ಅಧಿಕಾರಿಗಳನ್ನು ಮನೆಗೆ ಕರೆಸಿ ಹಲ್ಲೆ ಆರೋಪ: ಹಟ್ಟಿಹೊಳಿ ವಿರುದ್ಧ ಪ್ರತಿಭಟನೆ

ಅಧಿಕಾರಿಗಳನ್ನು ಮನೆಗೆ ಕರೆಸಿ ಹಲ್ಲೆ ಆರೋಪ: ಹಟ್ಟಿಹೊಳಿ ವಿರುದ್ಧ ಪ್ರತಿಭಟನೆ

ಅಧಿಕಾರಿಗಳನ್ನು ಮನೆಗೆ ಕರೆಸಿ ಹಲ್ಲೆ ಆರೋಪ: ಹಟ್ಟಿಹೊಳಿ ವಿರುದ್ಧ ಪ್ರತಿಭಟನೆ

ಬೆಳಗಾವಿ: ‘ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಹೆಸ್ಕಾಂ ಅಧಿಕಾರಿಗಳನ್ನು ಮನೆಗೆ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿನ ಎಪಿಎಂಸಿ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಆರೋಪವನ್ನು ನಿರಾಕರಿಸಿರುವ ಚನ್ನರಾಜ, ‘ನಾನು ಹಲ್ಲೆ ಮಾಡಿಲ್ಲ, ಬುದ್ಧಿವಾದ ಹೇಳಿದ್ದೇನೆ’ ಎಂದಿದ್ದಾರೆ.

ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಡಿ.ದೀಪಕ್ ಹಾಗೂ ಸೆಕ್ಷನ್ ಅಧಿಕಾರಿ ರಾಜು ಚವ್ಹಾಣ ಅವರು, ‘ನಮ್ಮ ಮೇಲೆ ಚನ್ನರಾಜ ಹಲ್ಲೆ ಮಾಡಿದ್ದಾರೆ’ ಎಂದು ಠಾಣೆಯಲ್ಲಿ ದೂರು ನೀಡಿದರು. ಈ ವೇಳೆ ಹೆಸ್ಕಾಂ ಸಿಬ್ಬಂದಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಠಾಣೆ ಮುಂದೆ ಜಮಾಯಿಸಿ, ಚನ್ನರಾಜ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಫ್ಐಆರ್ ದಾಖಲಿಸಿಕೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.

ಮಾಧ್ಯಮಗಳ ಜೊತೆ ಮಾತನಾಡಿದ ಡಿ.ದೀಪಕ್, ‘ಬೆಳಗಾವಿ ತಾಲ್ಲೂಕಿನ ತಾರಿಹಾಳ ಗ್ರಾಮದ ಲಕ್ಷ್ಮೀ ಸ್ಟೋನ್ ಕ್ರಷರ್‌ನವರು ಮೂರು ತಿಂಗಳ ₹77,360 ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಗುರುವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ 9.30ಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಗೆ ಬರುವಂತೆ ಮಹಾಂತೇಶ ಹಿರೇಮಠ ಎಂಬುವವರು ಹೇಳಿದ್ದರು. ಅದರಂತೆ ನಾವು ಮನೆಗೆ ಹೋದಾಗ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಅವರೇ ಮಾತಿಗೆ ಕರೆದರು. ‘ನೀವು ಹೇಗೆ ವಿದ್ಯುತ್ ಕಡಿತಗೊಳಿಸಿದಿರಿ’ ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಂತರ ಸ್ವಲ್ಪ ಹೊತ್ತಿನಲ್ಲಿ ನನಗೆ ಮತ್ತು ರಾಜು ಚವ್ಹಾಣ ಇಬ್ಬರಿಗೂ ಹೊಡೆದರು’ ಎಂದು ಘಟನೆ ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚನ್ನರಾಜ, ‘ಕ್ರಷರ್ ಮಾಲೀಕರು ವಿದ್ಯುತ್‌ ಸಂಪರ್ಕ ಕಡಿತ ಮಾಡಿದ ಸಮಸ್ಯೆ ಹೇಳಿಕೊಂಡರು. ಅವರಿಗೆ ನೋಟಿಸ್ ಕೊಡಬೇಕಿತ್ತು. ಹಣ ತುಂಬದಿದ್ದಲ್ಲಿ, ಕಡಿತ ಮಾಡಿ ಎಂದು ಬುದ್ಧಿವಾದ ಹೇಳಿದ್ದೇನೆ. ಜತೆಗೆ, ರೈತರಿಗೆ ಕಾಲಮಿತಿಯಲ್ಲಿ ಟ್ರಾನ್ಸ್‌ಫಾರ್ಮರ್ ಬದಲಿಸಿ ಕೊಡಬೇಕು ಎಂದು ಹೇಳಿ ಕಳಿಸಿದ್ದೇನೆ ಅಷ್ಟೆ. ಇದೆಲ್ಲವೂ 60 ರೈತರ ಮುಂದೆಯೇ ನಡೆದಿದೆ’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ