
ವೀರಶೈವ ಲಿಂಗಾಯತ ಸಮ್ಮೇಳನ; ಭಿನ್ನಾಭಿಪ್ರಾಯ ಬಿಡಿ, ಒಗ್ಗಟ್ಟಾಗಿ: ವಿಜಯೇಂದ್ರ
ಬೆಂಗಳೂರು: ‘ಪ್ರಗತಿಪರತೆ ಮತ್ತು ವೈಚಾರಿಕತೆಯ ಹೆಸರಿನಲ್ಲಿ ಧರ್ಮದ ಮೂಲ ಆಶಯಗಳನ್ನು ವಿಕೃತಗೊಳಿಸುವ ಹಾಗೂ ವೀರಶೈವ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಒಡೆದುಹಾಕುವ ಷಡ್ಯಂತ್ರ ನಡೆಯುತ್ತಿದೆ. ಇಂತಹ ಪ್ರಹಾರ ಒಳಗಿನವರಿಂದಲೇ ನಡೆಯುತ್ತಿರುವುದು ವಿಪರ್ಯಾಸ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿರುವ ‘ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
‘ವೀರಶೈವ ಲಿಂಗಾಯತ ಧರ್ಮ, ಪರಂಪರೆ ಮತ್ತು ಮಠಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯವಿದೆ. ಸಮಾಜದ ಒಳಪಂಗಡಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು’ ಎಂದು ಕರೆ ನೀಡಿದರು.
ರಾಜ್ಯದ ವಿವಿಧ ಭಾಗಗಳಲ್ಲಿರುವ ಸಾವಿರಾರು ಮಠಗಳು ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ರಾಜಕಾರಣ, ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ, ಸಮಾಜಕ್ಕೆ ನ್ಯಾಯದ ಮಾರ್ಗ ತೋರಿಸುವ ಮಠಗಳ ಶಕ್ತಿ ಉಳಿಯಬೇಕು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮಾತನಾಡಿ, ‘ವೀರಶೈವ ಲಿಂಗಾಯತರು ಒಂದೇ. ಬಸವೇಶ್ವರರ ವಚನಗಳನ್ನು ಅಳವಡಿಸಿಕೊಳ್ಳುತ್ತೇವೆ, ಹಾಗೆಯೇ ರೇಣುಕಾಚಾರ್ಯರನ್ನೂ ಪೂಜಿಸುತ್ತೇವೆ. ಎಲ್ಲರೂ ಇಷ್ಟಲಿಂಗ ಪೂಜೆಯನ್ನೇ ಮಾಡುವಾಗ ಭಿನ್ನ ಹೇಗಾಗುತ್ತದೆ? ರಾಜಕೀಯ ಹಿತಾಸಕ್ತಿಗಾಗಿ ಸಮಾಜ ಒಡೆಯುವುದನ್ನು ಒಪ್ಪುವುದಿಲ್ಲ. ಹಿರಿಯರು ನಡೆದ ಪರಂಪರೆಯನ್ನು ಅನುಸರಿಸಿದರೆ ಸಾಕು, ಬೇರೆ ಇತಿಹಾಸ ಬೇಕಾಗಿಲ್ಲ’ ಎಂದು ಹೇಳಿದರು
ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಿಂದಗಿಯ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಎಡೆಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಮಳಲಿಯ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.
ಪೂರ್ವಾಶ್ರಮ ಮರೆತು ಮಠ ನಡೆಸಿ: ಶಂಕರ ಬಿದರಿ
‘ಸ್ವಾಮೀಜಿಗಳಿಗೆ ಬಹಳ ಗೌರವ ಇದೆ. ಒಂದು ದೊಡ್ಡ ಮಠದ ವಿಚಾರದಲ್ಲಿ ಬಹಳ ಬೇಸರವಾಗಿದೆ. ಪೀಠಾಧ್ಯಕ್ಷರಾದವರು ಪೂರ್ವಾಶ್ರಮ ಮರೆತು ಮಠ ನಡೆಸಬೇಕು. ಕಟ್ಟುಪಾಡುಗಳನ್ನು ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಹೋಗಿ, ಬೇರೆ ಅರ್ಹರಿಗೆ ಅವಕಾಶ ನೀಡಿ’ ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
‘ಅಣ್ಣ ಶಿವಾಚಾರ್ಯ ಮಠದಲ್ಲಿದ್ದರೆ, ತಮ್ಮ ವಿರಕ್ತ ಮಠದಲ್ಲಿರುತ್ತಾನೆ ಎಂದ ಮೇಲೆ ಭೇದ ಏಕೆ? ಸಮಾಜಕ್ಕೆ ಅಂಟಿಕೊಂಡಿರುವ ರೋಗವನ್ನು ದೂರ ಮಾಡಬೇಕು. ಬಸವಣ್ಣ ಹಾಗೂ ರೇಣುಕಾಚಾರ್ಯರಿಗೆ ಸಮಾನ ಗೌರವ ನೀಡಬೇಕು. ವೀರಶೈವ ಆಚಾರ ಹಾಗೂ ಬಸವಣ್ಣನ ವಿಚಾರ ಸೇರಿದರೆ ಶಕ್ತಿ ಸಿಗುತ್ತದೆ. ಆದರೆ, ಇಂದು ಚಿಲ್ಲರೆ ರಾಜಕೀಯದಿಂದ ಧರ್ಮ ಒಡೆಯುವ ಕೆಲಸ ಆಗುತ್ತಿದೆ. ಸಮಾಜದಿಂದ ಕಂಬಾರ, ಕುಂಬಾರ, ಹೆಳವರು ದೂರವಾಗುತ್ತಿದ್ದಾರೆ’ ಎಂದು ಹೇಳಿದರು.