
ಕೃಷಿ ವಿಜ್ಞಾನಿಗಳೊಂದಿಗೆ ರೈತರು ಸಂಪರ್ಕದಲ್ಲಿರಿ: ಕುಲಪತಿ ಎಂ.ವಿ. ಧನಂಜಯ ಸಲಹೆ
ಹಿರಿಯೂರು: ‘ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದಲ್ಲಿ ಕೃಷಿ ವಿಜ್ಞಾನಿಗಳು ಹೊಸ ಹೊಸ ತಳಿಗಳ ಆವಿಷ್ಕಾರ, ನಿರ್ವಹಣೆ ಕುರಿತು ಸಂಶೋಧನೆ ನಡೆಸುವ ಕಾರಣಕ್ಕೆ ರೈತರು ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿರಬೇಕು’ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಎಂ.ವಿ. ಧನಂಜಯ ಸಲಹೆ ನೀಡಿದರು.
ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ತಳಿಗಳು ಮತ್ತು ದೇಸಿ ತಳಿಗಳ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
‘ಸಹಾಯಕ ಪ್ರಾಧ್ಯಾಪಕಿ ನಂದಿನಿ ಅವರು ವಿವಿಧ ಸಿರಿಧಾನ್ಯಗಳ ಮೇಲೆ ಸಂಶೋಧನೆ ಕೈಗೊಂಡಿದ್ದು, ಇದರಲ್ಲಿ 53 ನವಣೆ, 16 ಸಾಮೆ ದೇಸಿ ತಳಿಗಳನ್ನು ಸಂಗ್ರಹಿಸಿ ಅವುಗಳ ಬೆಳವಣಿಗೆ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆ ಹಾಗೂ ತೀವ್ರ ಬರದ ಇದ್ದರೂ ಸಂಶೋಧನಾ ತಾಕುಗಳಲ್ಲಿ ದೇಸೀ ತಳಿಗಳಾದ ನವಣೆ, ಸಾಮೆ, ಬರಗು, ಹಾರಕ, ಊದಲು, ರಾಗಿ ಒಳಗೊಂಡಂತೆ ವಿವಿಧ ಸಿರಿಧಾನ್ಯಗಳು ಉತ್ತಮ ಬಂದಿರುವುದು ಬೆಳೆ ಗಮನಾರ್ಹ. ಇಂತಹ ತಳಿಗಳನ್ನು ಕ್ಷೇತ್ರೋತ್ಸವದ ಮೂಲಕ ರೈತರಿಗೆ ಪರಿಚಯಿಸಲು ಹೊರಟಿರುವುದು ಶ್ಲಾಘನೀಯ ’ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಸಿರಿಧಾನ್ಯ ಬೆಳೆಯ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಒಳಗೊಂಡ ಉತ್ಕೃಷ್ಟ ಕೇಂದ್ರವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ವಿಶ್ವವಿದ್ಯಾಲಯದ ವಿಜ್ಞಾನಿಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ನಿಯೋಜಿಸಿ ತಾಂತ್ರಿಕ ಮಾಹಿತಿ ಒದಗಿಸಲಾಗುವುದು’ ಎಂದು ವಿವಿಯ ಸಂಶೋಧನಾ ನಿರ್ದೇಶಕ ಡಾ.ಎಸ್.ಶ್ರೀಧರ್ ಭರವಸೆ ನೀಡಿದರು.
‘ದೇಸಿ ತಳಿಗಳ ಸಂರಕ್ಷಣೆ ಮಾಡುವ ಮೂಲಕ ರೈತರು ಸ್ವತಃ ಸಿರಿಧಾನ್ಯಗಳನ್ನು ಬೆಳೆದು, ಬಳಕೆ ಮಾಡಿ ಮುಂದಿನ ಪೀಳಿಗೆಗೆ ಉಳಿಸಬೇಕು’ ಎಂದು ಕೃಷಿ ಇಲಾಖೆ ನಿವೃತ್ತ ಪ್ರಾಧ್ಯಾಪಕ ಮೋಹನ್ ರಾವ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್, ಪ್ರಾಧ್ಯಾಪಕ ಎಸ್.ರಮೇಶ್, ಉಪ ಕೃಷಿ ನಿರ್ದೇಶಕ ಉಮೇಶ್ ಮಾತನಾಡಿದರು. ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಡಿ.ತಿಪ್ಪೇಶ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಶಿವಲೀಲಾ ಎಸ್. ಕುಕನೂರ್ ನಿರೂಪಿಸಿದರು. ಪ್ರಾಧ್ಯಾಪಕ ಎಸ್. ಓಂಕಾರಪ್ಪ ವಂದಿಸಿದರು.