
ಮೂಲ ಸೌಲಭ್ಯಕ್ಕೆ ಒತ್ತಾಯ: ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನರ ಪಾದಯಾತ್ರೆ
ಜಮಖಂಡಿ: ತಾಲ್ಲೂಕಿನ ಕೊಣ್ಣೂರ ಗ್ರಾಮದ ವಿವಿಧ ಬೇಡಿಕೆಗಳಿಗೆ ಹಲವಾರು ಹೋರಾಟ ಮಾಡಿದರೂ ಜಿಲ್ಲಾಡಳಿತ ಸ್ಪಂದಿಸದ ಕಾರಣ ಸಿ.ಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಲು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರುವರೆಗೆ ಪಾದಯತ್ರೆಗೆ ಗ್ರಾಮದ ಯುವಕರು, ಮಹಿಳೆಯರು ಚಾಲನೆ ನೀಡಿದರು.
ಮುಖಂಡ ಗದಿಗೆಪ್ಪ ಧಾರವಾಡ ಮಾತನಾಡಿ, ಕೊಣ್ಣೂರ ಗ್ರಾಮದ ಮಡ್ಡಿ ಪ್ಲಾಟ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಗ್ರಹ ಸೇರಿದಂತೆ ಹಲವಾರು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ಗ್ರಾಮದ ರಸ್ತೆ ಅಭಿವೃದ್ಧಿ ಇಲ್ಲದ ಕಾರಣ ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ, ಪದವಿಪೂರ್ವ ಕಾಲೇಜು ಆರಂಭ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪಾದಯತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
67 ಜನರು 11 ದಿನಗಳ ಕಾಲ ಪಾದಯಾತ್ರೆ ಮೂಲಕ ಅ.2 ರಂದು ಬೆಂಗಳೂರು ತಲುಪುತ್ತೇವೆ. ಅಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬೇಡಿಕೆ ಇರುವವರೆಗೆ ಧರಣಿ ನಡೆಸಲಾಗುವುದು ಎಂದರು.
ವೀರಣ್ಣ ಹಳೆಗೌಡರ, ಭೀರಪ್ಪ ಹೊರಟ್ಟಿ, ಸಿದ್ದಾರೂಡ ಪತ್ತಾರ, ಹಣಮಂತ ಬಸಣ್ಣವರ, ಮಲ್ಲವ್ವ ತಳವಾರ, ಕಮಲವ್ವ ತಾಯವ್ವಗೋಳ, ಗೌರವ್ವ ಮೇಟಿನ್, ತಂಗೆವ್ವ ಜೋತ್ಯಪ್ಪನವರ ಸೇರಿದಂತೆ ಇತರರು ಇದ್ದರು.
ಗ್ರಾಮದ ಸಮಸ್ಯೆ ಪರಿಹರಿಸಲು ಕ್ರಮ
ಕೊಣ್ಣೂರು ಗ್ರಾಮದ ಮೂಲಸೌಕರ್ಯ ಹಾಗೂ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಜಂಟಿ ಸಭೆ ನಡೆಸಿದರು. ಪ್ರಮುಖ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿ, ಅಗತ್ಯ ನಿರ್ದೇಶನಗಳನ್ನು ನೀಡಿದರು.
ಕೊಣ್ಣೂರು ಗ್ರಾಮದ ಪ್ರಮುಖ ಆರು ರಸ್ತೆಗಳನ್ನು ಡಾಂಬರೀಕರಣಗೊಳಿಸಲು ಅನುದಾನ ಕೋರಿ ಸರ್ಕಾರಕ್ಕೆ ಈಗಾಗಲೇ ಅಂದಾಜು ಪತ್ರಿಕೆಯೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗಾಗಿ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುಲಾಗುವುದು. ಮಂಜೂರಾಗಿದ್ದ ಪಿ.ಯು. ಕಾಲೇಜನ್ನು ಬೇರೆಡೆಗೆ ವರ್ಗಾಯಿಸಿರುವ ಕುರಿತು ಚರ್ಚಿಸಲಾಯಿತು. ಈ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಹಂತದಲ್ಲಿದ್ದು, ಅಗತ್ಯ ಸೂಕ್ತ ಕ್ರಮಕ್ಕಾಗಿ ಪರಿಶೀಲನೆ ಮಾಡುವುದು, ಮಡ್ಡಿ ಪ್ಲಾಟ್‌ನಲ್ಲಿ ವಾಸಿಸುತ್ತಿರುವವರಿಗೆ ಶಾಶ್ವತ ಹಕ್ಕುಪತ್ರ ನೀಡಲು ಗ್ರಾಮಸಭೆ ನಡೆಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಲು ಮತ್ತೊಮ್ಮೆ ಸ್ಥಾನಿಕ ಪರಿಶೀಲನೆ ಕೈಗೊಳ್ಳಲಾಗುವುದು. ಮುಂಬರುವ ಗ್ರಾಮಸಭೆಗಳಲ್ಲಿ ಅರ್ಹ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ತಯಾರಿಸಿ, ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲು ಸಭೆ ನಿರ್ಧರಿಸಿತು.
ಗ್ರಾಮದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಎಲ್ಲಾ ವಿಷಯಗಳಿಗೆ ಶೀಘ್ರ ಸ್ಪಂದನೆ ನೀಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಬದ್ಧವಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಉಪಕಾರ್ಯದರ್ಶಿ ಎನ್ ವಾಯ್ ಬಸರಿಗಿಡದ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ ಇತರರು ಇದ್ದರು.