
ಚಿಂತಾಮಣಿ | ಅಂತರ್ಜಾತಿ ವಿವಾಹ: ಪ್ರೋತ್ಸಾಹ ಧನಕ್ಕೆ ಕೊಕ್ಕೆ
ಚಿಂತಾಮಣಿ: ಅಂತರ್ಜಾತಿ ವಿವಾಹ ಉತ್ತೇಜಿಸಲು ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನಕ್ಕೆ ಎರಡು ವರ್ಷದಿಂದ ಅನುದಾನ ಬಿಡುಗಡೆಯಾಗದೆ, ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಸಿಗುತ್ತಿಲ್ಲ.
ತಾಲ್ಲೂಕಿನಲ್ಲಿ ಕಳೆದ 6 ವರ್ಷದಲ್ಲಿ 158 ಮಂದಿ ಅಂತರ್ಜಾತಿ ವಿವಾಹಿತರು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. 154 ಮಂದಿ ಅರ್ಹತೆ ಹೊಂದಿದ್ದರು. ಅವರಲ್ಲಿ 92 ಮಂದಿ ಪ್ರೋತ್ಸಾಹ ಧನ ಪಡೆದುಕೊಂಡಿದ್ದಾರೆ. ಆದರೆ, 62 ಮಂದಿಗೆ ₹1.65 ಕೋಟಿ ಪ್ರೋತ್ಸಾಹ ಧನ ಬಾಕಿ ಉಳಿದಿದೆ ಎಂದು ಇಲಾಖೆಯ ಅಂಕಿಅಂಶ ತಿಳಿಸುತ್ತವೆ.
ಹಿಂದೂ ಧರ್ಮದ ವಿವಿಧ ಜಾತಿಯ ಯುವಕ ಅಥವಾ ಯುವತಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರನ್ನು ವಿವಾಹವಾದರೆ ಸರ್ಕಾರದಿಂದ ಸಹಾಯ ಧನ ನೀಡುವ ಯೋಜನೆ ಇದಾಗಿದೆ.
ತಾಲ್ಲೂಕಿನಲ್ಲಿ 2023-24 ರವರೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಿದೆ. 2024-25ರಲ್ಲಿ 31 ಮಂದಿ ಅರ್ಜಿ ಸಲ್ಲಿಸಿದ್ದು, 16 ಮಂದಿ ಪ್ರೋತ್ಸಾಹ ಧನ ಪಡೆದಿದ್ದಾರೆ.
2025-26ರಲ್ಲಿ 37 ಮಂದಿ ಅರ್ಜಿ ಸಲ್ಲಿಸಿದ್ದು, ಎಲ್ಲಾ ಅರ್ಜಿಗಳು ಅರ್ಹತೆ ಹೊಂದಿದೆ. ಆದರೆ, ಅನುದಾನದ ಕೊರತೆಯಿಂದ ಯಾರಿಗೂ ಹಣ ಪಾವತಿಯಾಗಿಲ್ಲ. 2026-27ನೇ ಸಾಲಿನಲ್ಲಿ ಇದುವರೆಗೆ 10 ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ.
ಅಂತರ್ಜಾತಿ ವಿವಾಹವಾಗಿ 2 ವರ್ಷ ಕಳೆದಿವೆ. ವಿವಾಹ ನೋಂದಣಿಯಾದ ಒಂದು ತಿಂಗಳಲ್ಲೇ ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಜಿಯನ್ನು ಪುರಸ್ಕರಿಸಿದ್ದಾರೆ. ಆದರೆ, ಪ್ರೋತ್ಸಾಹ ಧನ ಮಾತ್ರ ಇದುವರೆಗೂ ದೊರೆತಿಲ್ಲ ಎಂಬುದು ಅರ್ಜಿ ಸಲ್ಲಿಸಿದವರೊಬ್ಬರ ಅಳಲಾಗಿದೆ.
ಪ್ರೋತ್ಸಾಹ ಧನ ಎಷ್ಟು: ಪರಿಶಿಷ್ಟ ಜಾತಿಯ ಪುರುಷ ಬೇರೆ ಜಾತಿಯ ಮಹಿಳೆಯನ್ನು ಮದುವೆಯಾದರೆ ದಂಪತಿಗೆ ₹2.5 ಲಕ್ಷ, ಪರಿಶಿಷ್ಟ ಜಾತಿಯ ಮಹಿಳೆಯನ್ನು ಅನ್ಯ ಜಾತಿಯ ಪುರುಷ ವಿವಾಹವಾದರೆ ಆ ದಂಪತಿಗೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಅನುದಾನ ಬಿಡುಗಡೆ ಬಳಿಕ ಹಣ ಪಾವತಿ
ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಡಿ 2023-24ರವರೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಮೊತ್ತ ಪಾವತಿಯಾಗಿದೆ. 2024-25 ರಲ್ಲಿ 16 ಜನರ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 62 ಮಂದಿ ಪ್ರೋತ್ಸಾಹಧನ ಬಾಕಿ ಉಳಿದಿದೆ. ಅನುದಾನ ಬಿಡುಗಡೆಯಾದ ಬಳಿಕ ಜೇಷ್ಠತೆ ಆಧಾರದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿ 2023-24ರವರೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಮೊತ್ತ ಪಾವತಿಯಾಗಿದೆ. 2024-25 ರಲ್ಲಿ 16 ಜನರ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 62 ಮಂದಿ ಪ್ರೋತ್ಸಾಹಧನ ಬಾಕಿ ಉಳಿದಿದೆ. ಅನುದಾನ ಬಿಡುಗಡೆಯಾದ ಬಳಿಕ ಜೇಷ್ಠತೆ ಆಧಾರದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.