದಸರಾ ಹಬ್ಬಕ್ಕೆ ಬೈಲುಕುಪ್ಪೆಯ ಬೌದ್ಧಧರ್ಮದವರಿಗೆ ಹಾಗೂ ರಾಜ್ಯದ ಎಲ್ಲಾ ಸಮುದಾಯದವರಿಗೆ ಆಹ್ವಾನ ನೀಡಿದ್ದೇನೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರಿಗೆ ಅದರಲ್ಲೂ ಯುವಕರ ವಿದ್ಯಾಭ್ಯಾಸಕ್ಕೆ ಹಾಗೂ ಕೌಶಲಕ್ಕೆ ಉತ್ತೇಜನ ನೀಡಲು ಅನೇಕ ಕಾರ್ಯಕ್ರಮ ರೂಪಿಸಿದೆ. ನೀವು ಬೇರೆ ಕಡೆ ಉದ್ಯೋಗ ಹುಡುಕುವುದರ ಜೊತೆಗೆ ನೀವೇ ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸುವ ಉದ್ಯಮಿಗಳಾಗುವಂಥ ಕಾರ್ಯಕ್ರಮ ರೂಪಿಸಿದ್ದೇವೆ. ಮಹಿಳೆಯರು ಕೂಡ ಉದ್ಯಮಿಗಳಾಗಿ ಉದ್ಯೋಗದಾತರಾಗಬೇಕು’ ಎಂದರು.
ಕೇರಳಂನ ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ಸಚಿವ ರಿಜ್ವಾನ್ ಅರ್ಷದ್, ರಾಜ್ಯಸಭಾ ಸದಸ್ಯರಾದ ಮನ್ಸೂರ್ ಅಲಿ ಖಾನ್, ಸೈಯದ್ ನಾಸೀರ್ ಹುಸೇನ್, ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್, ಶಾಸಕರಾದ ಖನೀಜ್ ಫಾತಿಮಾ, ರಹೀಂ ಖಾನ್, ಪಠಾಣ್ ಯಾಸೀನ್ ಅಹಮದ್ ಖಾನ್, ನಟಿ ರಮ್ಯಾ ಉಪಸ್ಥಿತರಿದ್ದರು.
‘ಸಾಂಸ್ಕೃತಿಕ ಅನಾವರಣಕ್ಕೆ ಕರ್ನಾಟಕ ಪರ್ವ’
‘ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಪಾಕ ವೈವಿಧ್ಯ ಹಾಗೂ ಸೃಜನಶೀಲತೆಯ ಅನಾವರಣಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಕಲಾವಿದರು, ಕುಶಲಕರ್ಮಿಗಳು, ಉದ್ಯಮಿಗಳು, ಆಹಾರ ತಯಾರಕರು ಮತ್ತು ಸಾಂಸ್ಕೃತಿಕ ತಂಡಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಾಗಿದೆ. ವಿವಿಧ ಜಿಲ್ಲೆಗಳ ವಿಶಿಷ್ಟ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು, ಸ್ಥಳೀಯ ಉತ್ಪನ್ನಗಳು, ಕಲೆ, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸುವ ಮೂಲಕ ರಾಜ್ಯದ ವೈವಿಧ್ಯಮಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸಲಾಗುತ್ತಿದೆ. ಒಟ್ಟು 200 ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.