
ನವಲಗುಂದದಲ್ಲಿ ಪ್ರಜಾಸೇವೆ ಆಂದೋಲನಕ್ಕೆ ಆರಂಭದಲ್ಲೇ ವಿಘ್ನಗಳ ಸರಮಾಲೆ
ನವಲಗುಂದ: ಜನರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಘೋಷಣೆಯೊಂದಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವೆ ಆಂದೋಲನವು ನವಲಗುಂದ ತಾಲ್ಲೂಕಿನ ಶಿರೂರದಲ್ಲಿ ಆರಂಭದಲ್ಲಿಯೇ ವಿಘ್ನಗಳ ಸರಮಾಲೆ ಎದುರಿಸಿತು.
ತಾಲ್ಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ 2026 ಕಾರ್ಯಕ್ರಮದಲ್ಲಿ ಹಲವು ಅವ್ಯವಸ್ಥೆಗಳು ಕಂಡುಬಂದವು.
ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಂಜೆ 4 ಗಂಟೆಯಾದರೂ ಕಾರ್ಯಕ್ರಮಕ್ಕೆಚಾಲನೆ ಸಿಗಲಿಲ್ಲ. ದೂರದ ಗ್ರಾಮಗಳಿಂದ ಸಮಸ್ಯೆಗಳನ್ನು ಹೊತ್ತು ಬಂದಿದ್ದ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಮರ್ಪಕ ಆಸನ ವ್ಯವಸ್ಥೆಯೂ ಇರಲಿಲ್ಲ. ಪರಿಣಾಮ ಸಾರ್ವಜನಿಕರು ಗಂಟೆಗಳ ಕಾಲ ನಿಂತುಕೊಂಡೇ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಆಸನಗಳ ವ್ಯವಸ್ಥೆ ಕಡಿಮೆ ಇದ್ದದ್ದರಿಂದ ಕೆಲ ಅಧಿಕಾರಿಗಳು ತಮ್ಮ ವಾಹನದಲ್ಲಿಯೇ ಕುಳಿತು ವಾಪಸ್ಸಾದರು.
ಶಾಸಕರು ಸಂಜೆ 4ಗಂಟೆಗೆ ಆಗಮಿಸಿದರು. ನಂತರ ಚಕ್ಕಡಿ ಮೆರವಣಿಗೆ ನಡೆಯಿತು. 5.30 ರ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಮುಖವಾಗಿ ಜನರ ಸಮಸ್ಯೆಗಳನ್ನು ಆಲಿಸುವ ಉದ್ದೇಶದ ಕಾರ್ಯಕ್ರಮವಾಗಿದ್ದರೂ, ಸಮರ್ಪಕ ಪ್ರಚಾರದ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರು ಭಾಗವಹಿಸಲಿಲ್ಲ. ಜನರಿಗೆ ಮಾಹಿತಿ ತಲುಪಿಸುವಲ್ಲಿ ಇನ್ನಷ್ಟು ಪ್ರಚಾರ ಕೈಗೊಳ್ಳಬೇಕಾಗಿತ್ತು ಎನ್ನುವ ಅಭಿಪ್ರಾಯ ಸಭಿಕರಲ್ಲಿ ವ್ಯಕ್ತವಾಯಿತು.
ಇದರ ನಡುವೆ ದೂರು ನೀಡಲು ಬಂದ ಕೆಲವರಿಗೆ ತಾಂತ್ರಿಕ ತೊಡಕು ಎದುರಾಯಿತು. ಸರ್ವರ್ ಕೈಕೊಟ್ಟಿತ್ತು. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ದೂರುಗಳನ್ನು ಸ್ವೀಕರಿಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.