ಯುಜಿಡಿ ಮಿಸ್ಸಿಂಗ್‌ ಲೈನ್‌ ಟೆಂಡರ್‌ ಎಡವಟ್ಟು| ಸಿಡಿದೆದ್ದ ಶಾಸಕ: ತನಿಖೆಗೆ ಸೂಚನೆ

ಯುಜಿಡಿ ಮಿಸ್ಸಿಂಗ್‌ ಲೈನ್‌ ಟೆಂಡರ್‌ ಎಡವಟ್ಟು| ಸಿಡಿದೆದ್ದ ಶಾಸಕ: ತನಿಖೆಗೆ ಸೂಚನೆ

ಯುಜಿಡಿ ಮಿಸ್ಸಿಂಗ್‌ ಲೈನ್‌ ಟೆಂಡರ್‌ ಎಡವಟ್ಟು| ಸಿಡಿದೆದ್ದ ಶಾಸಕ: ತನಿಖೆಗೆ ಸೂಚನೆ

ಕೋಲಾರ: ನಗರದಲ್ಲಿ ಕೈಬಿಟ್ಟು ಹೋಗಿರುವ ಯುಜಿಡಿ (ಒಳಚರಂಡಿ) ಮಿಸ್ಸಿಂಗ್‌ ಲೈನ್‌ ಸಂಪರ್ಕ ಸಂಬಂಧ 36 ಕಿ.ಮೀ ವ್ಯಾಪ್ತಿಗೆ ಬದಲಾಗಿ ಕೇವಲ 15 ಕಿ.ಮೀ ಕಾಮಗಾರಿ‌ಗೆ ಟೆಂಡರ್‌ ಮಾಡಿ ಭಾರಿ ಎಡವಟ್ಟು ಎಸಗಿದ್ದು, ಶಾಸಕ ಕೊತ್ತೂರು ಮಂಜುನಾಥ್‌ ಆಕ್ರೋಶದ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ ಆದೇಶಿಸಿದರು.

ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅದಕ್ಕೆ ₹ 60 ಕೋಟಿ ಅನುದಾನವೂ ಬಿಡುಗಡೆಯಾಗಿದೆ.

ಒಟ್ಟು 67 ಕಿ.ಮೀ ಯುಜಿಡಿ ಮಿಸ್ಸಿಂಗ್ ಲೈನ್‌ಗಳ ಪೈಕಿ ಮೊದಲ ಹಂತದಲ್ಲಿ 36 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ ಯೋಜನೆ ಇದಾಗಿದೆ. ಈ ಹಿಂದೆ ಅಮೃತ್ ಯೋಜನೆಯಡಿ ಅರ್ಧಕ್ಕೆ ನಿಂತು ಹದಗೆಟ್ಟಿದ್ದು ಯುಜಿಡಿ ಕಾಮಗಾರಿಯೂ ಮಿಸ್ಸಿಂಗ್ ಆಗಿತ್ತು.

ಈ ಯೋಜನೆಯಲ್ಲಿ ನಡೆದಿರುವ ಕಾಮಗಾರಿ ವಿಚಾರವಾಗಿ ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಕೊತ್ತೂರು ಅಕ್ಷರಶಃ ಸಿಡಿದೆದ್ದರು. ಈ ಬಗ್ಗೆ ಚರ್ಚೆಯೇ ಬೇಡ; ಯೋಜನೆಯನ್ನೇ ರದ್ದು ಮಾಡಿ ಎಂದು ಪಟ್ಟು ಹಿಡಿದರು. ‘ಈಗಾಗಲೇ ನಗರದ ಹಲವೆಡೆ ಯುಜಿಡಿ ಸಮಸ್ಯೆ ಆಗಿದೆ. ನಿಮ್ಮ ಮಾತು ಕೇಳಿದರೆ ವಾರ್ಡ್‌ಗಳಲ್ಲಿನ ಜನ ಸಿಡಿದೇಳುತ್ತಾರೆ’ ಎಂದು ಗರಂ ಆದರು.

₹ 60 ಕೋಟಿ ಅನುದಾನ: ನಗರದಲ್ಲಿ 36 ಕಿ.ಮೀ ಮಿಸ್ಸಿಂಗ್‌ ಲೈನ್‌ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿದ್ದು, ₹ 60 ಕೋಟಿ ಅನುದಾನ ನಿಗದಿಪಡಿಸಿರುವುದಾಗಿ ಕೊತ್ತೂರು ಮಂಜುನಾಥ್‌ ಹೇಳಿದರು. ಹಳೇ ಪೈಪ್ ಲೈನ್ ಚಿಕ್ಕದಿದ್ದು, ದೊಡ್ಡದು ಮಾಡಬೇಕು. ದೊಡ್ಡ ಪೈಪ್‌‌ಗೆ ಲಿಂಕ್ ಮಾಡಬೇಕು. ಹೊಸ ಲೈನ್ ನಿರ್ಮಿಸಬೇಕು. ಈ ಯೋಜನೆಗೆ ವಿಧಾನಸೌಧದಲ್ಲಿ ಕಾಡಿಬೇಡಿ ಅನುದಾನ ತಂದಿರುವುದಾಗಿ ಹೇಳಿದರು.

‌ಆದರೆ, ಈ ಸಂಬಂಧ ಸರ್ವೆ ನಡೆ ಸಿದ್ದು, 9+6 (ಒಟ್ಟು 15) ಕಿ.ಮೀ ಕಾಮ ಗಾರಿಗೆ ಟೆಂಡರ್‌ ಆಗಿರುವುದಾಗಿ ಒಳ ಚರಂಡಿ ಮತ್ತು ನೈರ್ಮಲ್ಯ ಇಲಾಖೆಯ ಯೋಜನಾಧಿಕಾರಿ ವಿನಯ್‌ ಹೇಳಿದರು.

ಈ ಮಾತು ಕೇಳಿ ‌ಸಿಟ್ಟಾದ ಕೊತ್ತೂರು, ‘36 ಕಿ.ಮೀ ಯುಜಿಡಿ ಮಿಸ್ಸಿಂಗ್‌ ಲೈನ್‌ ಕಾಮಗಾರಿಗೆ ಅಂದಾಜುಪಟ್ಟಿ ಆಗಿದೆ. ಆದರೆ, ಅವತ್ತು ಮಾತನಾಡಿದ್ದು ಒಂದು, ಇವತ್ತು ನೀವು ಹೇಳುತ್ತಿರುವುದು ಇನ್ನೊಂದು.‌ ₹ 60 ಕೋಟಿ ಅನುದಾನ ಏನಾಯಿತು? 36 ಕಿ.ಮೀನಿಂದ ಏಕೆ 15 ಕಿ.ಮೀಗೆ ಬಂದಿದೆ? ಯೋಜನೆ ‌ರದ್ದು‌ಮಾಡಿ. ನೀವು ‌ಹೇಳಿದ್ದನ್ನು ಕೇಳಲು ನಾನು ಇಲ್ಲಿಗೆ ಬಂದಿಲ್ಲ. ಈ ರೀತಿಯಾದರೆ ನೋವಾಗುತ್ತದೆ. ಎಲ್ಲಾ ಆದ ಮೇಲೆ ಏಕೆ‌ ಸರ್ವೆ ಮಾಡಿದಿರಿ? ನಿಮ್ಮ ಸಹವಾಸ ಬೇಡ’ ಎಂದರು.

‘ನೀವು ಮಾಡುವ ಕೆಲಸಕ್ಕೆ ಪದ್ಮವಿಭೂಷಣ ಪ್ರಶಸ್ತಿ ಕೊಡಬೇಕು.ಈ ಸಂಬಂಧ ಪ್ರಧಾನಿಗೆ ಪತ್ರ ಬರೆಯುತ್ತೇನೆ’ ಎಂದು ವ್ಯಂಗ್ಯ ಮಾಡಿದರು.

ಜಿಲ್ಲಾಧಿಕಾರಿ ರವಿಕುಮಾರ್‌ ಮಾತನಾಡಿ, ‘ಏಕೆ ಬರೀ 15 ಕಿ.ಮೀ ಕಾಮಗಾರಿಗೆ ಟೆಂಡರ್‌ ಆಗಿದೆ? ಉಳಿದಿದ್ದು ಏನಾಯಿತು? ಏಕೆ ಈ ವ್ಯತ್ಯಾಸ? ಏಕೆ ಉಳಿದ ವ್ಯಾಪ್ತಿ ಕಾಮಗಾರಿ ಟೆಂಡರ್ ಆಗಿಲ್ಲ’ ಎಂದು ಪ್ರಶ್ನಿಸಿದರು.

ಅವರು ಜಿಲ್ಲಾ ನಗರಕೋಶದ ಅಧಿಕಾರಿ ಅಂಬಿಕಾ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಎರಡು ‌ದಿನಗಳಲ್ಲಿ ಈ ಸಂಬಂಧ ಸಭೆ ಆಗಬೇಕು. ತಾವು ಈ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಸಮಗ್ರ ತನಿಖೆ ನಡೆಸಿ ವರದಿ ಕೊಡಿ’ ಎಂದು ಸೂಚನೆ ನೀಡಿದರು.

ನ್ಯಾಯಾಲಯದ ವಿಚಾರ ಎತ್ತಿದ ನಗರಸಭೆ ಎಇಇ ಗಂಗಾಧರ್‌ ಮೇಲೂ ಆಕ್ರೋಶ ವ್ಯಕ್ತಪಡಿಸಿದರು.

‘ಯೋಜನೆಗೆ ನ್ಯಾಯಾಲಯದ ತಡೆಯಾಜ್ಞೆ ‌ಇದೆಯೇ? ಎಲ್ಲಿದೆ‌ ಆದೇಶದ ಕಾಪಿ? ತಡೆಯಾಜ್ಞೆಗಾಗಿ ತಾವು ಕಾಯುತ್ತಿದ್ದೀರಾ?’ ಎಂದು ಹರಿಹಾಯ್ದರು.

ನಗರದಲ್ಲಿ ನಡೆಯುತ್ತಿರುವ ಹೊಸ ಮಾರುಕಟ್ಟೆ ನಿರ್ಮಾಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಯಿತು. ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ನಿರ್ಮಿತಿ ಕೇಂದ್ರದ ಅಶ್ವಿನ್‌ ಅವರನ್ನು ಶಾಸಕ ಹಾಗೂ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.

‘ಅಶ್ವಿನ್‌ ಏಕೋ ಕೆಲಸದಲ್ಲಿ ದುರ್ಬಲರಾದಂತೆ ಕಾಣುತ್ತಿದ್ದಾರೆ. ಬೇಗ ಕೆಲಸ ಮಾಡಿ’ ಎಂದು ಕೊತ್ತೂರು ತಾಕೀತು ಮಾಡಿದರು.

ಈಚೆಗೆ ಮಳೆ ಬಂದಾಗ ಶಾರದಾ ಟಾಕೀಸ್‌ ಬಳಿ ಮನೆಗಳಿಗೆ ನೀರು ನುಗ್ಗಿದ ವಿಚಾರವನ್ನು ಜಿಲ್ಲಾಧಿಕಾರಿ ಪ್ರಸ್ತಾಪಿಸಿದರು. ದೂರವಾಣಿ ಕರೆ ಸ್ವೀಕರಿಸದ ಆರೋಗ್ಯಾಧಿಕಾರಿ ಸಂಜಯ್‌ ವಿರುದ್ಧ ಗರಂ ಆದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ನಗರಸಭೆ ಆಯುಕ್ತ ವೆಂಕಟೇಶ್‌ ನಾಗನೂರ ಹಾಗೂ ಅಧಿಕಾರಿಗಳು ಇದ್ದರು.

ನಿವೇಶದಲ್ಲಿ ತ್ಯಾಜ್ಯ; ಖಾತೆ ರದ್ದತಿ ಎಚ್ಚರಿಕೆ

ಕೋಲಾರ ನಗರಸಭೆ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ಕಸದ ಸಮಸ್ಯೆ ಹೆಚ್ಚಿದ್ದು, ದಂಡ ವಿಧಿಸುವ ಹಾಗೂ ಪದೇಪದೇ ಪುನಾರವರ್ತನೆಯಾದರೆ ಖಾತೆ ರದ್ದು ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.

ಈ ವಿಚಾರ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌, ‘ಕೆಲ ನಿವೇಶನಗಳಲ್ಲಿ ಎಂಟೆಂಟು ಅಡಿ ಮರ ಬೆಳೆದಿದೆ. ಸೊಳ್ಳೆ ಕಾಟ ಹೆಚ್ಚಿದ್ದು, ಹಾವುಗಳು ಸೇರಿದಂತೆ ನೂರಾರು ಕ್ರಿಮಿಕೀಟ ಸೇರಿಕೊಂಡಿವೆ. ಅಕ್ಕಪಕ್ಕದ ಮನೆಗಳಿಗೆ ತೊಂದರೆ ಆಗುತ್ತಿದೆ. ನಿವೇಶನಗಳ ಮಾಲೀಕರು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ನಗರಭೆಯಿಂದ ಸ್ವಚ್ಛಗೊಳಿಸಿದರೆ ಮಾಲೀಕರು ಹಣ ಪಾವತಿಸಬೇಕು’ ಎಂದು ಸೂಚನೆ ನೀಡಿದರು.

ಈಗಾಗಲೇ ಈ ಸಂಬಂಧ ಸರ್ಕಾರದ ಸೂಚನೆ ಇದೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವಿದೆ. ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ನಿವೇಶನ ಮಾಲೀಕರಿಗೆ ₹ 2 ಸಾವಿರ, 3 ಸಾವಿರ ದಂಡ ವಿಧಿಸಲಾಗುವುದು ಎಂದರು.

ಶಾಸಕ ಕೊತ್ತೂರು ಮಂಜುನಾಥ್‌ ಮಾತನಾಡಿ, ‘ಬರೀ ದಂಡವಲ್ಲ; ನಿವೇಶನದಲ್ಲಿನ ತ್ಯಾಜ್ಯ ಸ್ವಚ್ಛಗೊಳಿಸದಿದ್ದರೆ ಖಾ‌ತೆ ರದ್ದು ಮಾಡಬೇಕು’ ಎಂದು ಹೇಳಿದರು.

ಕೇಸ್‌ ದಾಖಲು; ಕಸಾಯಿಖಾನೆಗಳಿಗೆ ಎಚ್ಚರಿಕೆ

ಕೋಲಾರ ನಗರದಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳಿದ್ದು ಚರಂಡಿ, ಕೆರೆ ಸೇರಿದಂತೆ ಎಲ್ಲಿ ಬೇಕೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಕಂಡುಬರುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ ಹೇಳಿದರು.

ಕುರಿ, ಕೋಳಿ ಇರಬಹುದು, ಬೇರೆ ಏನೇ ಇರಬಹುದು; ಪರವಾನಗಿ ಇಲ್ಲದೆ ಅವಕಾಶ ನೀಡಬಾರದು. ಜನರಿಗೆ ಇದರಿಂದ ತೊಂದರೆ ಆಗುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಕೊತ್ತೂರು ಮಂಜುನಾಥ್‌ ಮಾತನಾಡಿ, ‘ರಸ್ತೆಯಲ್ಲಿಯೇ ಕೋಳಿ, ಕುರಿ ಮಾಂಸ ಮಾರಾಟ ಮಾಡುತ್ತಿದ್ದು, ಹೆಚ್ಚಿನವರು ಪರವಾನಗಿ ಪಡೆದೇ ಇಲ್ಲ. ನೈರ್ಮಲ್ಯವನ್ನೂ ಕಾಪಾಡಿಕೊಳ್ಳದೆ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮೀನಿನ ಅಂಗಡಿವರೂ ಪರವಾನಗಿ ಪಡೆದಿಲ್ಲ, ಕಸಾಯಿ ಖಾನೆಯವರೂ ಪರವಾನಗಿ ಪಡೆದಿಲ್ಲ. ಇಂಥ ಅಂಗಡಿಗಳನ್ನು ಮುಚ್ಚಿಸಬೇಕು. ಅಕ್ರಮವಾಗಿ ನಡೆಸುವಾಗ ನೋಟಿಸ್‌ ಏಕೆ ನೀಡಬೇಕು? ನೇರವಾಗಿ ಪ್ರಕರಣ ದಾಖಲಿಸಿ’ ಎಂದು ಸೂಚನೆ ನೀಡಿದರು.

ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಕಾಮಗಾರಿ, ಅಸಮಾಧಾನ

ಕೆಲ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದರೂ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಹಾಗೂ ಶಿಷ್ಟಾಚಾರ ಪಾಲಿಸದೆ ಗುಪ್ತವಾಗಿ ಕಾಮಗಾರಿ ಆರಂಭಿಸಲು ಯತ್ನಿಸಲಾಗುತ್ತಿದೆ. ಇಂತಹ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಕೊತ್ತೂರು ಮಂಜುನಾಥ್‌ ಹಾಗೂ ಎಂ.ಎಲ್‌.ಅನಿಲ್‌ ಕುಮಾರ್‌ ಹೇಳಿದರು.

ಶಾಸಕರ ಈ ನಿಲುವಿಗೆ ದನಿಗೂಡಿಸಿದ ಜಿಲ್ಲಾಧಿಕಾರಿ ರವಿಕುಮಾರ್‌, ‘ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದರು. ಯಾವುದೇ ಕಾಮಗಾರಿ ಪ್ರಾರಂಭಿಸುವ ಮುನ್ನ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತರುವುದು ಕಡ್ಡಾಯ’ ಎಂದರು.

ಇದನ್ನು ಮೀರಿ ಕಾಮಗಾರಿ ಆರಂಭಿಸುವ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪ್ರಮುಖ ನಿರ್ಣಯ

l ಪಾದಚಾರಿ ಮಾರ್ಗದ ಒತ್ತುವರಿ ತೆರವು

l ಮಿಸ್ಸಿಂಗ್‌ ಲೈನ್‌ ಯುಜಿಡಿ ಕಾಮಗಾರಿ ಟೆಂಡರ್‌ ಎಡವಟ್ಟು ತನಿಖೆ

l ನಿವೇಶನಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದಿದ್ದರೆ ದಂಡ, ಖಾತೆ ರದ್ದು

l ಅಕ್ರಮ ಕಸಾಯಿಖಾನೆಗಳ ವಿರುದ್ಧ ಪ್ರಕರಣ ದಾಖಲು

l ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ

l ನಗರಸಭೆ ಆಸ್ತಿಗಳಿಗೆ ಫಲಕ ಅಳವಡಿಕೆ, ತಂತಿ ಬೇಲಿ ನಿರ್ಮಾಣ

l ಕೋಲಾರ ನಗರವನ್ನು ಪ್ಲಾಸ್ಟಿಕ್ ಮುಕ್ತ, ಸ್ವಚ್ಛ, ಸುಂದರ ಮಾಡುವುದು

l ಅ.2ರಂದು ಬೆಳಿಗ್ಗೆ 6 ಗಂಟೆಗೆ ನಗರದಲ್ಲಿ ಸ್ವಚ್ಛತಾ ಅಭಿಯಾನ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ