ಗಜೇಂದ್ರಗಡ | ಚನ್ನಮ್ಮ ಮೂರ್ತಿ ತೆರವಿಗೆ ಮುಂದಾದ ಅಧಿಕಾರಿಗಳು: ಆಕ್ರೋಶ

ಗಜೇಂದ್ರಗಡ | ಚನ್ನಮ್ಮ ಮೂರ್ತಿ ತೆರವಿಗೆ ಮುಂದಾದ ಅಧಿಕಾರಿಗಳು: ಆಕ್ರೋಶ

ಗಜೇಂದ್ರಗಡ | ಚನ್ನಮ್ಮ ಮೂರ್ತಿ ತೆರವಿಗೆ ಮುಂದಾದ ಅಧಿಕಾರಿಗಳು: ಆಕ್ರೋಶ

ಗಜೇಂದ್ರಗಡ: ಪಟ್ಟಣದ ಜನತಾ ಪ್ಲಾಟ್‌ನ ರಾಷ್ಟ್ರೀಯ ದ್ವಿಪಥ ಹೆದ್ದಾರಿಯಲ್ಲಿರುವ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಲೋಕಾರ್ಪಣೆಗೊಳ್ಳದ ರಾಣಿ ಚನ್ನಮ್ಮನ ಮೂರ್ತಿಯನ್ನು ರಾತ್ರೋರಾತ್ರಿ ತೆರವಿಗೆ ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಜನತಾ ಪ್ಲಾಟ್ ನಿವಾಸಿಗಳು, ಕನ್ನಡಪರ ಸಂಘಟನೆಗಳ ಹಾಗೂ ವಿವಿಧ ಸಮಾಜಗಳ ಮುಖಂಡರು ಭಾನುವಾರ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಭಾನುವಾರ ನಸುಕಿನ 3 ಗಂಟೆ ಸುಮಾರಿಗೆ ಕಂದಾಯ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಏಕಾಏಕಿ ಮೂರ್ತಿ ತೆರವಿಗೆ ಮುಂದಾಗಿದ್ದನ್ನು ಸ್ಥಳೀಯರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ತಡೆದರು. ಬಳಿಕ ವಿಷಯ ತಿಳಿಯುತ್ತಿದ್ದಂತೆ ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ವೃತ್ತಕ್ಕೆ ಆಗಮಿಸಿ ವೃತ್ತದಲ್ಲಿ ಶಾಮಿಯಾನ ಹಾಕಿ ಧರಣಿ ನಡೆಸಿದರು.

‘ಮೂರ್ತಿ ತೆರವಿಗೆ ಮುಂದಾಗಿದ್ದ ಅಧಿಕಾರಿಗಳು ಸ್ಥಳಕ್ಕೆ ಬಂದು ಮೂರ್ತಿ ತೆರವಿಗೆ ಕಾರಣಗಳನ್ನು ತಿಳಿಸುವುದರ ಜೊತೆಗೆ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಮಾಜಿ ಸಚಿವ ಕಳಕಪ್ಪ ಬಂಡಿ ಆಗಮಿಸಿ, ‘ಜನತಾ ಪ್ಲಾಟ್‌ನಲ್ಲಿನ ಈ ವೃತ್ತ 3-4 ದಶಕಗಳಿಂದ ರಾಣಿ ಚನ್ನಮ್ಮ ವೃತ್ತವೆಂದು ಜನಜನಿತವಾಗಿದೆ. ಈ ವೃತ್ತವನ್ನು ಯಾವ ರಾಜಕಾರಣಿ, ಶಾಸಕ, ಸಚಿವರೂ ಉದ್ಘಾಟನೆಗೊಳಿಸಿಲ್ಲ. ಇಲ್ಲಿನ ಬಡಾವಣೆಯ ಎಲ್ಲ ಸಮುದಾಯಗಳ ಬಡ ಜನರು ಸ್ಥಾಪಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ, ತಹಶೀಲ್ದಾರ್‌ ಹಾಗೂ ಪಿಎಸ್‌ಐ ಮೇಲಧಿಕಾರಿಗಳ ಗಮನಕ್ಕೆ ತರದೇ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮನ ಮೂರ್ತಿ ತೆರವಿಗೆ ಮುಂದಾಗಿದ್ದು ಮೂರ್ಖತನದ ಪರಮಾವಧಿಯಾಗಿದೆ. ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಪ್ರಭು ಚವಡಿ ಮಾತನಾಡಿ, ‘ಜಾತಿ ಭೇದವಿಲ್ಲದೆ ಜನತಾ ಪ್ಲಾಟಿನ ಎಲ್ಲ ಸಮಾಜಗಳ ಜನರು ಸೇರಿ ನಾಲ್ಕು ದಶಕಗಳ ಹಿಂದೆ ಈ ವೃತ್ತಕ್ಕೆ ರಾಣಿ ಚನ್ನಮ್ಮನ ಹೆಸರಿಟ್ಟು ತಮ್ಮ ಸ್ವಂತ ಖರ್ಚಿನಲ್ಲಿ ವೃತ್ತ ಸ್ಥಾಪಿಸಿದ್ದರು. ಈಚೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವೃತ್ತ ತೆರವಿಗೆ ಸ್ಥಳೀಯರು ನಿರಾಕರಿಸಿದ್ದರು. ಹೆದ್ದಾರಿ ಪ್ರಾಧಿಕಾರ ವೃತ್ತ ತೆರವುಗೊಳಿಸಿ ಕಾಮಗಾರಿ ಮುಗಿದ ಬಳಿಕ ವೃತ್ತ ನಿರ್ಮಿಸಿ ಕೊಡುವ ಭರವಸೆ ನೀಡಿತ್ತು. ಅದರಂತೆ ಹೊಸದಾಗಿ ಕಟ್ಟೆ ನಿರ್ಮಿಸಿ ಕೊಟ್ಟಿದ್ದರು. 15 ದಿನಗಳ ಹಿಂದೆ ಈ ಕಟ್ಟೆ ಮೇಲೆ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಿ, ಅದ್ದೂರಿಯಾಗಿ ಅನಾವರಣಗೊಳಿಸುವ ಯೋಜನೆ ಹೊಂದಿದ್ದೆವು. ಆದರೆ ರಾತ್ರೋರಾತ್ರಿ ಮೂರ್ತಿ ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಹರಿಹಾಯ್ದರು.

‘ಶನಿವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಸಮಾಜದ ಮುಖಂಡರ ಸಭೆ ಕರೆದು ಸಭೆಯಲ್ಲಿ ವೃತ್ತದಲ್ಲಿನ ಮೂರ್ತಿ ತೆರವಿಗೆ ಮೇಲಧಿಕಾರಿಗಳಿಂದ ಒತ್ತಡವಿದೆ. ಹೀಗಾಗಿ ನಾವು ತೆರವುಗೊಳಿಸುತ್ತೇವೆ ಎಂದರು. ವಿಧಾನ ಸಭಾಧ್ಯಕ್ಷರಾದ ಜಿ.ಎಸ್.ಪಾಟಿಲ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ ಅವರು ಊರಲ್ಲಿಲ್ಲ. ನಮಗೆ ಕಾಲಾವಕಾಶ ಕೊಡಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡು ಬಂದಿದ್ದೆವು. ಆದರೆ ರಾತ್ರೋರಾತ್ರಿ ತೆರವುಗೊಳಿಸಲು ಮುಂದಾಗುತ್ತಾರೆಂದು ಊಹಿಸಿರಲಿಲ್ಲ. ಸ್ಥಳೀಯರು ಹಾಗೂ ಕನ್ನಡಪರ ಸಂಘಟನೆ ಮುಖಂಡರು ತಡೆಯದಿದ್ದರೆ ದೊಡ್ಡ ವಿವಾದ ಸೃಷ್ಟಿಯಾಗುತ್ತಿತ್ತು. ಅಧಿಕಾರಿಗಳಿಗೆ ಒತ್ತಡ ಹಾಕಿದವರು ಯಾರೆಂಬುದು ತಿಳಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‌ಧರಣಿಯಲ್ಲಿ ಬಿ.ಎಂ. ಸಜ್ಜನರ, ಬಸವರಾಜ ಪುರ್ತಗೇರಿ, ಆರ್.ಕೆ.ಚವ್ಹಾಣ, ಲಿಂಗರಾಜ ಪಾಟೀಲ, ಮುತ್ತಣ್ಣ ಮ್ಯಾಗೇರಿ, ಉಮೇಶ ಮಲ್ಲಾಪುರ, ಉಮೇಶ ಪಾಟೀಲ, ಮುತ್ತು ಕಡಗದ, ಸುಭಾಸ್ ಮ್ಯಾಗೇರಿ, ಸಂತೋಷ ವಸ್ತ್ರದ, ಬಸವರಾಜ ಬಂಕದ, ಚಂದ್ರಶೇಖರ ಚಳಗೇರಿ, ದೇವಪ್ಪ ಮಡಿವಾಳರ, ವಿನಾಯಕ ಜರತಾರಿ, ಕರಣ ಬಂಡಿ, ಶಿವರಾಜ ಬಂಡಿ, ಬಸವರಾಜ ಕಡಬಲಕಟ್ಟಿ, ಸುರೇಶ ಜಾಲಿಹಾಳ, ಮಹಾಂತೇಶ ಮಳಗಿ ಇದ್ದರು.

ಮೂರ್ತಿ ಸ್ಥಾಪನೆ: ಅರ್ಜಿ ಸಲ್ಲಿಸಲು ಸೂಚನೆ

ಧರಣಿ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಪ್ರವೀಣಕುಮಾರ ಆಗಮಿಸಿ ಅಹವಾಲು ಆಲಿಸಿದರು.

ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಮಾತನಾಡಿ, ‘ಗಜೇಂದ್ರಗಡದಲ್ಲಿ ಇಂದು ಬೆಳಗಿನ ಜಾವ ನಡೆದ ಘಟನೆ ಕುರಿತು ಬೆಳಿಗ್ಗೆ ಮೂವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಘಟನೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ನಮ್ಮ ಅಧಿಕಾರಿಗಳು ಹೀಗಿದ್ದಾರೆಯೇ ಎಂದು ಬೇಸರ ವ್ಯಕ್ತಪಡಿಸಿದರು. ಮಹನೀಯರ ಮೂರ್ತಿ ತೆರವುಗೊಳಿಸುವುದು ಸರಿಯಾದ ಕ್ರಮವಲ್ಲ. ಮೇಲಧಿಕಾರಿಗಳ ಗಮನಕ್ಕೂ ತರದೇ ಕ್ರಮಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಪುರಸಭೆ ಆಡಳಿತಾಧಿಕಾರಿ ನಾನೇ ಇರುವುದರಿಂದ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಶೋಕಾಸ್‌ ನೋಟಿಸ್‌ ನೀಡಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು.

‘ನಾಳೆ ಯಾರಾದರೂ ಮೂರ್ತಿ ಸ್ಥಾಪನೆಗೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿ, ನಾನು ತಕ್ಷಣ ಠರಾವು ಪಾಸ್‌ ಮಾಡಿ ಪರವಾನಗಿ ನೀಡುತ್ತೇನೆ. ಅಲ್ಲದೇ ವೃತ್ತಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಿದ್ಧರಿದ್ದೇವೆ. ಚನ್ನಮ್ಮ ಜಯಂತಿಯಂದು ಇಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ. ನಾನೂ ಭಾಗವಹಿಸುತ್ತೇನೆ. ಘಟನೆ ಕುರಿತು ಇಲಾಖೆಯಿಂದ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದರು.

ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾತನಾಡಿ, ‘ಸಾರ್ವಜನಿಕ ಸ್ಥಳದಲ್ಲಿ ಒಬ್ಬರ ಮೂರ್ತಿ ಪ್ರತಿಷ್ಠಾಪಿಸುತ್ತೇವೆಂದರೆ ಅದಕ್ಕೆ ತನ್ನದೇ ಆದ ಹಿನ್ನೆಲೆ ಇರುತ್ತದೆ. ಅದು ರಾಷ್ಟ್ರ ಮಾತೆ ಮೂರ್ತಿ ತೆರವಿಗೆ ಮುಂದಾಗಿರುವುದು ನಿಮ್ಮೆಲ್ಲರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದನ್ನು ಅರಿತಿದ್ದೇವೆ. ಈ ಘಟನೆ ಅಕ್ಷಮ್ಯ. ತಪ್ಪಿತಸ್ಥ ಅಧಿಕಾರಿ
ವಿರುದ್ಧ ನಮ್ಮ ಇಲಾಖೆಯಿಂದ ಕ್ರಮ ಕೈಗೊಳ್ಳುತ್ತೇವೆ. ಘಟನೆ ಕುರಿತು ಇಲಾಖೆಯಿಂದ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪಿಎಸ್‌ಐ ಪ್ರಕಾಶ ಡಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ