
ಸಂಜೀವರಾಯನಕೋಟೆ ಹಂತ–2ಕ್ಕೆ ಟಿಒಆರ್
ಬಳ್ಳಾರಿ: ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಬಳಿ 199.26 ಹೆಕ್ಟೇರ್ (492.39 ಎಕರೆ) ವಿಸ್ತೀರ್ಣದಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಲು ಹೊರಟಿರುವ ‘ಸಂಜೀವರಾಯನಕೋಟೆ ಕೈಗಾರಿಕಾ ಪ್ರದೇಶ - ಹಂತ 2’ಗೆ ಕೇಂದ್ರ ಪರಿಸರ ಸಚಿವಾಲಯದ ತಜ್ಞರ ಸಮಿತಿ (ಇಎಸಿ) ‘ಟರ್ಮ್ಸ್ ಆಫ್ ರೆಫರೆನ್ಸ್ (ಟಿಒಆರ್)’ ಮಂಜೂರು ಮಾಡಿದೆ.
ಟಿಒಆರ್ ಎಂದರೆ, ಪರಿಸರ ಪ್ರಭಾವ ಅಧ್ಯಯನಕ್ಕೆ ಅನುಮೋದನೆ ನೀಡುವುದು. ಇದು ಯೋಜನೆಯೊಂದಕ್ಕೆ ಕೇಂದ್ರ ಪರಿಸರ ಇಲಾಖೆ ನೀಡುವ ಆರಂಭಿಕ ಅನುಮೋದನೆಯೂ ಆಗಿರುತ್ತದೆ.
‘ಪರಿಸರ ಪ್ರಭಾವ ಅಧಿಸೂಚನೆ –2006’ರ ಸಾಮಾನ್ಯ ನಿಯಮಗಳ ಅಡಿಯಲ್ಲಿ 'ಎ' ವರ್ಗಕ್ಕೆ ಸೇರಿರುವ ಈ ಯೋಜನೆ, ಕರ್ನಾಟಕ-ಆಂಧ್ರಪ್ರದೇಶದ ಅಂತರರಾಜ್ಯ ಗಡಿಯಿಂದ ಕೇವಲ 3.3 ಕಿ.ಮೀ ಅಂತರದಲ್ಲಿದೆ. ಯೋಜನೆಯು ₹300 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಯೋಜನೆಯ ಭೂ ಬಳಕೆ: ಒಟ್ಟು 492.39 ಎಕರೆ ಯೋಜನಾ ಪ್ರದೇಶದಲ್ಲಿ, ಅಭಿವೃದ್ಧಿಪಡಿಸಬಹುದಾದ 478.14 ಎಕರೆ ಜಾಗದಲ್ಲಿ ಕೈಗಾರಿಕೆಗಳು ಮತ್ತು ಲಾಜಿಸ್ಟಿಕ್ಸ್ ಉದ್ದೇಶಕ್ಕೆ 281.69 ಎಕರೆ, ರಸ್ತೆಗೆ 80.98 ಎಕರೆ, ಹಸಿರು ವಲಯ ಮತ್ತು ಉದ್ಯಾನಕ್ಕೆ 10.13 ಎಕರೆ, ಹಸಿರು ಬಫರ್ 38.35 ಎಕರೆ, ವಾಹನ ಪಾರ್ಕಿಂಗ್‌ಗೆ 24.59 ಎಕರೆ, ವಾಣಿಜ್ಯ ಸಂಕೀರ್ಣಕ್ಕೆ 18.75 ಎಕರೆ, ಸಾರ್ವಜನಿಕ ಸೌಲಭ್ಯಕ್ಕೆ 18.45 ಎಕರೆ ಮೀಸಲಿಡಲಾಗಿದೆ. ಯೋಜನೆ ಯೊಳಗಿರುವ 14.21 ಎಕರೆಯಲ್ಲಿ ಸ್ವಾಭಾವಿಕ ಹಳ್ಳದ ಪ್ರದೇಶವಿದ್ದು, ಅಭಿವೃದ್ಧಿಯಿಂದ ಹೊರಗಿಡಲಾಗಿದೆ.
ಉದ್ದೇಶಿತ ಕೈಗಾರಿಕೆಗಳು: ಈ ಯೋಜನೆಯು ಕೆಮಿಕಲ್, ಪೆಟ್ರೋ ಕೆಮಿಕಲ್, ಫಾರ್ಮಾಸ್ಯೂಟಿಕಲ್ಸ್, ಬಯೋಟೆಕ್ನಾಲಜಿ, ಮೆಟಲರ್ಜಿಕಲ್ ಮತ್ತು ಲೋಹ ಸಂಸ್ಕರಣೆ, ಪ್ಲಾಸ್ಟಿಕ್/ಟೆಕ್ಸ್ ಟೈಲ್, ಆಹಾರ ಸಂಸ್ಕರಣೆ ಹಾಗೂ ಮರುಬಳಕೆ ಆಧಾರಿತ ಉದ್ಯಮಗಳಿಗೆ ವೇದಿಕೆಯಾಗಲಿದೆ.
ಉದ್ಯೋಗ ಸೃಷ್ಟಿ: ಕೈಗಾರಿಕಾ ಪ್ರದೇಶ ಅಭಿವೃದ್ಧಿ ಸಮಯದಲ್ಲಿ 300 ಕಾರ್ಮಿಕರಿಗೆ ತಾತ್ಕಾಲಿಕ ಕೆಲಸ ದೊರೆಯಲಿದೆ. ಕೈಗಾರಿಕೆಗಳು ಕಾರ್ಯಾಚರಣೆಗೆ ಬಂದಾಗ 14,216 ಜನರಿಗೆ ನೇರ ಉದ್ಯೋಗ ಹಾಗೂ ದಿನಂಪ್ರತಿ 4,400ಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ ಎಂದು ಯೋಜನೆಯ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಕಟ್ಟುನಿಟ್ಟಿನ ಷರತ್ತುಗಳು: ಯೋಜನಾ ಪ್ರದೇಶದ ಮೂಲಕ ಹರಿಯುವ 14.21 ಎಕರೆ ಹಳ್ಳದ ಸ್ವಾಭಾವಿಕ ಹರಿವನ್ನು ಯಾವುದೇ ಕಾರಣಕ್ಕೂ ಮುಚ್ಚುವಂತಿಲ್ಲ ಅಥವಾ ಪಥ ಬದಲಾವಣೆ ಮಾಡುವಂತಿಲ್ಲ. ಹಳ್ಳದ ಇಕ್ಕೆಲಗಳಲ್ಲಿ ಕನಿಷ್ಠ 30 ಮೀಟರ್ ಅಗಲದ ಹಸಿರು ವಲಯ ನಿರ್ಮಿಸಬೇಕು. ಪ್ರದೇಶದ ಒಂದು ವರ್ಷದ ಹವಾಮಾನ ಮತ್ತು ಗಾಳಿಯ ದಿಕ್ಕಿನ ದತ್ತಾಂಶ ಸಂಗ್ರಹಿಸಿ 'ವಿಂಡ್ ರೋಸ್ ಡೈಯಾಗ್ರಾಮ್' ಸಿದ್ಧಪಡಿಸಬೇಕು. ಅಧಿಕ ಮಾಲಿನ್ಯ ಉಂಟುಮಾಡುವ (ಕೆಂಪು ವರ್ಗದ) ಉದ್ಯಮಗಳನ್ನು ಗ್ರಾಮಗಳು ಮತ್ತು ಜಲಮೂಲಗಳಿಂದ ಗರಿಷ್ಠ ದೂರದಲ್ಲಿ, ಗಾಳಿ ಬೀಸುವ ದಿಕ್ಕಿಗೆ ವಿರುದ್ಧವಾಗಿ ಸ್ಥಾಪಿಸಬೇಕು. ಕೈಗಾರಿಕಾ ಪ್ರದೇಶಕ್ಕೆ ನಿತ್ಯ 3,569 ಕೆಎಲ್‌ಡಿ ನೀರು ಅಗತ್ಯವಿದ್ದು, ಶುದ್ಧೀಕರಿಸಿದ ಶೇ. 100ರಷ್ಟು ಕೈಗಾರಿಕಾ ಕಲುಷಿತ ನೀರನ್ನು ಮರುಬಳಕೆ ಮಾಡಲು ಸಿಇಟಿಪಿ (ಸಾಮಾನ್ಯತ್ಯಾಜ್ಯ ಸಂಸ್ಕರಣಾ ಘಟಕ) ಸ್ಥಾಪಿಸಬೇಕು. ಇಡೀ ಕೈಗಾರಿಕಾ ಪ್ರದೇಶದಲ್ಲಿ ಶೇ. 33ರಷ್ಟು ಜಾಗವನ್ನು ಸ್ಥಳೀಯ ಜಾತಿಯ ಸಸಿಗಳನ್ನು ನೆಟ್ಟು ಬಫರ್ ವಲಯವಾಗಿ ಬೆಳೆಸಬೇಕು ಎಂದು ಪರಿಸರ ಇಲಾಖೆಯ ತಜ್ಞರ ಸಮಿತಿ ಷರತ್ತು ವಿಧಿಸಿದೆ.
ಟಿಒಆರ್ ಬಳಿಕ ಮುಂದೇನು?
ಈ ಟಿಒಆರ್ ಅನುಮೋದನೆಯ ಆಧಾರದ ಮೇಲೆ ಕೆಐಎಡಿಬಿಯು ಈಗ ‘ಸಮಗ್ರ ಪರಿಸರ ಪ್ರಭಾವ ಅಧ್ಯಯನ (ಇಐಎ)’ ಮತ್ತು ‘ಪರಿಸರ ನಿರ್ವಹಣಾ ಯೋಜನೆ (ಇಎಂಪಿ)’ ವರದಿಯನ್ನು ಸಿದ್ಧಪಡಿಸಬೇಕಾಗುತ್ತದೆ. ಸಾರ್ವಜನಿಕ ಅಹವಾಲು, ಸಭೆ ಮುಗಿಸಿದ ನಂತರ ಅಂತಿಮ ಪರಿಸರ ಮಂಜೂರಾತಿಗೆ (ಇಸಿ) ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇ.ಸಿ ದೊರೆತ ಬಳಿಕ ಯೋಜನೆ ಕಾರ್ಯಾರಂಭಗೊಳ್ಳಲಿದೆ.